ರಾಜಕಾರಣ ಶುದ್ಧಗೊಳಿಸುವ ಕಾರ್ಯಕ್ಕೆ ಮುಂದಾಗಿ; ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕರೆ

ಕೋಲಾರಮ್ಮ ದೇವಸ್ಥಾನದಲ್ಲಿ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಗೋವಿಂದಗೌಡ ಮಹಿಳಾ ಸ್ವಸಹಾಯ ಸಂಗಳಿಗೆ ಸಾಲದ ಬಾಂಡ್​ ವಿತರಿಸಿದರು. ನಿರ್ದೇಶಕರಾದ ನಾಗನಾಳ ಸೋಮಣ್ಣ, ಯಲವಾರ ಸೊಣ್ಣೆಗೌಡ, ದಯಾನಂದ ಇದ್ದರು.
ಕೋಲಾರಮ್ಮ ದೇವಸ್ಥಾನದಲ್ಲಿ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಗೋವಿಂದಗೌಡ ಮಹಿಳಾ ಸ್ವಸಹಾಯ ಸಂಗಳಿಗೆ ಸಾಲದ ಬಾಂಡ್​ ವಿತರಿಸಿದರು. ನಿರ್ದೇಶಕರಾದ ನಾಗನಾಳ ಸೋಮಣ್ಣ, ಯಲವಾರ ಸೊಣ್ಣೆಗೌಡ, ದಯಾನಂದ ಇದ್ದರು.
Published on

ಕೋಲಾರ: ಪ್ರಚಾರಕ್ಕಾಗಿ ಸಾಲ ನೀಡುತ್ತಿಲ್ಲ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಸದೃಢಗೊಳಿಸಲು ಸಾಲ ನೀಡಲಾಗುತ್ತಿದೆ. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರಾಜಕಾರಣ ಕಲುಷಿತಗೊಂಡಿದ್ದು, ಶುದ್ಧಗೊಳಿಸುವ ಕೆಲಸ ನಿಮ್ಮ ಕೈಯಲ್ಲಿದೆ. 2023ರ ಚುನಾವಣೆಯಲ್ಲಿ ಅರ್ಹರಿಗೆ ಮತ ನೀಡಿ. ಹಣಕೊಟ್ಟು ಮತ ಹಾಕಿಸಿಕೊಳ್ಳುವ ಕೆಟ್ಟ ಪರಂಪರೆಯನ್ನು ತೊಲಗಿಸಬೇಕು ಎಂದು ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಕರೆ ನೀಡಿದರು.

ನಗರದ ಕೋಲಾರಮ್ಮ ದೇವಾಲಯದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಿ, 22 ಮಹಿಳಾ ಸಂಗಳಿಗೆ 1.20 ಕೋಟಿ ರೂಪಾಯಿ ಸಾಲ ವಿತರಿಸಿ ಮಾತನಾಡಿದರು.

ಜಿಲ್ಲೆಯಿಂದ ಆಯ್ಕೆಯಾದ ಕೆ.ಸಿ.ರೆಡ್ಡಿ ಮುಖ್ಯಮಂತ್ರಿಯಾಗಿದ್ದರು. ಸಿ.ಬೈರೇಗೌಡರು, ಚೆನ್ನಯ್ಯ, ವೆಂಕಟಗಿರಿಯಪ್ಪ, ನಾಗಿರೆಡ್ಡಿ ಸೇರಿದಂತೆ ಅನೇಕ ಮಹನೀಯರು ಕೋಲಾರ ಜಿಲ್ಲೆಯಲ್ಲಿ ಉತ್ತಮ ರಾಜಕಾರಣ ಮಾಡಿದ್ದಾರೆ ಎಂದರು.
ಡಿಸಿಸಿ ಬ್ಯಾಂಕಿನಿಂದ ಪಡೆದ ಸಾಲ ಪ್ರಾಮಾಣಿಕತೆಯಿಂದ ಮರುಪಾವತಿ ಮಾಡುತ್ತಿದ್ದೀರಿ. ಅದೇ ರೀತಿ ಜಿಲ್ಲೆಯ ಕೆಟ್ಟ ರಾಜಕಾರಣಕ್ಕೆ ತಿಲಾಂಜಲಿ ಹಾಡುವ ಮೂಲಕ ಮನೆ ಬಾಗಿಲಿಗೆ ಮತ ಖರೀದಿಗೆ ಬರುವವರಿಗೆ ತಕ್ಕಶಾಸ್ತಿ ಮಾಡಿ. ಅಭಿವೃದ್ಧಿ ಚಿಂತನೆ ಹಾಗೂ ಜನಪರ ಕಾಳಜಿ ಹೊಂದಿರುವವರನ್ನು ಆಯ್ಕೆ ಮಾಡಿ ಎಂದರು.

