

ಬೆಂಗಳೂರು: ಚಿತ್ರಮಂದಿರಗಳಲ್ಲಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದ್ದ ಶಿವರಾಜ್ಕುಮಾರ್ ನಟನೆಯ ಘೋಸ್ಟ್ ಸಿನಿಮಾ ಇತ್ತೀಚೆಗಷ್ಟೇ ಜೀ5ನಲ್ಲಿ ಬಿಡುಗಡೆಗೊಂಡಿತ್ತು. ಇದೀಗ ಒಟಿಟಿಯಲ್ಲೂ ಭರ್ಜರಿ ಪ್ರತಿಕ್ರಿಯೆ ಗಳಿಸಿದ ಚಿತ್ರವು 200 ಮಿಲಿಯನ್ ಸ್ಟ್ರೀಮಿಂಗ್ ಕಾಣುವ ಮೂಲಕ ಚಿತ್ರತಂಡಕ್ಕೆ ಭಾರೀ ಸಂತಸವನ್ನು ತಂದೊಡ್ಡಿದೆ. ಈ ಖುಷಿಯನ್ನು ಕೇಕ್ ಕತ್ತರಿಸಿದ ಘೋಸ್ಟ್ ಟೀಮ್, ಭಾಗ 2ರ ಕುರಿತಾಗಿ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ನವೆಂಬರ್ 17ರಂದು ಬಿಡುಗಡೆಯಾಗಿದ್ದ ಶಿವಣ್ಣ ಚಿತ್ರ ಕೆಲವೇ ದಿನಗಳಲ್ಲಿ 200 ಮಿಲಿಯನ್ಸ್ ಸ್ಟ್ರೀಮಿಂಗ್ ಕಂಡಿದೆ. ಘೋಸ್ಟ್ ಸಿನಿಮಾದ ಈ ಸಕ್ಸಸ್ ಸಂಭ್ರಮಿಸುವ ಸಲುವಾಗಿ ಶ್ರೀ ಮುತ್ತು ನಿವಾಸದಲ್ಲೇ ಮಾಧ್ಯಮ ಮಿತ್ರರನ್ನು ಆಹ್ವಾನಿಸಿದ್ದ ಶಿವರಾಜ್ಕುಮಾರ್, ಕೈಯಲ್ಲಿರುವ ಸಾಲು ಸಾಲು ಸಿನಿಮಾಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಘೋಸ್ಟ್ ಪಾರ್ಟ್-2, ಭೈರತಿ ರಣಗಲ್ ಸಿನಿಮಾಗಳ ಬಗ್ಗೆ ಅಪ್ಡೇಟ್ ನೀಡಿದ ಹ್ಯಾಟ್ರಿಕ್ ಹೀರೋ, ತಮ್ಮ ಮುಂದಿನ ಸಿನಿಮಾದಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಇರುವುದನ್ನು ಬಹಿರಂಗಪಡಿಸಿದ್ದಾರೆ.
ಶಿವಣ್ಣನ 'ಭಜರಂಗಿ 2', 'ವೇದ' ಹಾಗೂ 'ಘೋಸ್ಟ್' ಈ ಮೂರು ಸಿನಿಮಾಗಳು 100 ಮಿಲಿಯನ್ ನಿಮಿಷಗಳಷ್ಟು ಸ್ಟ್ರೀಮಿಂಗ್ ಆಗಿದೆ. ಈ ಬಗ್ಗೆ ಮಾತನಾಡಿದ ಶಿವಣ್ಣ. "ಜೀ 5ನಲ್ಲಿ ಇದು ಮೂರನೇ ಚಿತ್ರ. ಭಜರಂಗಿ 2, ವೇದ ಮತ್ತು ಘೋಸ್ಟ್. ಮೂರು ಸಿನಿಮಾ ತುಂಬಾ ಚೆನ್ನಾಗಿ ಸ್ಟ್ರೀಮಿಂಗ್ ಆಗಿರೋದ್ರಿಂದ ನಮಗೆ ಜೀ ಕನೆಕ್ಷನ್ ಜಾಸ್ತಿಯಿದೆ ಅಂತ ಅನಿಸುತ್ತೆ. ಕನ್ನಡ ಡಬ್ ಸಿನಿಮಾ ನೋಡ್ತಾರೆ. ಆದರೆ, ಕನ್ನಡ ಸಿನಿಮಾ ನೋಡೋದು ಕಡಿಮೆ. ಅದೇ ಈಗ ಹೆಚ್ಚಾಗಿದೆ. ಇನ್ನು ತಮಿಳುನಾಡು ಹಾಗೂ ಕೇರಳದಲ್ಲಿ ಸಿನಿಮಾ ರಿಲೀಸ್ ಮಾಡಿದ್ದರು. ಅಲ್ಲೆಲ್ಲ ಚೆನ್ನಾಗಿಯೇ ರೆಸ್ಪಾನ್ಸ್ ಸಿಕ್ಕಿದೆ" ಎಂದು ಹೇಳಿದರು.
ವಿದೇಶದಲ್ಲಿಯೂ ಘೋಸ್ಟ್ ಸಿನಿಮಾಗೆ ಸಿಕ್ಕ ರೆಸ್ಪಾನ್ಸ್ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ ಶ್ರೀನಿ ಹಾಗೂ ಶಿವಣ್ಣ, "ಆಸ್ಟ್ರೇಲಿಯಾ, ಅಮೆರಿಕಾ, ಯುಕೆಯಲ್ಲಿ ತುಂಬಾನೇ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಆ ಸಮಯದಲ್ಲಿ ಸ್ವಲ್ಪ ದೊಡ್ಡ ದೊಡ್ಡ ಸಿನಿಮಾಗಳೇ ಬಂತು. ಆದರೂ, ಚೆನ್ನಾಗಿ ಹೋಯ್ತು" ಎಂದು ಅಭಿಪ್ರಾಯಪಟ್ಟಿದ್ದಾರೆ.