

ಶಿವಮೊಗ್ಗ: ನಾಟಕವೆಂದರೆ ಸಂತೋಷದಿಂದ ಮೆಲುಕು ಹಾಕುವ ಒಂದು ಸುಂದರವಾದ ರಂಗ ಕಲೆ. ಶಿವಮೊಗ್ಗ ಮೊದಲಿನಿಂದಲೂ ನಾಟಕಕ್ಕೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ನಾನು ಕೂಡಾ ನಾಟಕದಲ್ಲಿ ಅಭಿನಯಿಸಿದ್ದೇನೆ. ರಂಗದ ಹಿಂದೆಯೂ ಕೆಲಸ ಮಾಡಿದ್ದೇನೆ. ನಾಟಕ ತಂಡವನ್ನು ಕಟ್ಟಿಕೊಂಡು ಸೈಕಲ್‌ನಲ್ಲಿ ಶಿವಮೊಗ್ಗದಿಂದ ಶೃಂಗೇರಿಗೆ ಪ್ರಯಾಣ ಮಾಡಿದ ನೆನಪು ಇನ್ನೂ ಮಾಸಿಲ್ಲ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಪ್ರೊ. ಗೌರಿಶಂಕರ್ ಅಭಿನಂದನಾ ಸಮಿತಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗೌರಿಶಂಕರ್ ನಾಟಕೋತ್ಸವದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಹಿಂದೆ ಸಂಪೂರ್ಣ ಹಣವನ್ನು ಜನರಿಂದಲೇ ಸಂಗ್ರಹಿಸಿ ನಾಟಕ ಪ್ರದರ್ಶಿಸಬೇಕಿತ್ತು. ಈಗ ಅನೇಕ ಸಂಘ ಸಂಸ್ಥೆಗಳು ಪ್ರಾಯೋಜಕತ್ವ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ನಗರ ಪಾಲಿಕೆಯಿಂದ ಪ್ರತಿವರ್ಷ ದಸರಾ ರಂಗೋತ್ಸವ ಏರ್ಪಡಿಸಿ ರಂಗ ಕಲಾವಿದರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಎಚ್.ಎಂ. ಪ್ರಭಾಕರ ಅವರ ಹೆಸರಿನಲ್ಲಿ ನಾಟಕ ಪ್ರದರ್ಶನಕ್ಕೂ ನಿಧಿ ಇರಿಸಲಾಗಿದೆ. ಶಿವಮೊಗ್ಗದಲ್ಲಿ ನಾಟಕೋತ್ಸವ ನಡೆಸುವುದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ರಂಗಕರ್ಮಿಗಳಾದ ಕಾಂತೇಶ್ ಮೂರ್ತಿ, ಡಾ. ಕೆ.ಜಿ.ವೆಂಕಟೇಶ್, ಪ್ರೊ. ಎಸ್.ಸಿ.ಗೌರಿಶಂಕರ್, ಡಾ. ಸತೀಶ್ ಸಾಸ್ವೇಹಳ್ಳಿ, ಪ್ರೊ. ಎಚ್.ಎಸ್.ನಾಗಭೂಷಣ, ಪ್ರೊ. ಹಾಲೇಶ್ ಇತರರಿದ್ದರು.