ಸಂಚಾರ ಪೊಲೀಸರಿಗೆ ಜಿಯೋ ಫೆನ್ಸಿಂಗ್

Traffic Police
Published on

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಸಿಲಿಕಾನ್ ಸಿಟಿಯಲ್ಲಿ ಮೈಗಳ್ಳತನ ತೋರುವ ಸಂಚಾರ ಪೊಲೀಸರ ಮೇಲೆ ನಿಗಾವಹಿಸಲು ‘ಜಿಯೋ ಫೆನ್ಸಿಂಗ್ ಅಳವಡಿಸಿ ‘ಇ-ಹಾಜರಾತಿ’ ಜಾರಿಗೆ ತರಲಾಗಿದೆ. ಇದರಿಂದ ಹಾಜತಿಯಲ್ಲಿ ಗೊಂದಲ ಸಹ ದೂರವಾಗಿದ್ದು, ಟ್ರಾಫಿಕ್ ಪೊಲೀಸರಿಗೂ ಅನುಕೂಲವಾಗಿದೆ.

ಬೆಂಗಳೂರಿನಲ್ಲಿ 50 ಟ್ರಾಫಿಕ್ ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 4,686 ಅಧಿಕಾರಿ, ಸಿಬ್ಬಂದಿ ಇದ್ದು, ಬಹುತೇಕರು ವಾಹನಗಳ ಸುಗಮ ಸಂಚಾರ ಕರ್ತವ್ಯದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನೂ 400 ಆಟೋಮೆಟಿಕ್ ಸಿಗ್ನಲ್ ಮತ್ತು 500 ಹ್ಯಾಂಡ್ ಸಿಗ್ನಲ್ ಸೇರಿ 900 ಸಿಗ್ನಲ್‌ಗಳಿವೆ. ಈ ಸಿಗ್ನಲ್‌ಗಳಿಗೆ ಬೆಳಗ್ಗೆ 7 ಗಂಟೆಗೆ ಟ್ರಾಫಿಕ್ ಪೊಲೀಸರು ಬಂದು ಸಾರ್ವಜನಿಕರ ಸುಗಮ ಸಂಚಾರ ನಿರ್ವಹಣೆಯಲ್ಲಿ ತೊಡಗುತ್ತಾರೆ.ಆದರಿಂದ ಇವರ ಹಾಜರಾತಿ ದಾಖಲಿಸುವುದು ದೊಡ್ಡ ಸವಾಲಾಗಿತ್ತು. ಪಾಳಿ ಮುಗಿಸಿ ಠಾಣೆಗೆ ಬಂದು ಹಾಜರಾತಿ ಪುಸ್ತಕಕ್ಕೆ ಸಹಿ ಮಾಡುತ್ತಿದ್ದರು. 2ನೇ ಪಾಳಿ ಇದ್ದವರು ಸಹಿ ಮಾಡಿ ಕರ್ತವ್ಯ ಸ್ಥಳಕ್ಕೆ ಹೋಗುತ್ತಿದ್ದರು. ಕೆಲವರು ನಿಗದಿತ ಸ್ಥಳಕ್ಕೆ ಸರಿಯಾದ ಸಮಯಕ್ಕೆ ಹೋಗದೆ ನಿರ್ಲಕ್ಷ್ಯ ತೋರುತ್ತಿದ್ದರು. ಸಿಗ್ನಲ್ ಬಿಟ್ಟು ಬೇರೆಡೆ ಕುಳಿತು ಕಾಲಹರಣ ಮಾಡುತ್ತಿದ್ದರು. ಇದರ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಮತ್ತೆ ಕೆಲವರು ಸರಿಯಾದ ಸಮಯಕ್ಕೂ ಬಂದು ಹೆಚ್ಚಿನ ಸಮಯ ಕರ್ತವ್ಯ ನಿರ್ವಹಿಸಿದರೂ ಲೆಕ್ಕಕ್ಕೆ ಸಿಗುತ್ತಿರಲಿಲ್ಲ.

