ಪ್ರಿಯಕರನ ಜತೆ ಮನೆ ಬಿಟ್ಟು ಬಂದಿದ್ದ ಯುವತಿ; ಪಾಲಕರಿಗೆ ಹೆದರಿ ಆತ್ಮಹತ್ಯೆಗೆ ಯತ್ನ

suicide
Published on

ಬೆಂಗಳೂರು: ಪಾಲಕರು ತನ್ನನ್ನು ಪ್ರಿಯಕರನಿಂದ ದೂರ ಮಾಡುತ್ತಾರೆ ಎಂಬ ಕಾರಣಕ್ಕೆ ಯುವತಿಯೊಬ್ಬಳು ಪೊಲೀಸ್ ಠಾಣೆ ಮುಂಭಾಗದಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಆಂಧ್ರಪ್ರದೇಶದ ಕಡಪಾ ಮೂಲದ ಅರುಣಾ ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈಕೆಯ ವಿರುದ್ಧ ಆತ್ಮಹತ್ಯೆಗೆ ಯತ್ನ ಆರೋಪದಡಿ ಅಶೋಕನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅರುಣಾ ತನ್ನ ಊರಿನ ರಾಜ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಇವರ ಪ್ರೀತಿಗೆ ಎರಡು ಕಡೆಯ ಕುಟುಂಬದಿಂದ ವಿರೋಧ ಇತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಮನೆ ಬಿಟ್ಟು ನಗರಕ್ಕೆ ಬಂದಿದ್ದರು. ರಾಜ್ ತನಗೆ ಪರಿಚಯಸ್ಥರೊಬ್ಬರಿಗೆ ಕರೆ ಮಾಡಿ ಪ್ರಿಯತಮೆಯ ಜೊತೆ ಬಂದಿರುವ ವಿಷಯ ತಿಳಿಸಿದ್ದ. ಒಂದು ದಿನದ ಮಟ್ಟಿಗೆ ಉಳಿದುಕೊಳ್ಳಲು ಅವಕಾಶ ಮಾಡಿಕೊಡುವಂತೆ ಕೇಳಿದ್ದ. ಪೋಷಕರಿಂದ ಬೆದರಿಕೆ ಇರುವ ಬಗ್ಗೆ ಹೇಳಿಕೊಂಡಿದ್ದ. ಅವರ ಸಲಹೆ ಮೇರೆಗೆ ಮಹದೇವಪುರ ಠಾಣೆ ಪೊಲೀಸರನ್ನು ಸಂಪರ್ಕ ಮಾಡಿದ್ದರು.

ಈ ವೇಳೆ ಅಲ್ಲಿನ ಪೊಲೀಸರು, ಕಡಪಾ ಜಿಲ್ಲೆಯಲ್ಲಿ ಅರುಣಾ ನಾಪತ್ತೆಯಾಗಿರುವ ದೂರು ದಾಖಲಾಗಿದೆ. ಅಶೋಕನಗರ ಪೊಲೀಸ್ ಠಾಣೆಗೆ ಹೋಗುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆಯಲ್ಲಿ ಅಶೋಕನಗರ ಠಾಣೆಗೆ ಬಂದಿದ್ದಾರೆ. ಊರಿನಿಂದ ಪಾಲಕರು ಬರುತ್ತಿರುವ ಹಿನ್ನೆಲೆಯಲ್ಲಿ ಠಾಣೆ ಮುಂದೆ ಕಾಯುತ್ತಿದ್ದರು. ಈ ವೇಳೆ ಯುವತಿ ಹೇರ್ ಡೈ ಆಯಿಲ್ ಸೇವಿಸಿದ್ದಾಳೆ. ಕೆಲ ನಿಮಿಷಗಳ ಬಳಿಕ ವಾಂತಿ ಮಾಡಿಕೊಂಡಿದ್ದು, ವಿಚಾರಿಸಿದಾಗ ಆತ್ಮಹತ್ಯೆಗೆ ಯತ್ನಿಸಿರುವುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net