

ತಿ.ನರಸೀಪುರ: ಜಾಗತಿಕ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿರುವುದರಿಂದ ವಿದ್ಯಾರ್ಥಿನಿಯರು ಸಾಮಾಜಿಕವಾಗಿ ಪ್ರಗತಿ ಹೊಂದಲು ಗುಣಮಟ್ಟದ ಉನ್ನತ ಶಿಕ್ಷಣವನ್ನು ಪಡೆಯಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಕರೆ ನೀಡಿದರು.
ಪಟ್ಟಣದ ಬೈರಾಪುರ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ 2024-25ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ಯುವ ರೆಡ್ ಕ್ರಾಸ್ ಹಾಗೂ ರೇಂಜರ್ಸ್ ಘಟಕಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜಾಗತಿಕ ಕಾಲಘಟ್ಟದಲ್ಲಿ ಶಿಕ್ಷಣವೇ ಬದುಕನ್ನು ರೂಪಿಸುವುದರಿಂದ ಹೆಣ್ಣು ಮಕ್ಕಳು ಪದವಿ ಬಳಿಕ ಸ್ನಾತಕೋತ್ತರ ಪದವಿ ಪಡೆಯಬೇಕೆಂದು ಕಿವಿಮಾತು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ವಿ.ಉದಯ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಸಾಧನೆ ಮಾಡುವ ಜತೆಗೆ ಪಠ್ಯೇತರ ಚಟುವಟಿಕೆಗಳಾದ ಸಾಂಸ್ಕೃತಿಕ ಮತ್ತು ಕ್ರೀಡೆ ಚಟುವಟಿಕೆಗಳಲ್ಲಿಯೂ ಹೆಚ್ಚು ಭಾಗವಹಿಸಬೇಕು. ರಾಜ್ಯ ಸೇರಿದಂತೆ ಅಂತಾರಾಜ್ಯ, ದೇಶ-ವಿದೇಶಗಳ ಕ್ರೀಡೆಗಳಲ್ಲಿ ಪ್ರತಿನಿಧಿಸಿ, ಪ್ರತಿಭಾನ್ವಿತರಾಗಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸಿದರು.
ಪ್ರಾಂಶುಪಾಲೆ ಪ್ರೊ.ಬಿ.ಪಿ.ಇಂದಿರಾ ಮಾತನಾಡಿ, ಕಾಲೇಜಿನಲ್ಲಿರುವ ಎಲ್ಲ ಸೌಲಭ್ಯಗಳನ್ನು ತಮ್ಮ ಶೈಕ್ಷಣಿಕ ಸಾಧನೆಗಾಗಿ ಬಳಸಿಕೊಳ್ಳಬೇಕು ಎಂದರು.
2024-25ನೇ ಶೈಕ್ಷಣಿಕ ಸಾಲಿನಲ್ಲಿ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಘಟಕದ ಸಂಚಾಲಕಿ ಡಾ.ಎಂ. ನೇತ್ರಾವತಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಎನ್.ಗುರುಪಾದಸ್ವಾಮಿ, ಕ್ರೀಡೆ, ಎನ್‌ಎಸ್‌ಎಸ್ ಹಾಗೂ ರೇಂಜರ್ಸ್ ಘಟಕಗಳ ಸಂಚಾಲಕಿ ಪಿ ಕೆ.ಶಶಿರೇಖಾ, ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಡಾ.ಕೆ.ಪಿ.ಮಂಜು, ಪತ್ರಾಂಕಿತ ವ್ಯವಸ್ಥಾಪಕಿ ಕೆ.ಲಲಿತಾ ಕುಮಾರಿ, ಸಹ ಪ್ರಾಧ್ಯಾಪಕ ಡಾ.ವಿ. ಸಂಪತ್ ಕುಮಾರ್, ಗ್ರಂಥಪಾಲಕ ಕುಮಾರ್ ಪಾಟೀಲ್ ಇತರರು ಇದ್ದರು.