ಮಾಲಂಬಿಯಲ್ಲಿ ಗೌರಿ-ಗಣೇಶ ಅದ್ದೂರಿ ವಿಸರ್ಜನೋತ್ಸವ

7ss4mevanige
ಶನಿವಾರಸಂತೆಯಲ್ಲಿ ಭಾನುವಾರ ಗೌರಿ-ಗಣೇಶ ವಿಸರ್ಜನೆಗೂ ಮುನ್ನ ಮೆರವಣಿಗೆ ನಡೆಯಿತು.
Published on

ಶನಿವಾರಸಂತೆ: ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸಮಿಪದ ಮಾಲಂಬಿ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ 20ನೇ ವರ್ಷದ ಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿ, ಗೌರಿ-ಗಣೇಶ ವಿಸರ್ಜನೋತ್ಸವ ಕಾರ್ಯಕ್ರಮದ ಪ್ರಯುಕ್ತ ಶನಿವಾರ ಸಂಜೆ ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಗ್ರಾಮದ ಹಿರಿಯರಾದ ಕೆ.ಎಂ.ಮಾಚಯ್ಯ ಮತ್ತು ಮಾದಪ್ಪ ಜಂಟಿಯಾಗಿ ಉದ್ಘಾಟಿಸಿ ಮಾತನಾಡಿ, ಇಂದು ಯುವ ಸಮೂಹದವರು ಆಚರಣೆ, ಸಂಸ್ಕೃತಿ, ಆಚಾರ-ವಿಚಾರ ಮರೆತ್ತಿದ್ದಾರೆ. ಇಂಥಹ ಸಂದರ್ಭದಲ್ಲಿ ಯುವಕರು ಗೌರಿ-ಗಣೇಶ ಉತ್ಸವಗಳನ್ನು ಆಚರಿಸುತ್ತಿರುವುದಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡು ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನಿಯ ಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಎಂ.ಡಿ.ಸುರೇಶ್, ಆಲೂರುಸಿದ್ದಾಪುರ ರೋಟರಿ ಕ್ಲಬ್ ಸದಸ್ಯ ವೆಂಕಟೇಶ್, ಬೆಳೆಗಾರ ಕೊಮರಪ್ಪ, ಸೇವಾ ಸಮಿತಿ ಸದಸ್ಯ ಸುಂದರ್ ಮಾತನಾಡಿದರು. ಸೇವಾ ಸಮಿತಿ ಅಧ್ಯಕ್ಷ ಸುನಿಲ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯೆ ಮುತ್ತಮ್ಮ, ಸೇವಾ ಸಮಿತಿ ಉಪಾಧ್ಯಕ್ಷ ಚನ್ನಕೇಶವ, ಲತಾ ದೇವರಾಜ್, ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಭಾನುವಾರ ಸಂಜೆ ವಿಸರ್ಜನೆ ಸಂಪನ್ನ: ಭಾನುವಾರ ಬೆಳಗ್ಗೆ ಗೌರಿ-ಗಣೇಶ ಮೂರ್ತಿ ವಿಸರ್ಜನೋತ್ಸವ ಅಂಗವಾಗಿ ಗೌರಿ-ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅರ್ಚಕರಾದ ಭಾನುಪ್ರಕಾಶ್ ನೇತೃತ್ವದಲ್ಲಿ ಅರ್ಚಕರು ಪೂಜಾ ವಿಧಿ-ವಿಧಾನ ನೆರವೇರಿಸಿದ ಬಳಿಕ ಅಲಂಕರಿಸಿದ ವಾಹನದ ಮಂಟಪದಲ್ಲಿ ಗೌರಿ ಮತ್ತು ಗಣೇಶನ ಮೂರ್ತಿಯನ್ನು ಕೂರಿಸಲಾಯಿತು. ನಂತರ ವಿಸರ್ಜನೋತ್ಸವ ಮೆರವಣಿಗೆಗೆ ಚಾಲನೆ ನೀಡಲಾಯಿತು. ವಿಸರ್ಜನೋತ್ಸವ ಮೆರವಣಿಗೆಯು ಮಾಲಂಬಿ ಮುಖ್ಯರಸ್ತೆ ಮೂಲಕ ಮಾಲಂಬಿ-ಹೊಸಗುತ್ತಿ ಕೂಡುರಸ್ತೆ ಮೂಲಕ ಸಾಗಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನಂತರ ಮಾಲಂಬಿ-ಗಣಗೂರು ಜಂಕ್ಷನ್‌ಗೆ ವಾಪಸ್ಸಾಯಿತು. ಸಂಜೆ ಮಾಲಂಬಿ ಗ್ರಾಮದ ಬಾಲಗೆರೆಯಲ್ಲಿ ಗೌರಿ-ಗಣೇಶ ಮೂರ್ತಿಯನ್ನು ವಿಸರ್ಜಿಸುವ ಮೂಲಕ ವಿಸರ್ಜನೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು. ಅದ್ದೂರಿ ಮೆರವಣಿಗೆ ವೇಳೆ ಪುರುಷರು, ಮಹಿಳೆಯರು, ಯುವಕ, ಯುವತಿಯರು, ಮಕ್ಕಳು ಹಿರಿಯರು ಕಿರಿಯರು ಎನ್ನದೆ ನೂರಾರು ಜನರು ಪಾಲ್ಗೊಂಡಿದ್ದರು. ಸೇವಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಪ್ರಮುಖರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net