

ನವದೆಹಲಿ: ಉನ್ನತ ಗುಣಮಟ್ಟದ ಮತ್ತು ಕೈಗೆಟುಕುವ ಬೆಲೆಯಲ್ಲಿ ಜನರಿಕ್ ಪಶು ವೈದ್ಯಕೀಯ ಔಷಧಗಳನ್ನು ಪೂರೈಸುವ ಸಲುವಾಗಿ 3880 ಕೋಟಿ ರೂ. ವೆಚ್ಚದ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ (ಎಲ್ಎಚ್ಡಿಸಿಪಿ) ಬದಲಾವಣೆ ತರಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
2024-25 ಮತ್ತು 2025-26ನೇ ಸಾಲಿನ ಎಲ್ಎಚ್ಡಿಸಿಪಿ ಕಾರ್ಯಕ್ರಮಕ್ಕಾಗಿ 3880 ಕೋಟಿ ರೂ. ಮೀಸಲಿಡಲಾಗಿದೆ. ಈ ಕಾರ್ಯಕ್ರಮದಲ್ಲಿ ಪಶು ಔಷಧ ಘಟಕ ಸೇರಿಸಲಾಗಿದ್ದು, ಇದರಡಿ ಉನ್ನತ ಗುಣಮಟ್ಟದ ಔಷಧಗಳನ್ನು ಪೂರೈಸಲಾಗುವುದು. ಇದಕ್ಕಾಗಿ 75 ಕೋಟಿ ರೂ. ಮೀಸಲಿಟ್ಟಿದ್ದು, ಜನೌಷಧಿ ಯೋಜನೆಯಂತೆ ಪಶು ಔಷಧಿ ಘಟಕ ಕಾರ್ಯನಿರ್ವಹಿಸಲಿದೆ. ಇದರ ಅಡಿಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳು ಮತ್ತು ಸಹಕಾರ ಸಂಘಗಳ ಮೂಲಕ ಜನರಿಕ್ ಪಶುವೈದ್ಯಕೀಯ ಔಷಧಗಳನ್ನು ಪೂರೈಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿ ಕಾಲು-ಬಾಯಿ ರೋಗ, ಬ್ರೂಸಲೋಸಿಸ್ ಸೇರಿ ಹಲವು ರೋಗಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ. ಪ್ರಸ್ತುತ ದೇಶದಲ್ಲಿ 9 ರಾಜ್ಯಗಳು ಕಾಲು-ಬಾಯಿ ರೋಗ ಮುಕ್ತವಾಗುವ ಹಂತದಲ್ಲಿವೆ. ಕರ್ನಾಟಕ, ಪಂಜಾಬ್, ಹರಿಯಾಣ, ಉತ್ತರಾಖಂಡ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಈ ರೋಗ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಭಾರತ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದ್ದು, ಕಾಲು-ಬಾಯಿ ರೋಗಮುಕ್ತ ಮತ್ತು ವ್ಯವಸ್ಥಿತ ಹಾಗೂ ದಾಖಲೆಗಳನ್ನು ಒಳಗೊಂಡ ಲಸಿಕೆ ಕಾರ್ಯಕ್ರಮ ಹಾಲು ಮತ್ತು ಡೇರಿ ಉತ್ಪನ್ನಗಳನ್ನು ರಫ್ತು ಮಾಡಲು ಅನುಕೂಲ ಮಾಡಿಕೊಡುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ರೋಪ್ವೇಗೆ ಕೇಂದ್ರ ಅಸ್ತು: ಯಾತ್ರಾ ಸ್ಥಳಗಳಿಗೆ ಪ್ರಯಾಣದ ಸಮಯವನ್ನು ಗಣನೀಯವಾಗಿ ತಗ್ಗಿಸುವ ಸಲುವಾಗಿ ಹಾಗೂ ಪ್ರವಾಸೋದ್ಯಮವನ್ನು ಹೆಚ್ಚಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ಉತ್ತರಾಖಂಡದ ಸೋನ್ಪ್ರಯಾಗದಿಂದ ಕೇದಾರನಾಥ ಮತ್ತು ಗೋವಿಂದಘಾಟ್ನಿಂದ ಹೇಮಕುಂಡ್ ಸಾಹಿಬ್ಗೆ ಒಟ್ಟು 6,811 ಕೋಟಿ ರೂ. ವೆಚ್ಚದಲ್ಲಿ 2 ರೋಪ್ವೇ ಯೋಜನೆಗಳಿಗೆ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿದ ಸಚಿವ ಅಶ್ವಿನಿ ವೈಷ್ಣವ್, ಈ 2 ಮಹತ್ವಾಕಾಂಕ್ಷಿ ಯೋಜನೆಗಳ ನಿಮಾಣಕ್ಕೆ 4ರಿಂದ 6 ವರ್ಷಗಳ ಕಾಲಾವಕಾಶ ಬೇಕಾಗಲಿದೆ ಎಂದಿದ್ದಾರೆ. ಸೋನ್ಪ್ರಯಾಗ್ನಿಂದ ಕೇದಾರನಾಥಕ್ಕೆ ಒಟ್ಟು 4,081.28 ಕೋಟಿ ರೂ. ವೆಚ್ಚದಲ್ಲಿ 12.9 ಕಿ.ಮೀ. ರೋಪ್ವೇ ನಿರ್ವಿುಸಲಾಗುತ್ತದೆ. ಈ ರೋಪ್ವೇ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೖದ್ಧಿಪಡಿಸಲು ಯೋಜಿಸಲಾಗಿದೆ ಹಾಗೂ ಇದು ಅತ್ಯಂತ ಮುಂದುವರಿದ ತಂತ್ರಜ್ಞಾನವನ್ನು ಆಧರಿಸಿದೆ. ಇದು ಗಂಟೆಗೆ 1,800 ಪ್ರಯಾಣಿಕರಂತೆ, ಒಂದು ದಿನಕ್ಕೆ 18,000 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಗೋವಿಂದಘಾಟ್ನಿಂದ ಹೇಮಕುಂಡ್ ಸಾಹಿಬ್ವರೆಗಿನ 12.4 ಕಿ.ಮೀ. ರೋಪ್ವೇ 2,730.13 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು.