ಕಸದ ಕೊಂಪೆಯಾದ ಅರಮನೆ ಆವರಣ

1
Published on

ದಸರಾ ಮಹೋತ್ಸವಕ್ಕೆ ನವವಧುವಿನಂತೆ ಕಂಗೊಳಿಸುತ್ತಿದ್ದ ಅಂಬಾವಿಲಾಸ ಅರಮನೆ ಆವರಣ ಜಂಬೂಸವಾರಿ ಮುಗಿದ ಮರುದಿನವಾದ ಭಾನುವಾರ ಕಸದ ಕೊಂಪೆಯಾಗಿತ್ತು.
ಜಂಬೂಸವಾರಿ ವೀಕ್ಷಿಸಲು ಅರಮನೆ ಆವರಣದಲ್ಲಿ ಸಹಸ್ರಾರು ಜನರು ಸೇರಿದ್ದರು. ಆ ಸಂದರ್ಭದಲ್ಲಿ ಅವರು ಬಿಸಾಡಿದ ನೀರಿನ ಬಾಟಲ್‌ಗಳು ಇನ್ನಿತರ ತ್ಯಾಜ್ಯಗಳು ಎಲ್ಲೆಂದರಲ್ಲಿ ಬಿದ್ದಿತ್ತು. ಆವರಣದಲ್ಲಿ ಹರಡಿಕೊಂಡಿದ್ದ ಕಸದ ರಾಶಿಯನ್ನು ಪೌರಕಾರ್ಮಿಕರು ತೆರವುಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು.
ಸ್ವಚ್ಛತೆಗಾಗಿ ಅರಮನೆ ಮಂಡಳಿಯಿಂದ ಹಾಗೂ ನಗರಪಾಲಿಕೆಯಿಂದ ಅನೇಕ ಪೌರಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಮೆರವಣಿಗೆ ಮುಗಿದ ಬಳಿಕ ಶನಿವಾರ ರಾತ್ರಿಯಿಂದಲೇ ಅರಮನೆ ಆವರಣದಲ್ಲಿ ಈ ಸಿಬ್ಬಂದಿ ಸ್ವಚ್ಛತಾ ಕಾರ್ಯ ಪ್ರಾರಂಭಿಸಿದರು. ಇನ್ನು ಅರಮನೆ ಆವರಣದಲ್ಲಿ ಅಳವಡಿಸಿದ್ದ ಪೆಂಡಾಲ್, ಕುರ್ಚಿ, ಮೇಜುಗಳನ್ನು ನೂರಾರು ಕಾರ್ಮಿಕರು ತೆರವುಗೊಳಿಸುವ ಕಾರ್ಯ ನಡೆಸಿದರು.
ನಗರಪಾಲಿಕೆಯಿಂದ ನಿಯೋಜಿಸಿರುವ 300 ಕ್ಕೂ ಹೆಚ್ಚಿನ ಪೌರಕಾರ್ಮಿಕರು ಮೆರವಣಿಗೆ ಸಾಗಿದ ಸಯ್ಯಜಿರಾವ್ ರಸ್ತೆಯಲ್ಲಿ ಶನಿವಾರ ರಾತ್ರಿಯಿಂದಲೇ ಸ್ವಚ್ಛತಾ ಕೆಲಸ ನಡೆಸಿದರು. ಸದರಿ ಮಾರ್ಗದಲ್ಲಿ ಅನೇಕ ಗುಂಪುಗಳಾಗಿ ಪೌರಕಾರ್ಮಿಕರು, ಭಾನುವಾರ ಸಂಜೆವರೆಗೂ ಸ್ವಚ್ಛತಾ ಕಾರ್ಯ ನಡೆಸಿದರು. ಪಂಜಿನ ಕವಾಯತು ಕಾರ್ಯಕ್ರಮ ನಡೆದ ಬನ್ನಿಮಂಟಪ ಮೈದಾನದಲ್ಲೂ ಪಾಲಿಕೆ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯ ನಡೆಯಿತು.
ಪ್ಲಾಸ್ಟಿಕ್‌ಮಯ!: ದೇಶದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದರೂ ಅರಮನೆ ಆವರಣ, ಪಂಜಿನ ಕವಾಯತು ಮೈದಾನ ಹಾಗೂ ದಸರಾ ಜಂಬೂಸವಾರಿ ಸಾಗಿದ ಮಾರ್ಗದುದ್ದಕ್ಕೂ ಪ್ಲಾಸ್ಟಿಕ್ ಬಾಟಲ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅರಮನೆ ಅಂಗಳದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳ ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net