

Gaza : ಯುದ್ಧಪೀಡಿತ ಗಾಜಾ ಪಟ್ಟಿ ತೀವ್ರ ಸಂಕಷ್ಟದಲ್ಲಿದೆ. ಅಲ್ಲಿನ ಜನರು ನಿರಂತರವಾಗಿ ಸಹಾಯಕ್ಕೋಸ್ಕರ ಎದುರು ನೋಡುತ್ತಿದ್ದಾರೆ. ಯುದ್ಧದಿಂದಾಗಿ ಆಹಾರ ಕೊರತೆ ಮತ್ತು ಉದ್ಯೋಗ ನಷ್ಟವಾಗಿದ್ದು, ಅಲ್ಲಿನ ಜನಸಂಖ್ಯೆಯನ್ನು ತೀವ್ರವಾಗಿ ದುರ್ಬಲಗೊಳಿಸಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಪುರುಷರು ಸಹಾಯದ ಹೆಸರಿನಲ್ಲಿ ಲೈಂಗಿಕ ಶೋಷಣೆ ಮಾಡುತ್ತಿದ್ದಾರೆ ಎಂದು ಸ್ಥಳೀಯ ಮಹಿಳೆಯರು ಮಾಧ್ಯಮಗಳಲ್ಲಿ ಆರೋಪಿಸಿದ್ದಾರೆ.
ದಕ್ಷಿಣ ಗಾಜಾ ಪಟ್ಟಿಯ ಖಾನ್ ಯೂನಿಸ್‌ನಲ್ಲಿ ನಿರಾಶ್ರಿತರ ಶಿಬಿರದಲ್ಲಿರುವ ಅನೇಕ ಮಂದಿ ಅಸೋಸಿಯೇಟೆಡ್ ಪ್ರೆಸ್‌ಗೆ ತಮ್ಮ ದುಸ್ಥಿತಿಯನ್ನು ವಿವರಿಸಿದ್ದಾರೆ. ಹೆಸರೇಳಲು ಬಯಸದ 38 ವರ್ಷದ ತಾಯಿಯೊಬ್ಬರು ಮಾತನಾಡಿದ್ದು, ತಮ್ಮ ಆರು ಮಕ್ಕಳಿಗೆ ಆಹಾರವನ್ನು ಪಡೆಯಲು ವಾರಗಟ್ಟಲೆ ಕಾಯುತ್ತಿದ್ದಾಗ ತನಗೆ ಎದುರಾದ ಸಂಕಷ್ಟವನ್ನು ವಿವರಿಸಿದ್ದಾರೆ. ಓರ್ವ ವ್ಯಕ್ತಿ ಸೇವಾ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ, ನನ್ನನ್ನು ಖಾಲಿ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದನು. ನಾನು ತಕ್ಷಣ ಅಲ್ಲಿಂದ ಹೊರಡಲು ಬಯಸಿದ್ದೆ ಆದರೆ, ಮಕ್ಕಳಿಗೆ ಆಹಾರವನ್ನು ಪಡೆಯಲು ಅವನು ಹೇಳಿದಂತೆ ಮಾಡಬೇಕಾಯಿತು. ನನ್ನನ್ನು ಬಳಸಿಕೊಂಡ ಬಳಿಕ ಆತನ ತನಗೆ ಸ್ವಲ್ಪ ನಗದು ಮತ್ತು ಆಹಾರವನ್ನು ಕೊಟ್ಟನು. ಅದನ್ನು ತನ್ನ ಮಕ್ಕಳಿಗೆ ತಿನ್ನಿಸಿದ್ದೇನೆ. ಆದರೆ, ಆತ ಭರವಸೆ ನೀಡಿದ ಕೆಲಸವನ್ನು ನೀಡಲಿಲ್ಲ ಎಂದು ತಮ್ಮ ಸಹಾಯಕತೆಯನ್ನು ತೋಡಿಕೊಂಡಿದ್ದಾರೆ.
ಆಹಾರಕ್ಕೆ ಪ್ರತಿಯಾಗಿ ಕೆಲವು ಪುರುಷರು ಮಹಿಳೆಯರನ್ನು ಹೇಗೆ ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದಾರೆ ಎಂಬುದಕ್ಕೆ ಈ ಒಂದು ಘಟನೆ ಕರಾಳ ಉದಾಹರಣೆಯಾಗಿದೆ.
ಇನ್ನು ಗಾಜಾದಲ್ಲಿರುವ ನೆರವು ಗುಂಪುಗಳು ಮತ್ತು ಮಾನವ ಹಕ್ಕುಗಳ ವಕೀಲರು ಕೂಡ ಇದನ್ನೇ ಹೇಳುತ್ತಾರೆ. ದಕ್ಷಿಣ ಸುಡಾನ್‌ನಿಂದ ಹೈಟಿವರೆಗಿನ ಯುದ್ಧ ವಲಯಗಳಲ್ಲಿ ಇದು ದೈನಂದಿನ ಘಟನೆಯಾಗಿದೆ ಎಂದು ಹೇಳುತ್ತಿದ್ದಾರೆ. ಮಾನವೀಯ ಬಿಕ್ಕಟ್ಟುಗಳು ಜನರನ್ನು ಹಲವು ವಿಧಗಳಲ್ಲಿ ದುರ್ಬಲರನ್ನಾಗಿಸುತ್ತವೆ ಎಂಬುದು ಭಯಾನಕ ವಾಸ್ತವ ಎಂದು ಹ್ಯೂಮನ್ ರೈಟ್ಸ್ ವಾಚ್ ಸಂಘಟನೆಯ ಮಹಿಳಾ ಹಕ್ಕುಗಳ ವಿಭಾಗದ ಸಹಾಯಕ ನಿರ್ದೇಶಕಿ ಹೀದರ್ ಬಾರ್ ಹೇಳಿದ್ದಾರೆ.
ಗಾಜಾದಲ್ಲಿ ಮಹಿಳೆಯರು ಮತ್ತು ಹುಡುಗಿಯರು ಭೀಕರ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. ಪ್ಯಾಲೇಸ್ತೀನಿಯನ್ ಮನಶ್ಶಾಸ್ತ್ರಜ್ಞರು, ಲೈಂಗಿಕವಾಗಿ ಶೋಷಣೆಗೆ ಒಳಗಾದ ಕೆಲವು ಮಹಿಳೆಯರಿಗೆ ಚಿಕಿತ್ಸೆ ನೀಡಿದ್ದಾರೆ. ಆಘಾತಕಾರಿ ಸಂಗತಿ ಏನೆಂದರೆ, ಲೈಂಗಿಕವಾಗಿ ಶೋಷಣೆಗೆ ಒಳಗಾದ ಕೆಲವು ಮಹಿಳೆಯರು ಗರ್ಭಿಣಿಯಾಗಿದ್ದಾರೆ ಎಂದು ಹೀದರ್ ಕರಾಳ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.
ಇನ್ನು ಕಳೆದ ವರ್ಷ ಗಾಜಾದಲ್ಲಿ 18 ಲೈಂಗಿಕ ದೌರ್ಜನ್ಯಗಳನ್ನು ದಾಖಲಿಸಿರುವುದಾಗಿ PSEA ನೆಟ್‌ವರ್ಕ್ ತಿಳಿಸಿದೆ. (ಏಜೆನ್ಸೀಸ್)