

ಕೊಪ್ಪ: ನಲವತ್ತು ವರ್ಷ ಮೇಲ್ಪಟ್ಟವರು ವರ್ಷದಲ್ಲಿ ಒಂದೆರಡು ಬಾರಿ ನೇತ್ರ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಉಡುಪಿ ನೇತ್ರಾಲಯದ ಜನಸಂಪರ್ಕಾಧಿಕಾರಿ ಮೋಹನ್ ದಾಸ್ ಹೇಳಿದರು.
ಭಾನುವಾರ ಶೆಟ್ಟಿಹಡ್ಲು ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗ ಮತ್ತು ಸಂಘಸಂಸ್ಥೆಗಳಿಂದ ಗಡಿಕಲ್ಲು ಆಲೆಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.
ತಪಾಸಣೆ ಸಂದರ್ಭ ಕಣ್ಣಿನ ಅನೇಕ ಸಮಸ್ಯೆಗಳು ಗೊತ್ತಾಗುತ್ತವೆ. ಗ್ಲುಕೋಮಾ ಎಂಬ ಕಣ್ಣಿನ ತೊಂದರೆ ತಿಳಿಯುವುದೇ ಇಲ್ಲ. ನಿಧಾನವಾಗಿ ಕಣ್ಣು ಮಂಜಾಗುತ್ತ ಕ್ರಮೇಣ ಕುರುಡಾಗುತ್ತವೆ. ಇದು ಕೆಲವೊಮ್ಮೆ ಅನುವಂಶೀಯವಾಗಿಯೂ ಬರಬಹುದು. ಆರಂಭದಲ್ಲಿಯೇ ರೋಗಲಕ್ಷಣ ಗುರುತಿಸಿ ಚಿಕಿತ್ಸೆ ಪಡೆದುಕೊಂಡರೆ ಗುಣಹೊಂದಬಹುದು ಎಂದರು.
ಮೆಳ್ಳೆಗಣ್ಣು, ಕಣ್ಣಿನ ಹುಣ್ಣು, ಮಕ್ಕಳಲ್ಲಿ ಕಣ್ಣು ಮಂಜಾಗುವಿಕೆ ಸೇರಿ ಅನೇಕ ಸಮಸ್ಯೆಗಳನ್ನು ತಪಾಸಣೆಯಿಂದ ಆರಂಭಿಕ ಹಂತದಲ್ಲಿಯೇ ಕಂಡುಹಿಡಿಯಬಹುದು ಎಂದು ತಿಳಿಸಿದರು.
ನೇತ್ರತಜ್ಞೆ ಡಾ. ಮೇಘನಾ, ಆಯುಷ್ಮಾನ್ ವಿಭಾಗದ ಜಿಲ್ಲಾ ನಿರ್ದೇಶಕಿ ಡಾ. ವೀಣಾ ಅವರು ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ದೀಪ ಬೆಳಗಿದರು.
ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನ ರಕ್ತದೊತ್ತಡ, ಮಧುಮೇಹ, ಮತ್ತು ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಶಸ್ತ್ರಚಿಕಿತ್ಸೆಗೆ ಒಳಗಾದ 9 ಜನರಲ್ಲಿ 7 ಮಂದಿಯನ್ನು ಉಚಿತ ಶಸ್ತ್ರಚಿಕಿತ್ಸೆಗಾಗಿ ಉಡುಪಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ಗಿಡ್ಡಯ್ಯ ಶೆಟ್ಟಿಹಡ್ಲು, ನವಚೈತ್ರ ಸಾಂಸ್ಕೃತಿಕ ವೇದಿಕೆ ಉಪಾಧ್ಯಕ್ಷ ಸಂತೋಷ್ ಕುಲಾಸೋ, ಕೊಪ್ಪ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಕೆ.ವಿಶ್ವ, ಪತ್ರಕರ್ತ ರವಿಕುಮಾರ್, ನೇತ್ರ ಪರೀಕ್ಷಕರಾದ ರಕ್ಷಿತ್ ಕಾಮತ್, ಅಪೂರ್ವಾ, ಅನುಷಾ, ಅಶ್ವಿನಿ, ಆರೋಗ್ಯಮಿತ್ರ ಸುರೇಶ್ ಕಟಾರ್, ಶಾಲಾ ಮುಖ್ಯಶಿಕ್ಷಕಿ ಮಂಜುಳಾದೇವಿ, ಸಹ ಶಿಕ್ಷಕಿಯರಾದ ಶೈಲಾ, ಎನ್.ಪಿ.ರಾಜೀವಿ, ಖಾಸಗಿ ಬಸ್ ಮಾಲೀಕರ ಸಂಘದ ಶಶಿಕುಮಾರ್ ಶೆಟ್ಟಿ, ಗಡಿಕಲ್ಲು ಪ್ರಾಥಮಿಕ ಆರೋಗ್ಯ ಕೇಂದ್ರದ ಎನ್‌ಸಿಡಿ ಘಟಕದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.