ಪಾಲಿಕೆ ಪೌರ ಕಾರ್ವಿುಕರಿಗೆ ಜಿಯೋ ಫೆನ್ಸಿಂಗ್ ಬಯೋಮೆಟ್ರಿಕ್ ಹಾಜರಾತಿ

Geo Fancing biomatric
Published on

ಸಂತೋಷ ವೈದ್ಯ ಹುಬ್ಬಳ್ಳಿ

ಅವಳಿ ನಗರದಲ್ಲಿ ಸ್ವಚ್ಛತೆ ಕೆಲಸವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಜಿಯೋ ಫೆನ್ಸಿಂಗ್ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಿಕೊಳ್ಳಲು ಮುಂದಾಗಿದೆ. ಪೌರ ಕಾರ್ವಿುಕರ ಹಾಜರಾತಿಯನ್ನು ನಿಖರವಾಗಿ ದಾಖಲಿಸುವ ಈ ವ್ಯವಸ್ಥೆಯನ್ನು ಸದ್ಯದಲ್ಲೇ ಅನುಷ್ಠಾನಕ್ಕೆ ತರಲು ಹೆಜ್ಜೆ ಇಟ್ಟಿದೆ.

ಇದು ಸುಧಾರಿತ ಬಯೋಮೆಟ್ರಿಕ್ ವ್ಯವಸ್ಥೆಯಾಗಿದ್ದು, ಸ್ಟಾರ್ಟಪ್ ಕಂಪನಿಯೊಂದು ಇದನ್ನು ಕಾರ್ಯಗತಗೊಳಿಸಲಿದೆ. ಈ ಕಂಪನಿಗೆ ಈಗಾಗಲೇ ಪಾಲಿಕೆಯಿಂದ ಕಾರ್ಯಾದೇಶ ನೀಡಲಾಗಿದೆ. ಕಾಯಂ, ನೇರ ವೇತನ ಹಾಗೂ ಹೊರಗುತ್ತಿಗೆ ಪೌರ ಕಾರ್ವಿುಕರು ಹಾಗೂ ಆಟೋ ಟಿಪ್ಪರ್ ಚಾಲಕರ ಹಾಜರಾತಿ ದಾಖಲಿಸಲು ಈ ಹೊಸ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. 2018ರಲ್ಲಿ ಅಳವಡಿಸಿಕೊಂಡಿದ್ದ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯು ಕೇವಲ ಒಂದು ವರ್ಷ ಮಾತ್ರ ಕಾರ್ಯಾಚರಣೆಯಲ್ಲಿ ಇತ್ತು.

ಹು-ಧಾ ಅವಳಿ ನಗರದಲ್ಲಿ ಸ್ವಚ್ಛತೆ ಕೆಲಸ ಅಷ್ಟು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಘನತ್ಯಾಜ್ಯ ವಿಲೇವಾರಿ ವಿಭಾಗ ನಿತ್ಯವೂ ಸಾಕಷ್ಟು ದೂರುಗಳನ್ನು ಎದುರಿಸುತ್ತಿರುತ್ತದೆ. ಕಸ ಸಂಗ್ರಹಿಸಲು ಪ್ರತಿ ನಿತ್ಯ ಆಟೋ ಟಿಪ್ಪರ್ ಬರುವುದಿಲ್ಲ, ಪ್ರತಿ ವಾರ್ಡ್​ನಲ್ಲಿ ನಿಗದಿತ ಸಂಖ್ಯೆಗಿಂತ ಪೌರ ಕಾರ್ವಿುಕರ ಹಾಜರಾತಿ ಕಡಿಮೆ ಇರುತ್ತದೆ, ಎಂಬಿತ್ಯಾದಿ ದೂರುಗಳು ಎಲ್ಲ ಸ್ತರದ ಜನರಿಂದ ಸಾಮಾನ್ಯವಾಗಿ ಕೇಳಿ ಬರುತ್ತಿರುತ್ತದೆ. ಇದಕ್ಕೆ ಪರಿಹಾರ ಎಂಬಂತೆ ಜಿಯೋ ಫೆನ್ಸಿಂಗ್ ಬಯೋಮೆಟ್ರಿಕ್ ವ್ಯವಸ್ಥೆ ಎಂಬ ದಾರಿಯನ್ನು ಪಾಲಿಕೆ ಹುಡುಕಿಕೊಂಡಿದೆ.