ಗೊಂದಲವನ್ನು ಹೋಗಲಾಡಿಸುವ ಉದ್ದೇಶಕ್ಕೆ ‘ಜಿಯೋ ಫೆನ್ಸಿಂಗ್ ಅಳವಡಿಸಿ ‘ಇ-ಹಾಜರಾತಿ’ ಪದ್ಧತಿಯನ್ನು ಜಾರಿಗೆ ತರಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಯೋಗಿಕವಾಗಿ ಜಾರಿಗೆ ತಂದು ಯಶಸ್ವಿ ಆಗಿದೆ. ಆದರಿಂದ ನಗರದ 4 ಉಪವಿಭಾಗದ 50 ಟ್ರಾಫಿಕ್ ಪೊಲೀಸ್ ಠಾಣೆಗಳಲ್ಲಿ ಜಾರಿಗೆ ತಂದಿದ್ದು, 900 ಸಿಗ್ನಲ್‌ಗಳಲ್ಲಿ ಜಿಯೋ ೆನ್ಸಿಂಗ್ ಅಳವಡಿಸಲಾಗಿದೆ. ಪ್ರತಿಯೊಬ್ಬ ಟ್ರಾಫಿಕ್ ಪೊಲೀಸ್ ಇ-ಹಾಜರಾತಿ ತಂತ್ರಾಂಶ ಡೌನ್‌ಲೋಡ್ ಮಾಡಿಕೊಂಡು ಲಾಗಿನ್ ಆಗಿದ್ದಾರೆ. ಹಿಂದಿನ ದಿನವೇ ಅಧಿಕಾರಿ, ಸಿಬ್ಬಂದಿಗೆ ಮಾರನೇ ದಿನ ಯಾವ ಸಿಗ್ನಲ್‌ನಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕೆಂದು ಕೆಲಸ ನೀಡಲಾಗುತ್ತದೆ.

ಬೆಳಗ್ಗೆ 7.10ಕ್ಕೆ ಮತ್ತು ಮಧ್ಯಾಹ್ನ 2.10ರ ಒಳಗೆ ನಿಗದಿತ ಸಿಗ್ನಲ್‌ಗೆ ಹೋಗಿ ಮೊಬೈಲ್‌ನಲ್ಲಿ ಲಾಗಿನ್ ಆದರೆ ಹಾಜರಾತಿ ಬೀಳಲಿದೆ. ಇಲ್ಲವಾದರೆ, ಠಾಣಾ ಇನ್‌ಸ್ಪೆಕ್ಟರ್‌ಗೆ ಮತ್ತು ಸಂಚಾರ ನಿರ್ವಹಣ ಕೇಂದ್ರಕ್ಕೆ (ಟಿಎಂಸಿ) ಗೈರು ಆಗಿರುವ ಮಾಹಿತಿ ರವಾನೆ ಆಗಲಿದೆ. ಈ ಬಗ್ಗೆ ಮೇಲಾಧಿಕಾರಿಗೆ ಸಮಜಾಯಿಸಿ ನೀಡಬೇಕಾಗುತ್ತದೆ. ಪದೇಪದೆ ಗೈರು ಆದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

25 ಮೀಟರ್ ದಾಟಂಗಿಲ್ಲ

900 ಸಿಗ್ನಲ್‌ಗಳಲ್ಲಿ ‘ಜಿಯೋ ಫೆನ್ಸಿಂಗ್ ತಂತ್ರಾಂಶ ಅಳವಡಿಸಲಾಗಿದ್ದು, 25 ಮೀಟರ್ ಒಳಗೆ ಟ್ರಾಫಿಕ್ ಪೊಲೀಸ್ ಬಂದರೆ ಇ-ಹಾಜರಾತಿ ದಾಖಲಾಗುತ್ತದೆ. ಅದರಿಂದ ಹೊರಗೆ ಹೋದರೆ ತಕ್ಷಣ ಠಾಣಾಧಿಕಾರಿ ಮತ್ತು ಕಂಟ್ರೋಲ್ ರೂಮ್‌ಗೆ ಎಚ್ಚರಿಕೆ ಸಂದೇಶ ಬರಲಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ‘ವಿಜಯಾವಾಣಿ’ಗೆ ಮಾಹಿತಿ ನೀಡಿದರು. ಟ್ರಾಫಿಕ್ ಅಧಿಕಾರಿ, ಸಿಬ್ಬಂದಿ ಮೇಲೆ ಜಿಯೋೆನ್ಸಿಂಗ್ ನಿಗಾ ವಹಿಸುವ ಕಾರಣಕ್ಕೆ ನಿಗದಿತ ಸ್ಥಳದಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಾರೆ. ಪರಿಣಾಮ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಆಗಲಿದೆ.

ಏನಿದು ಜಿಯೋ ಫೆನ್ಸಿಂಗ್ ?

ಜಿಯೋಫೆನ್ಸಿಂಗ್ ಎನ್ನುವುದು ನಿಗದಿತ ಪ್ರದೇಶದ ಸುತ್ತ ವರ್ಚುವಲ್ ಗಡಿಯನ್ನು ಗುರುತಿಸುವುದು ಅಥವಾ ಬೇಲಿ ಹಾಕುವುದು ಎನ್ನಬಹುದಾಗಿದೆ. ಜಿಯೋ ಫೆನ್ಸಿಂಗ್ ಸಕ್ರಿಯಗೊಳಿಸಿದ ಮೊಬೈಲ್ ಅಥವಾ ಇತರೆ ಎಲೆಕ್ಟ್ರಾನಿಕ್ಸ್ ಸಾಧನಗಳು ನಿಗದಿತ ಸ್ಥಳಕ್ಕೆ ಬಂದಾಗ ತನ್ನ ಕ್ರಿಯೆ ಶುರು ಮಾಡಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net