ನದಿಯಂತೆ ಸಜ್ಜನರು...

5-687fd8090bef1
Published on
ಸುಭಾಷಿತಕಾರ ಸಜ್ಜನರ ಸ್ವಭಾವವನ್ನು ,

ಪರಗುಣಪರಮಾಣಿಂ ಪರ್ವತೀ ಕೃತ್ಯ ನಿತ್ಯಂ|

ನಿಜಹೃದಿ ವಿಕಸಂತಃ ಸಂತಿ ಸಂತಃ ಕಿಯಂತಃ||

ಎಂದಿದ್ದಾನೆ. ಇನ್ನೊಬ್ಬರ ಸದ್ಗುಣವನ್ನೂ, ಉಪಕಾರವನ್ನೂ ಅತಿ ಶಯವಾಗಿ ವರ್ಣಿಸಿ ತಮ್ಮಹೃದಯ ವೈಶಾಲ್ಯವನ್ನು ಸಂತರು ಪ್ರಕಟಿಸು ತ್ತಾರಂತೆ. ಇಂದಿನ ಸಮಾಜದಲ್ಲಿ ಯಾರು ಏನು ತಪ್ಪು ಮಾಡಿದರೂ ಅದನ್ನು ರ್ಚಚಿಸಿ, ಟೀಕಿಸುವ ಮನೋಭಾವನೆ ಹೆಚ್ಚಾಗಿದೆ. ಆದರೆ ಇತರರಲ್ಲಿ ಅತ್ಯಲ್ಪ ಸದ್ಗುಣವಿದ್ದರೂ ಅದನ್ನು ಗಮನಿಸಿ, ಮೆಚ್ಚಿ, ಪೋ›ತ್ಸಾಹಿಸುವ ಗುಣವು ಶ್ರೇಷ್ಠ ಸಜ್ಜನನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಇಂಥವರ ಮನಸ್ಸು ನದಿಯಂತೆ ತಮ್ಮಲ್ಲಿರುವ ಶುದ್ಧ ಜಲದಿಂದ ಇತರರ ಜೀವನವನ್ನೂ ತಣಿಸುತ್ತವೆ. ಪರರ ಸಾಧನೆ, ಶ್ರಮ, ಪ್ರಾಮಾಣಿಕತೆ, ಇಂತಹ ಗುಣಗಳನ್ನು ಗುರುತಿಸಿ ಹೊಗಳುವ ವ್ಯಕ್ತಿಯು ನಿಜವಾದ ಹೃದಯವಂತನು.

ಅವನಿಗೆ ಈಶ್ವರನ ಕೃಪೆ, ಸಮಾಜದ ಗೌರವ, ಹಾಗೂ ಆತ್ಮಸಂತೋಷ ಈ ಮೂರೂ ದೊರೆಯುತ್ತವೆ. ಇತರರ ಒಳ್ಳೆಯತನವನ್ನು ದೊಡ್ಡದಾಗಿ ಪರಿಗಣಿಸುವ ಗುಣವು ನಿಜವಾದ ಧರ್ಮ ಮತ್ತು ಮನಃಶುದ್ಧಿಯ ಸೂಚನೆ. ಇದು ಸಜ್ಜನರ ಸಹಜ ಸ್ವಭಾವ. ಯಾರೂ ಕಲಿಸಿಕೊಟ್ಟದ್ದಲ್ಲ. ಇದರಿಂದಾಗಿಯೇ ಅವರು ಅಜಾತಶತ್ರುಗಳಾಗಿರುತ್ತಾರೆ. ಈ ಸ್ವಭಾವವೇ ಅವರ ಮೇಲಿನ ಗೌರವವನ್ನು ಇಮ್ಮಡಿಗೊಳಿಸುತ್ತದೆ. ಲೋಕದಲ್ಲಿ ಎಲ್ಲರೂ ಅವರನ್ನು ಪ್ರೀತಿಸುವುದಕ್ಕೆ ಕಾರಣವಾಗುತ್ತದೆ. ಸಂತರಿಗೂ ಸಾಮಾನ್ಯ ವ್ಯಕ್ತಿಗೂ ಇರುವ ವ್ಯತ್ಯಾಸವೇ ಇದು.

ಮಹಾತ್ಮ ಯಾವಾಗಲೂ ಮತ್ತೊಬ್ಬರಲ್ಲಿ ಒಳ್ಳೆಯದನ್ನೇ ನೋಡುತ್ತಾನೆ. ಒಳ್ಳೆಯವರಲ್ಲಿ ಒಳ್ಳೆಯದನ್ನು ಕೆಟ್ಟವರಲ್ಲಿ ಕೆಟ್ಟದ್ದನ್ನು ನೋಡುವುದು ವಿಶೇಷವೇನೂ ಅಲ್ಲ. ಅದನ್ನು ಎಲ್ಲರೂ ನೋಡುತ್ತಾರೆ. ಆದರೆ ಯಾವ ವ್ಯಕ್ತಿ ಕೆಟ್ಟವರಲ್ಲಿಯೂ ಒಳ್ಳೆಯತನವನ್ನು ನೋಡುವನೋ ಅವನೇ ಸಂತ. ರಾಮನಲ್ಲಿ ಒಳ್ಳೆಯತನವನ್ನು ಎಲ್ಲರೂ ನೋಡುತ್ತಾರೆ. ಅವನಲ್ಲಿ ಕೆಟ್ಟದ್ದನ್ನು ನಾವು ಹುಡುಕಬೇಕು. ಆದರೆ ರಾವಣನಲ್ಲಿಯೂ ಯಾರು ಒಳ್ಳೆಯತನವನ್ನು ನೋಡುವರೋ ಅದು ಬಹಳ ವಿಶೇಷ. ಕಾರಣ ರಾವಣನಲ್ಲಿ ಒಳ್ಳೆಯ ಗುಣಗಳನ್ನು ನೋಡಿದರೆ ರಾವಣನೇನೂ ಒಳ್ಳೆಯವನಾಗುವುದಿಲ್ಲ. ಆದರೆ ಈ ಗುಣದಿಂದ ನಾವು ಒಳ್ಳೆಯವರಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net