ಕೇವಲ 6 ವಾರಗಳಲ್ಲಿ ದ್ವಿಗುಣಗೊಂಡ ಬೆಳ್ಳುಳ್ಳಿ ಬೆಲೆ; ಏರಿಕೆಗೆ ಅಸಲಿ ಕಾರಣಗಳೇನು?

Garlic
Published on

ಬೆಂಗಳೂರು: ಕಳೆದ ಕೆಲವು ತಿಂಗಳುಗಳು ಹಣದುಬ್ಬರದ ವಿಷಯದಲ್ಲಿ ಬಹಳ ಸೂಕ್ಷ್ಮವೆಂದು ಸಾಬೀತಾಗಿದೆ. ಅದರಲ್ಲೂ ಆಹಾರ ಪದಾರ್ಥಗಳ ವಿಚಾರದಲ್ಲಿ ಹಣದುಬ್ಬರ ಸಾಮಾನ್ಯ ಜನರೊಂದಿಗೆ ಹಾವು ಏಣಿ ಆಟವಾಡುತ್ತಿದೆ. ಮೊದಮೊದಲು ಟೊಮ್ಯಾಟೊ ಬೆಲೆ ವಿಪರೀತ ಏರಿತು. ಅದು ನಿಯಂತ್ರಿತವಾದ ನಂತರ ಈರುಳ್ಳಿ ದುಬಾರಿಯಾಯಿತು. ಇದೀಗ ಬೆಳ್ಳುಳ್ಳಿ ಬೆಲೆ ಸಾಮಾನ್ಯ ಜನರನ್ನು ಕೆರಳಿಸಲು ಆರಂಭಿಸಿದೆ. 

ಬೆಳ್ಳುಳ್ಳಿ ದರ ಎಷ್ಟಿದೆ?
ಇತ್ತೀಚಿನ ಕೆಲವು ವಾರಗಳಲ್ಲಿ ಬೆಳ್ಳುಳ್ಳಿಯ ಬೆಲೆ ವೇಗವಾಗಿ ಹೆಚ್ಚುತ್ತಿವೆ ಎಂದು ವಿವಿಧ ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ. ದೇಶದಲ್ಲಿ ಬೆಳ್ಳುಳ್ಳಿಯ ಚಿಲ್ಲರೆ ಬೆಲೆ ಕೆಜಿಗೆ 250 ರೂ.ಗೆ ತಲುಪಿದೆ ಎಂಬ ವರದಿಗಳಿವೆ, ಆದರೆ ಸಗಟು ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಕೆಜಿಗೆ 130-140 ರೂ. ಮಾರುಕಟ್ಟೆಯ ಪ್ರಕಾರ ಉತ್ತಮ ಗುಣಮಟ್ಟದ ಬೆಳ್ಳುಳ್ಳಿಯ ಸಗಟು ಬೆಲೆ ಕೆಜಿಗೆ 220-250 ರೂ.ಗೆ ತಲುಪಿದೆ.

6 ವಾರಗಳಲ್ಲಿ ದ್ವಿಗುಣಗೊಂಡ ಬೆಲೆ
ಋತುಮಾನದ ಕಾರಣಗಳಿಂದಾಗಿಯೂ ವರ್ಷದ ಈ ಅವಧಿಯಲ್ಲಿ ಬೆಳ್ಳುಳ್ಳಿ ಬೆಲೆಗಳು ಹೆಚ್ಚಾಗುತ್ತವೆ. ಬಹುತೇಕ ಪ್ರತಿ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಬೆಳ್ಳುಳ್ಳಿ ಬೆಲೆ ಹೆಚ್ಚಾಗುತ್ತದೆ. ಆದರೆ, ಈ ವರ್ಷ ಪರಿಸ್ಥಿತಿ ಭಿನ್ನವಾಗಿ ಕಾಣುತ್ತಿದೆ. ಕಳೆದ 6 ವಾರಗಳಲ್ಲಿ ಬೆಳ್ಳುಳ್ಳಿ ಬೆಲೆ ದುಪ್ಪಟ್ಟಾಗಿದೆ.

ಬೆಲೆಗಳು ವೇಗವಾಗಿ ಏರುತ್ತಿವೆ
ಬೆಳ್ಳುಳ್ಳಿ ಬೆಲೆಯಲ್ಲಿ ಅಸಾಮಾನ್ಯ ಏರಿಕೆಗೆ ಪೂರೈಕೆಯಲ್ಲಿ ಕೊರತೆ ಎಂದು ಹೇಳಲಾಗುತ್ತಿದೆ. ಬೆಳ್ಳುಳ್ಳಿಗಾಗಿ, ದೇಶದ ಹೆಚ್ಚಿನ ಸಗಟು ಮಾರುಕಟ್ಟೆಗಳು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರದಿಂದ ಪೂರೈಕೆಯನ್ನು ಅವಲಂಬಿಸಿವೆ. ಬೆಳ್ಳುಳ್ಳಿಯನ್ನು ಉತ್ಪಾದಿಸುವ ಪ್ರಮುಖ ರಾಜ್ಯಗಳಲ್ಲಿ, ವಿಶೇಷವಾಗಿ ಮಧ್ಯಪ್ರದೇಶದಲ್ಲಿ ಇತ್ತೀಚಿನ ಮಳೆಯಿಂದಾಗಿ ಬೆಳೆ ಹಾನಿಯಾಗಿದೆ. ಇದರಿಂದಾಗಿ ಬೆಳ್ಳುಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. 

ಈ ಬೆಳೆಗಳಿಗೆ ಹಣದುಬ್ಬರವಿತ್ತು
ಈ ಹಿಂದೆ ಈರುಳ್ಳಿ, ಟೊಮ್ಯಾಟೊದ ಬಜೆಟ್ ಸಾಮಾನ್ಯ ಜನರಿಗೆ ಕಷ್ಟಕರವಾಗಿತ್ತು. ಟೊಮ್ಯಾಟೊ ಚಿಲ್ಲರೆ ಬೆಲೆ ಹಲವು ಕಡೆ ಕೆಜಿಗೆ 200 ರೂಪಾಯಿ ದಾಟಿತ್ತು. ಆ ನಂತರ ಸರ್ಕಾರವೇ ರಿಯಾಯಿತಿ ದರದಲ್ಲಿ ಟೊಮ್ಯಾಟೊ ಮಾರಾಟ ಆರಂಭಿಸಿತು. ಟೊಮ್ಯಾಟೊ ಬೆಲೆ ನಿಯಂತ್ರಣಕ್ಕೆ ಬಂದಾಗ ಈರುಳ್ಳಿ ಬೆಲೆ ಏರತೊಡಗಿತು. ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಕೆಜಿಗೆ 45-50 ರೂ.ಗೆ ತಲುಪಿತ್ತು. ಇದಾದ ಬಳಿಕ ಸರ್ಕಾರ ಈ ತಿಂಗಳು ಈರುಳ್ಳಿ ರಫ್ತಿಗೆ ನಿರ್ಬಂಧ ಹೇರಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net