

ಒಟವಾ: ಸೋಪುಗಳ ಸಹಾಯದಿಂದ ಒಂದು ದೊಡ್ಡ ಕಟ್ಟಡವನ್ನೇ ಸ್ಥಳಾಂತರ ಮಾಡಲಾಯಿತು ಎಂದರೆ ನೀವು ನಂಬುತ್ತೀರಾ? ಈ ಮಾತನ್ನ ಯಾರೂ ಕೂಡ ನಂಬುವುದಿಲ್ಲ. ಕೇಳಲು ಇದು ತುಂಬಾ ವಿಚಿತ್ರ ಎನಿಸಿದರೂ ಇದು ನಡೆದಿರುವುದಂತೂ ಸತ್ಯ.
ಹೌದು, ಕೆನಡಾದ ನೋವಾ ಸ್ಕಾಟಿಯಾ ಪ್ರಾಂತ್ಯದ ಹಲಿಫಾಕ್ಸ್ನಲ್ಲಿರುವ 220 ಟನ್ ತೂಕದ ಬೃಹತ್ ಹೋಟೆಲ್ ಅನ್ನು 700 ಬಾರ್ ಸೋಪ್ಗಳ ಸಹಾಯದಿಂದ ಯಶಸ್ವಿಯಾಗಿ ಸ್ಥಳಾಂತರ ಮಾಡಲಾಗಿದೆ.
ಎಲ್ಮ್ವುಡ್ ಹೋಟೆಲ್ ಕಟ್ಟಡನ್ನು 1826ರಲ್ಲಿ ನಿರ್ಮಿಸಲಾದ ಐತಿಹಾಸಿಕ ವಿಕ್ಟೋರಿಯನ್ ರತ್ನವೆಂದು ಪರಿಗಣಿಸಲಾಗಿದೆ. 2018ರಲ್ಲಿ ಈ ಹೋಟೆಲ್ ಅನ್ನು ಕೆಡವಲು ನಿರ್ಧರಿಸಲಾಗಿತ್ತು. ಆದರೆ, ಗ್ಯಾಲಕ್ಸಿ ಪ್ರಾಪರ್ಟೀಸ್ ಹೆಸರಿನ ರಿಯಲ್ ಎಸ್ಟೇಟ್ ಕಂಪನಿ ಈ ಕಟ್ಟಡವನ್ನು ಖರೀದಿಸಿ, ಅದನ್ನು ಕೆಡುವುದರ ಬದಲು ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡಿದೆ. ಆದರೆ, ಇದರ ಹಿಂದೆ ಬಹುದೊಡ್ಡ ಸವಾಲಿತ್ತು. ಎಸ್ ರಸ್ಥನ್ ಕನ್ಸ್ಟ್ರಕ್ಸನ್ ತಂಡ ಸ್ಥಳಾಂತರ ಮಾಡುವ ಜವಾಬ್ದಾರಿ ಹೊತ್ತು, ಅದರಲ್ಲಿ ಯಶಸ್ಸು ಕೂಡ ಸಾಧಿಸಿದೆ.
ಕನ್ಸ್ಟ್ರಕ್ಸನ್ ತಂಡವು ಸುಮಾರು 700 ಬಾರ್ ಸೋಪ್ಗಳನ್ನು ಬಳಸಿ ಸ್ಥಳಾಂತರ ಮಾಡಿದೆ. ಮೃಧುವಾದ ಬಾರ್ ಸೋಪ್ಗಳು ವಿನೂತನ ಪರಿಹಾರವಾಗಿ ಕಾರ್ಯ ನಿರ್ವಹಿಸಿದ್ದು, ಬೃಹತ್ ಗಾತ್ರದ ಎಲ್ಮ್ವುಡ್ ಹೋಟೆಲ್ ಕಟ್ಟಡ ಹೊಸ ಜಾಗಕ್ಕೆ ಸರಾಗವಾಗಿ ಜಾರಿದೆ. ಇದೀಗ ಈ ವಿಕ್ಟೋರಿಯನ್ ನಿಧಿಯನ್ನು ಸಂರಕ್ಷಣೆ ಮಾಡಲಾಗಿದ್ದು, ರಸ್ಥನ್ ಕನ್ಸ್ಟ್ರಕ್ಸನ್ ತಂಡದ ಸಾಧನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಕಟ್ಟಡವನ್ನು ಸ್ಥಳಾಂತರ ಮಾಡುವ ಸಂಪೂರ್ಣ ಪ್ರಕ್ರಿಯೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ವಿಡಿಯೋವನ್ನು ಈ ಕೆಳಗಿನ ಫೇಸ್ಬುಕ್ ಪೇಜ್ನಲ್ಲಿ ಕಾಣಬಹುದಾಗಿದೆ. (ಏಜೆನ್ಸೀಸ್)