

ಬೆಂಗಳೂರು: ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ಕಹಿ ನೆನಪು ಮಾಸುವ ಮುನ್ನವೇ ನಗರದ ಶಾಲೆಯೊಂದರ ಮುಂಭಾಗದಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿದೆ.
ಜಿಲೆಟಿನ್ ಕಡ್ಡಿ, ಡಿಟೋನೇಟರ್ ಹಾಗೂ ಇತರ ಕೆಲವು ಸ್ಫೋಟಕಗಳು ಬೆಳ್ಳಂದೂರಿನ ಶಾಲೆಯ ಸಮೀಪದ ಖಾಲಿ ಜಮೀನಿನಲ್ಲಿ ಪತ್ತೆಯಾಗಿದೆ.
ಸ್ಫೋಟಕಗಳನ್ನು ಟ್ರಾಕ್ಟರ್ ಒಂದರಲ್ಲಿ ಇಡಲಾಗಿತ್ತು. ಮೆಲ್ನೋಟಕ್ಕೆ ಕಟ್ಟಡ ನಿರ್ಮಾಣ ಮಾಡುವ ಜಾಗದಲ್ಲಿ ಬಂಡೆಗಳ ಸ್ಫೋಟಿಸಲು ಸ್ಫೋಟಕಗಳನ್ನು ತಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ, ಅಕ್ರಮವಾಗಿ ಸ್ಫೋಟಕ ವಸ್ತು ಸಂಗ್ರಹಿಸಲಾಗಿದೆ. ಸದ್ಯ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಸಂಗ್ರಹ ಮಾಡಿದ್ದಾರೆ ಎಂದು ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
ಕಲ್ಲು ಕ್ವಾರೆಗೆ ಬಳಕೆ ಮಾಡುವ ಜಿಲೆಟಿನ್:
ಮಾ.೧೭ ರಂದು ರಾತ್ರಿ ೧೧ ಗಂಟೆ ಪೊಲೀಸರು ಗಸ್ತು ತಿರುಗುವ ವೇಳೆ ಅನುಮಾನಗೊಂಡು ಟ್ರಾಕ್ಟರ್ ಬಳಿ ತೆರಳಿ ಪರಿಶೀಲನೆ ನಡೆಸಿದ್ದಾಗ ಟ್ರಾಕ್ಟರ್‌ನ ಟೂಲ್ಸ್ ಬಾಕ್ಸ್‌ನಲ್ಲಿ ಜಿಲೆಟಿನ್ ಕಡ್ಡಿಗಳು ಇರುವುದು ಪತ್ತೆಯಾಗಿದೆ. ಈ ಟ್ರಾಕ್ಟರ್ ಅನ್ನು ಹಗಲು ಹೊತ್ತಿನಲ್ಲಿ ಕಲ್ಲು ಕ್ವಾರೆ ಕೊರೆಯುವಂತ ಕೆಲಸಕ್ಕೆ ಬಳಕೆ ಮಾಡಲಾಗುತ್ತದೆ. ರಾತ್ರಿ ವೇಳೆ ಟ್ರಾಕ್ಟರ್ ಅನ್ನು ಬಯಲು ಪ್ರದೇಶದಲ್ಲಿ ಪಾರ್ಕ್ ಮಾಡಲಾಗುತ್ತದೆ. ಇದರ ಪರಿಶೀಲನೆ ವೇಳೆ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದೆ. ಇದಕ್ಕೆ ಬೇರೆ ಬಣ್ಣ ಕೊಡುವ ಅಥವಾ ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.