

ಶ್ರೀಕೃಷ್ಣ ಕಥಾಮೃತ -130 ಭಾಗ- 2
ದೇವತೆಗಳು ಋಷಿಗಳ ಶಾಪವನ್ನು ಏಕೆ ತಿರಸ್ಕಾರ ಮಾಡಬಾರದು? ಪರಮಾತ್ಮನ ಉದ್ದೇಶವೇನು? ‘ಅನೇಕ ದುಷ್ಟ ಕ್ಷತ್ರಿಯರು ಏನೂ ಇಲ್ಲದೆಯೇ ವೈದಿಕರಿಗೆ ಮರ್ಯಾದೆ ಕೊಡುವುದಿಲ್ಲ. ಇನ್ನು ದೇವತೆಗಳೂ ಅವರನ್ನು ತಿರಸ್ಕಾರ ಮಾಡಿ ಬಿಟ್ಟರೆ ವೈದಿಕರಿಗೆ ಜಗತ್ತಿನಲ್ಲಿ ಮರ್ಯಾದೆ ಕೊಡುವವರೇ ಇಲ್ಲ ಎಂದು ಆಗಿಹೋಗುತ್ತದೆ. ಋಷಿಗಳು ನಿಮಗಿಂತ ಸಣ್ಣವರು ಇರಬಹುದು, ಆದರೆ ಅವರಿಗೆ ಮರ್ಯಾದೆ ಕೊಡಿ. ಅವರು ಶಾಪ ಕೊಟ್ಟರೆ ತೆಗೆದುಕೊಳ್ಳಿ. ಆತುರದ ನಿರ್ಧಾರದಿಂದ ಅವರು ಕೊಟ್ಟ ಶಾಪದಿಂದ ಅನರ್ಥ ಆಗಬಹುದು, ಆ ವಿಷಯ ಬೇರೆ. ಆದರೆ ಜನರಲ್ಲಿ ತಪಸ್ಸಿಗೆ ಒಂದು ಮರ್ಯಾದೆ ಇದೆ.
ತಪಸ್ವಿಗಳಿಗೆ ಏನಾದರೂ ಕೆಟ್ಟದು ಮಾಡಿದರೆ ನಮಗೆ ಅನರ್ಥ ಆಗುತ್ತದೆ ಎಂಬ ಭಯ ಜಗತ್ತಿನೊಳಗೆ ಇದೆ, ಅದು ಉಳಿಯಬೇಕು. ಆದರೆ ನಿಮಗೆ ಶಾಪ ಕೊಟ್ಟದ್ದಕ್ಕೆ ಅವರಿಗೆ ಏನು ಅನರ್ಥ, ಶಿಕ್ಷೆ ಆಗಬೇಕೋ ಅದನ್ನು ಅವರು ಅನುಭವಿಸುತ್ತಾರೆ, ನೀವು ಚಿಂತೆ ಮಾಡಬೇಡಿ ಎಂದು ದೇವರ ಅಪ್ಪಣೆ ಇದ್ದದ್ದರಿಂದ ಗರುಡದೇವರು ಸೌಭರ ಋಷಿಗಳ ಶಾಪವನ್ನು ತೆಗೆದುಕೊಂಡಿದ್ದು’ ಎಂದು ಶ್ರೀಮಧ್ವಾಚಾರ್ಯರು ನಿರ್ಣಯವನ್ನು ಕೊಡುತ್ತಾರೆ. ಈ ಕಾರಣಕ್ಕಾಗಿ ಕಾಲಿಯ ಯಮುನಾ ನದಿಯ ಮಡುವಿನಲ್ಲಿ ಸುಖವಾಗಿ ಇದ್ದ. ಆತನ ದುಷ್ಟತನ ಹೆಚ್ಚಾದಾಗ ಶ್ರೀಕೃಷ್ಣ ನಿಗ್ರಹಿಸಿ, ರಮಣಕ ದ್ವೀಪಕ್ಕೆ ಕಳಿಸಿದ್ದಾನೆ.
ಈ ರೀತಿಯಾಗಿ ಭಗವಂತ ಭಕ್ತರಿಗೆ ಬಂದಂತಹ ನಾನಾ ವಿಧವಾದ ಕಷ್ಟಗಳಿಂದ ಭಕ್ತರನ್ನು ಉದ್ಧಾರ ಮಾಡಿದ್ದಾನೆ. ನಮ್ಮಲ್ಲಿ ಇರುವ ದುಷ್ಟವಾದ ಕಾಮವೇ ದೊಡ್ಡದಾದ ಕಾಲಿಯ. ಅದರ ಮೇಲೆ ಭಗವಂತ ಮರ್ದನ ಮಾಡಿ ತನ್ನ ಪಾದಗಳ ಚಿಹ್ನೆ ಹಾಕಿದ. ಇದರ ಅರ್ಥ ನಮ್ಮ ಕಾಮ ಲೌಕಿಕ ವಿಷಯ ಬಿಟ್ಟು ಭಗವಂತನ ವಿಷಯದಲ್ಲಿ್ಲ ಮೂಡುವಂತೆ ಮಾಡಲಿ. ಪರಮಾತ್ಮನಿಂದ ಚಿಹ್ನಿತವಾದ ಕಾಮವನ್ನು ನಮಗೆ ಕೊಟ್ಟು ದೇವರು ಅನುಗ್ರಹ ಮಾಡಲಿ.
(ನಾಳಿನ ಅಂತರಂಗದಲ್ಲಿ: ಸ್ವಾಮಿ ಕೃತಾತ್ಮಾನಂದ, ಚಿನ್ಮಯ ಮಿಷನ್, ಹುಬ್ಬಳ್ಳಿ )