ಕಾರ್ಯನಿರ್ವಹಣೆ

ಜಿಯೋ ಪೆನ್ಸಿಂಗ್ ಬಯೋಮೆಟ್ರಿಕ್ ವ್ಯವಸ್ಥೆಯು ಫೇಸ್ ರೀಡಿಂಗ್ ಹಾಗೂ ರೆಟಿನಾ ಡಿಟೆಕ್ಷನ್ ಮೂಲಕ ಹಾಜರಾತಿಯನ್ನು ದಾಖಲಿಸುತ್ತದೆ. ಈಗಾಗಲೇ ಪಾಲಿಕೆಯ ಸೇ. 90 ರಷ್ಟು ಪೌರ ಕಾರ್ವಿುಕರ ಮಾಹಿತಿಯನ್ನು ಫೋಟೋ ಸಮೇತ ಸಾಫ್ಟವೇರ್​ನಲ್ಲಿ ಅಳವಡಿಸಲಾಗಿದೆ. ಯಾವ ವಾರ್ಡ್​ನಲ್ಲಿ ಯಾವ ಪೌರ ಕಾರ್ವಿುಕರು ಕರ್ತವ್ಯ ನಿರ್ವಹಿಸುತ್ತಾರೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಪ್ರತಿ ಪೌರ ಕಾರ್ವಿುಕರ ಭೌಗೋಳಿಕ ಗಡಿ ನಿರ್ಧಾರವಾಗಿರುತ್ತದೆ. ನಿರ್ದಿಷ್ಟ ಪ್ರದೇಶ ಮೀರಿದರೆ (500 ಮೀಟರ್ ಹೊರಗೆ) ಹಾಜರಾತಿ ದಾಖಲಾಗುವುದಿಲ್ಲ. ಕರ್ತವ್ಯ ನಿರ್ವಹಿಸುವ ಸ್ಥಳ ಬಿಟ್ಟು ಬೇರೆ ಕಡೆ ಹಾಜರಾತಿ ದಾಖಲಿಸಲು ಸಾಧ್ಯವೇ ಇಲ್ಲ.

ಹು-ಧಾ ಅವಳಿ ನಗರದಲ್ಲಿ 82 ವಾರ್ಡ್​ಗಳಿವೆ. ಪ್ರತಿ ವಾರ್ಡ್​ಗೆ ಒಂದರಂತೆ ಹಾಗೂ ಮಾರುಕಟ್ಟೆ ಪ್ರದೇಶಗಳು ಸೇರಿ 90 ಜಿಯೋ ಫೆನ್ಸಿಂಗ್ ಬಯೋಮೆಟ್ರಿಕ್ ಸಾಧನಗಳನ್ನು ಪಾಲಿಕೆ ಬಳಕೆ ಮಾಡಲಿದೆ. ಈ ಸಾಧನಗಳ ಪೂರೈಕೆ, ಸಾಫ್ಟವೇರ್ ಅಭಿವೃದ್ಧಿ ಹಾಗೂ ಜಿಎಸ್​ಟಿ ಸೇರಿ ಹು-ಧಾ ಮಹಾನಗರ ಪಾಲಿಕೆ ಇದಕ್ಕೆ 45 ಲಕ್ಷ ರೂ. ಗಳನ್ನು ಖರ್ಚು ಮಾಡುತ್ತಿದೆ. ನಿತ್ಯ ಯಾವ ವಾರ್ಡ್​ಗಳಲ್ಲಿ ಎಷ್ಟು ಪೌರ ಕಾರ್ವಿುಕರು ಕೆಲಸ ನಿರ್ವಹಿಸಿದ್ದಾರೆ ? ಎಷ್ಟು ಜನ ಗೈರಾಗಿದ್ದಾರೆ ಎಂಬುದು ಸ್ವಯಂಚಾಲಿತವಾಗಿ ವರದಿಯಾಗುತ್ತದೆ. ಪಾಲಿಕೆಯ ಆರೋಗ್ಯ ನಿರೀಕ್ಷಕರು ಜಿಯೋ ಫೆನ್ಸಿಂಗ್ ಬಯೋಮೆಟ್ರಿಕ್ ಸಾಧನಗಳನ್ನು ಹಿಡಿದು ಹಾಜರಾತಿಯನ್ನು ದಾಖಲಿಸಿಕೊಳ್ಳಬೇಕು.