ಅಂಬೇಡ್ಕರರು ಸಂವಿಧಾನದಲ್ಲಿ ಮತದಾನದ ಹಕ್ಕು ನೀಡಿದ್ದಾರೆ. ಗೌರವಯುತವಾಗಿ ಮತ ಹಾಕಿದರೆ ಮಾತ್ರವೇ ಜಿಲ್ಲೆಯ ರಾಜಕಾರಣ ಬದಲಾಗುತ್ತದೆ. ಹಣಕ್ಕಾಗಿ ಕೈ ಚಾಚುವುದು ಬಿಟ್ಟು ಬೈರೇಗೌಡರ ಕಾಲದಲ್ಲಿ ದೇವಾಲಯಗಳಲ್ಲಿ ಪೂಜೆ ಮಾಡಿ, ಎಲೆ&ಅಡಿಕೆ ಕೊಡುತ್ತಿದ್ದಂತಹ ವಾತಾವರಣ ಮತ್ತೆ ಸೃಷ್ಟಿಯಾಗಬೇಕು ಎಂದರು.

ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ಈಗಾಗಲೇ 2&3 ಬಾರಿ ಸಾಲ ಪಡೆದಿದ್ದೀರಿ, ಅದೆಲ್ಲದ್ದಕ್ಕೂ ಉಳಿತಾಯ ಹಣ ಕಾರಣ. ಆದರೆ ಉಳಿತಾಯದ ಮೊತ್ತ ಹೆಚ್ಚಾಗಿಲ್ಲ, 10 ರೂ. ಬದಲಾಗಿ 20 ರೂ. ಕಟ್ಟುವಂತಾದರೆ ಉಳಿತಾಯದ ಹಣವು ಹೆಚ್ಚಾಗುತ್ತದೆ. ಈಗಲೂ ಕಾಲಮೀರಿಲ್ಲ, ಈಗಿನಿಂದಲೇ ಹೆಚ್ಚಳ ಮಾಡಿಕೊಂಡರೆ ತುರ್ತು ಸಂದರ್ಭದಲ್ಲಿ ಬ್ಯಾಂಕ್​ ನೀಡುವ ಸಾಲಕ್ಕೆ ಕಾಯದೇ ಅದನ್ನೇ ಸಾಲವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಸಂಕ್ಕೆ ಪಡೆದಿರುವ ತಲಾ 5 ಲಕ್ಷ ರೂ.ಗಳನ್ನು ಬೇರೆ ಬೇರೆ ಕಾರ್ಯಗಳಿಗೆ ಬಳಸಿಕೊಳ್ಳದೆ ಸ್ವಯಂ ಉದ್ಯೋಗಗಳನ್ನು ಆರಂಭಿಸಿದರೆ ಅನುಕೂಲವಾಗುತ್ತದೆ ಎಂದರು.

ಸ್ವಯಂ ಉದ್ಯೋಗಕ್ಕೆ ಆದ್ಯತೆ ನೀಡಿ:
ನಿರ್ದೇಶಕ ಕೆ.ವಿ.ದಯಾನಂದ್​ ಮಾತನಾಡಿ, ಕೋಲಾರ ಡಿಸಿಸಿ ಬ್ಯಾಂಕ್​ನಿಂದ ಹೆಣ್ಣು ಮಕ್ಕಳು ಸಾಲ ಪಡೆದು, ಪ್ರಾಮಾಣಿಕವಾಗಿ ಮರುಪಾವತಿ ಮಾಡುವಲ್ಲಿ ವಿಶ್ವದಲ್ಲೇ ಮಾದರಿಯಾಗಿದ್ದೀರಿ. ಉಳಿತಾಯದ ಹಣಕ್ಕೆ ಶೇ.7ರಷ್ಟು ಬಡ್ಡಿಯನ್ನೂ ನಾವು ಕೊಡುವುದರಿಂದಾಗಿ ಹೆಚ್ಚಾಗಿ ಉಳಿತಾಯದ ಹಣ ಇರಿಸಬೇಕು. ಡಾ.ಸುಧಾಮೂರ್ತಿ ಮೊದಲು ಸಣ್ಣ ಪ್ರಮಾಣದಲ್ಲಿ ಬಂಡವಾಳ ಹೂಡಿ ಸ್ವಯಂ ಉದ್ಯೋಗ ಆರಂಭಿಸಿ ಇಂದು ವಿಶ್ವ ಖ್ಯಾತಿಯಾಗಿದ್ದಾರೆ. ಅಂತೆಯೇ ಸ್ವಯಂ ಉದ್ಯೋಗದ ಕಡೆಗೆ ನಮ್ಮ ಜಿಲ್ಲೆಗಳಲ್ಲಿಯೂ ಮಹಿಳೆಯರು ಹೆಚ್ಚಿನ ಆದ್ಯತೆ ನೀಡಿದರೆ ನಿಮ್ಮ ಕುಟುಂಬದ ಭವಿಷ್ಯ ಉತ್ತಮವಾಗಿರುತ್ತದೆ ಎಂದರು.

ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ಅಂಬರೀಶ್​, ಮೇಲ್ವಿಚಾರಕರಾದ ಅಮೀನ್​, ಕೇಂದ್ರ ಕಚೇರಿಯ ಪದ್ಮಮ್ಮ, ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಉಳಿತಾಯ ಮಾಡಿದರೆ ಹೆಚ್ಚು ಸಾಲ: ಮಂಗಳೂರು ಭಾಗಕ್ಕೆ ಹೋದರೆ ಹಣ ನೋಡದೆ. ಒಳ್ಳೆಯ ಜನರನ್ನು ಆಯ್ಕೆ ಮಾಡುತ್ತಾರೆ. ಜಿಲ್ಲೆಯ ರಾಜಕಾರಣದ ಮಾನ ಮರ್ಯಾದೆ ಉಳಿಸುವ ಜತೆಗೆ ಡಿಸಿಸಿ ಬ್ಯಾಂಕ್​ ಉಳಿಸಬೇಕು ಎಂದರಲ್ಲದೆ, ಉಳಿತಾಯ ಹಣ ಹೆಚ್ಚು ಮಾಡಿಕೊಂಡರೆ ಪ್ರತಿ ಸಂಕ್ಕೆ ಇನ್ನು ಮುಂದೆ 20 ಲಕ್ಷರೂ. ತನಕ ಸಾಲ ನೀಡಲಾಗುವುದು, ಆಗ ಪ್ರತಿ ಸದಸ್ಯರಿಗೂ 2 ಲಕ್ಷ ರೂ. ಸಾಲ ದೊರೆಯುತ್ತದೆ ಎಂದು ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

7.5 ಲಕ್ಷ ಮಹಿಳೆಯರಿಗೆ ಸಾಲ: ಡಿಸಿಸಿ ಬ್ಯಾಂಕ್​ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಉತ್ತಮವಾಗಿ ವಹಿವಾಟು, ವ್ಯವಹಾರ ಮಾಡುವ ಸಂಗಳಿಗೆ 10 ಲಕ್ಷ ರೂ. ಸಾಲ ನೀಡಲಾಗುತ್ತಿದೆ. ಇಡೀ ದೇಶವೇ ತಿರುಗಿ ನೋಡುವಂತೆ ಕೋಲಾರ ಡಿಸಿಸಿ ಬ್ಯಾಂಕ್​ ಸಾಧನೆ ಮಾಡುತ್ತಿದೆ. ಎರಡೂ ಜಿಲ್ಲೆ ಸೇರಿ ಬ್ಯಾಂಕ್​ ಮೂಲಕ 7.5 ಲಕ್ಷ ಮಹಿಳೆಯರಿಗೆ ಸಾಲ ನೀಡಲಾಗಿದೆ. ನೀವು ಉಳಿತಾಯ ಮಾಡಿದಷ್ಟು ಹೆಚ್ಚು ಸಾಲ ಸಿಗುತ್ತದೆ. ಬ್ಯಾಂಕ್​ನ ಸಾಧನೆಯನ್ನು ಕೊಡಗು ಜಿಲ್ಲಾ ಡಿಸಿಸಿ ಬ್ಯಾಂಕ್​ ವೀಕ್ಷಣೆಗೆ ಬಂದ ಸಂದರ್ಭದಲ್ಲಿ ಯಾವುದೇ ಭದ್ರತೆಯಿಲ್ಲದೆ ಮಹಿಳಾ ಸಂಗಳಿಗೆ 5ರಿಂದ 10 ಲಕ್ಷ ರೂಪಾಯಿ ತನಕ ಸಾಲ ನೀಡುವುದಕ್ಕೆ ಆಶ್ವರ್ಯಪಟ್ಟಿದ್ದಾರೆ. ಏಕೆಂದರೆ ಕೊಟ್ಟ ಸಾಲವನ್ನು ಪ್ರಾಮಾಣಿಕತೆಯಿಂದ ಮರುಪಾವತಿ ಮಾಡುತ್ತಿರುವುದೇ ದೊಡ್ಡ ಸಾಧನೆ. ಇವತ್ತು ಕೋಲಾರ ಡಿಸಿಸಿ ಬ್ಯಾಂಕ್​ ಈ ಮಟ್ಟಕ್ಕೆ ಬೆಳೆಯಲು ನೀವೇ ಕಾರಣ ಎಂದು ಶ್ಲಾಘಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net