

Gautam Adani : ಭಾರತದ ನಂಬರ್ 1 ಶ್ರೀಮಂತ ಮುಕೇಶ್ ಅಂಬಾನಿ ಅವರ ಪುತ್ರ ಆನಂದ್ ಅಂಬಾನಿ ಅವರ ವಿವಾಹವು ಭಾರತ ಕಂಡ ಅತ್ಯಂತ ಅದ್ದೂರಿ ವಿವಾಹವೆಂದೇ ಖ್ಯಾತಿ ಪಡೆದಿದೆ. ಆನಂದ್ ಮತ್ತು ರಾಧಿಕಾ ಮರ್ಚೆಂಟ್ ನಡುವಿನ ವಿವಾಹವು ಜಾಗತಿಕ ಮಾಧ್ಯಮಗಳಲ್ಲಿಯೂ ಭಾರಿ ಸುದ್ದಿಯಾಗಿತ್ತು. ಹಲವು ದಿನಗಳವರೆಗೆ ನಡೆದ ವಿವಾಹ ಸಮಾರಂಭದಲ್ಲಿ ಕೈಲಾಸವೇ ಧರೆಗಿಳಿದಂತೆ ಭಾಸವಾಯಿತು. ಅದ್ಧೂರಿ ವಿವಾಹವನ್ನು ನೋಡಿ ದೇಶದ ಜನತೆ ತಮ್ಮ ಬಾಯಿ ಮೇಲೆ ಬೆರಳಿಟ್ಟುಕೊಂಡರು. ಇದೀಗ ಮತ್ತೊಬ್ಬ ಶ್ರೀಮಂತನ ಪುತ್ರನ ಮದುವೆ ನಿಶ್ಚಯವಾಗಿದೆ.
ಹೌದು, ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಗೌತಮ್ ಅದಾನಿಯವರ ಕಿರಿಯ ಪುತ್ರ ಜೀತ್ ಅದಾನಿ ಅವರು ಫೆಬ್ರವರಿ 7 ರಂದು ಅಹಮದಾಬಾದ್‌ನಲ್ಲಿ ವಿವಾಹವಾಗಲಿದ್ದಾರೆ. ಈ ಮದುವೆ ಮತ್ತು ಯೋಜಿತ ಸಮಾರಂಭಗಳ ಬಗ್ಗೆ ತಂದೆ ಗೌತಮ್ ಅದಾನಿ ಅವರೇ ಬಹಿರಂಗಪಡಿಸಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಗೌತಮ್ ಅದಾನಿ ಆಗಮಿಸಿದಾಗ, ಮಾಧ್ಯಮಗಳು ಅವರನ್ನು ಮಗನ ಮದುವೆಯ ಕುರಿತು ಪ್ರಶ್ನಿಸಿದರು. ಸಾಕಷ್ಟು ತಾರಾಬಳಗದೊಂದಿಗೆ ನಿಮ್ಮ ಮಗನ ಮದುವೆ ಕುಂಭಮೇಳದಂತೆ ನಡೆಯುತ್ತದೆಯೇ ಎಂದು ಪ್ರಶ್ನಿಸಿದಾಗ, ಪ್ರತಿಕ್ರಿಯಿಸಿದ ಅದಾನಿ, ನನ್ನ ಮಗನ ಮದುವೆಯೂ ಎಂದಿಗೂ ಅಂತಹ ಸಮಾರಂಭವಾಗುವುದಿಲ್ಲ ಮತ್ತು ಸಾಮಾನ್ಯ ಜನರ ವಿವಾಹದಂತೆಯೇ ನನ್ನ ಮಗನ ಮದುವೆ ಇರುತ್ತದೆ ಎಂದು ಹೇಳಿದರು.
ನಾನು ತುಂಬಾ ಬೆಳೆದಿರಬಹುದು ಆದರೆ, ನನ್ನ ಜೀವನಶೈಲಿ ಸಾಮಾನ್ಯ ಕಾರ್ಮಿಕರ ಜೀವನಶೈಲಿಯಂತಿದೆ. ಜೀತ್ ಕೂಡ ಗಂಗಾ ಮಾತೆಯ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದಾನೆ. ಸಾಮಾನ್ಯ ಜನರಂತೆ ಆತನ ಮದುವೆಯು ಕೂಡ ತುಂಬಾ ಸರಳವಾಗಿರುತ್ತದೆ ಎಂದು ಗೌತಮ್ ಅದಾನಿ ಸ್ಪಷ್ಟಪಡಿಸಿದ್ದಾರೆ.
ವಧು ಸೂರತ್ ಮೂಲದ ವಜ್ರ ವ್ಯಾಪಾರಿ ಜೈಮಿನ್ ಶಾ ಅವರ ಪುತ್ರಿ ದಿವಾ ಶಾ. ಅಮೆರಿಕದಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ಜೀತ್, 2019 ರಲ್ಲಿ ಅದಾನಿ ಗ್ರೂಪ್‌ನ ಭಾಗವಾದರು. ಜೀತ್ ಮತ್ತು ದಿವಾ 2023ರ ಮಾರ್ಚ್ ತಿಂಗಳಲ್ಲಿ ಅಹಮದಾಬಾದ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. (ಏಜೆನ್ಸೀಸ್)