ಈ ವ್ಯವಸ್ಥೆಯಿಂದ ಪೌರ ಕಾರ್ವಿುಕರಿಗೆ ಪ್ರತಿ ತಿಂಗಳು ತ್ವರಿತವಾಗಿ ಸಂಬಳ ಪಾವತಿಯಾಗುವ ನಿರೀಕ್ಷೆ ಇದೆ. ಪೌರ ಕಾರ್ವಿುಕರ ಹಾಜರಾತಿ ಸಾಫ್ಟವೇರ್ ನಲ್ಲಿ ದಾಖಲಾಗಿ ನಿತ್ಯವೂ ನಿಖರವಾಗಿ ವರದಿಯಾಗುತ್ತದೆ. ಪ್ರತಿ ತಿಂಗಳ ಅಂತ್ಯಕ್ಕೆ ಪೌರ ಕಾರ್ವಿುಕರ ಹಾಜರಾತಿಯ ಪಕ್ಕಾ ಲೆಕ್ಕ ಸಿಗುತ್ತದೆ. ಇದರಿಂದ ಸಂಬಳ ಪಾವತಿಸಲು ವಿಳಂಬ ಆಗಲಾರದು. ಈಗಿರುವ ಮ್ಯಾನ್ಯುಯಲ್ ವ್ಯವಸ್ಥೆಯಲ್ಲಿ ಸಂಬಳ ಪಾವತಿ ವಿಳಂಬವಾಗುತ್ತಿದೆ. ಅವಳಿ ನಗರದಲ್ಲಿ 2300ಕ್ಕೂ ಅಧಿಕ ಪೌರ ಕಾರ್ವಿುಕರು ಇದ್ದಾರೆ.

ಪೌರ ಕಾರ್ವಿುಕರ ಹಾಜರಾತಿಗೆ ಜಿಯೋ ಫೆನ್ಸಿಂಗ್ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗುತ್ತಿದೆ. ಇದು ಫೇಸ್ ರೀಡಿಂಗ್ ಹಾಗೂ ರೆಟಿನಾ ಡಿಟೆಕ್ಷನ್ ಮೂಲಕ ಹಾಜರಾತಿಯನ್ನು ದಾಖಲಿಸುತ್ತದೆ. ಇದರಡಿ ಪ್ರತಿ ನಿತ್ಯ ಮೂರು ಬಾರಿ (ಬೆಳಗ್ಗೆ 6 ಗಂಟೆಗೆ, 10 ಗಂಟೆಗೆ ಹಾಗೂ ಕೊನೆಯಲ್ಲಿ ) ಪೌರ ಕಾರ್ವಿುಕರ ಹಾಜರಾತಿ ಪಡೆಯಲು ಉದ್ದೇಶಿಸಲಾಗಿದೆ. ಇದರಿಂದ ಅವಳಿ ನಗರದ ಸ್ವಚ್ಛತೆ ಕೆಲಸ ಪರಿಣಾಮಕಾರಿಯಾಗಿ ಆಗಲಿದೆ. ಡಾ. ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net