ಸದ್ದಿಲ್ಲದೆ ಹೆಚ್ಚುತ್ತಿದ್ದಾರೆ ಗಾಂಜಾ ವ್ಯಸನಿಗಳು; ಎರಡು ವರ್ಷಗಳಲ್ಲಿ 6,194 ಜನರ ಬಂಧನ..

Ganja
Published on

| ಅವಿನಾಶ ಮೂಡಂಬಿಕಾನ ಬೆಂಗಳೂರು

ಪ್ರತಿಷ್ಠಿತರ ಮಾದಕ ವ್ಯಸನದ ಕೆಲ ಪ್ರಕರಣಗಳು ಭಾರಿ ಚರ್ಚೆಯಾದರೂ, ಸಾಮಾನ್ಯರ ಪ್ರಕರಣಗಳು ಸದ್ದಿಲ್ಲದೆ, ಭಾರಿ ಸಂಖ್ಯೆಯಲ್ಲಿ ಹೆಚ್ಚಾಗುತ್ತಲೇ ಇವೆ. ರಾಜ್ಯದಲ್ಲಿ ಮಕ್ಕಳಿಂದ ಹಿಡಿದು ಮಹಿಳೆಯರವರೆಗೆ, ಕೂಲಿ ಕಾರ್ವಿುಕರಿಂದ ಟೆಕ್ಕಿಗಳವರೆಗೆ ಎಲ್ಲ ವಯೋಮಾನದವರೂ ಮಾದಕ ಅಮಲಿನ ಸುಳಿಗೆ ಸಿಲುಕುತ್ತಿದ್ದಾರೆ. ಹಾಡಹಗಲೇ ಗಾಂಜಾ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ 7,415 ಗಾಂಜಾ ವ್ಯಸನಿಗಳನ್ನು ಪತ್ತೆ ಹಚ್ಚಲಾಗಿದೆ.

ರಾಜ್ಯದಲ್ಲಿ ಮಾದಕ ವಸ್ತು ಗಾಂಜಾ ಸೇವನೆಗೆ ದಾಸರಾಗುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿದೆ. 2019ರಲ್ಲಿದ್ದ 1,217 ವ್ಯಸನಿಗಳ ಸಂಖ್ಯೆ, 2020ಕ್ಕೆ 2,943ಕ್ಕೆ ಏರಿಕೆಯಾಗಿದೆ. 2021ರಲ್ಲಿ ಇದರ ಪ್ರಮಾಣ 4 ಸಾವಿರ ಗಡಿ ದಾಟಿದೆ. ಇನ್ನು, ಕಳೆದ 4 ತಿಂಗಳಿನಲ್ಲಿ 2 ಸಾವಿರಕ್ಕೂ ಅಧಿಕ ವ್ಯಸನಿಗಳನ್ನು ಪತ್ತೆಹಚ್ಚಲಾಗಿದೆ. 2 ವರ್ಷಗಳಲ್ಲಿ ಗಾಂಜಾ ವ್ಯಸನಿಗಳ ವಿರುದ್ಧ 5,453 ಕೇಸ್ ದಾಖಲಾಗಿದ್ದು, 6,194 ವ್ಯಸನಿಗಳ ಕೈಗೆ ಕೋಳ ತೊಡಿಸಲಾಗಿದೆ.

2020-21ರಲ್ಲಿ ಕರ್ನಾಟಕದಲ್ಲಿ ಗಾಂಜಾ ಪೆಡ್ಲರ್​ಗಳ ವಿರುದ್ಧ 2,254 ಪ್ರಕರಣ ದಾಖಲಾಗಿದ್ದು, 4,284 ಪೆಡ್ಲರ್​ಗಳನ್ನು ಜೈಲಿಗಟ್ಟಲಾಗಿದೆ. ಈ ಪೈಕಿ ಶೇ.60 ಪ್ರಕರಣಗಳು ತನಿಖಾ ಹಂತದಲ್ಲಿವೆ. ಒಟ್ಟಾರೆ ಎನ್​ಡಿಪಿಎಸ್ ಕಾಯ್ದೆ ಅನ್ವಯ ದಾಖಲಾಗಿರುವ ಪ್ರಕರಣಗಳ ಪೈಕಿ 2020ನೇ ಸಾಲಿನಲ್ಲಿ ನ್ಯಾಯಾಲಯದಲ್ಲಿ 2,751 ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದರೆ, 2021ಕ್ಕೆ ಇದರ ಪ್ರಮಾಣ 2,065ಕ್ಕೆ ಇಳಿಕೆಯಾಗಿರುವುದು ಪೊಲೀಸ್ ಮೂಲಗಳು ಕೊಟ್ಟಿರುವ ಅಂಕಿ-ಅಂಶಗಳು ತಿಳಿಸುತ್ತವೆ.

ಮುಖತಃ ಭೇಟಿಯೇ ಇಲ್ಲ: ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿ ಪೆಡ್ಲರ್​ಗಳು ಕೀ ಸಮೇತ ವಾಹನವನ್ನು ನಿಲುಗಡೆ ಮಾಡಿ ಚಾಲಕನ ಸೀಟಿನಲ್ಲಿ ದುಡ್ಡು ಇಟ್ಟು ತೆರಳುತ್ತಾರೆ. ಗುಡ್ಡಗಾಡಿನಲ್ಲಿ ವಾಸಿಸುವ ಜನರ ತಂಡ ಪೆಡ್ಲರ್​ಗಳು ವಾಹನದಲ್ಲಿಟ್ಟ ದುಡ್ಡು ತೆಗೆದುಕೊಂಡು ಅದಕ್ಕೆ ಸಮನಾದ ಗಾಂಜಾವನ್ನು ಪೆಡ್ಲರ್​ಗಳ ವಾಹನದಲ್ಲಿಟ್ಟು ಕಣ್ಮರೆಯಾಗುತ್ತಾರೆ. ಮರುದಿನ ಪೆಡ್ಲರ್​ಗಳು ಅಲ್ಲಿಗೆ ತೆರಳಿ ಗಾಂಜಾದೊಂದಿಗೆ ವಾಹನದಲ್ಲಿ ಹಿಂತಿರುಗುತ್ತಾರೆ. ರಾಜಮಂಡ್ರಿಯಲ್ಲಿ ಕಡಿಮೆ ಬೆಲೆಗೆ ಗಾಂಜಾ ಸಿಗುವ ಹಿನ್ನೆಲೆಯಲ್ಲಿ ಈ ಪ್ರದೇಶ ಪೆಡ್ಲರ್​ಗಳ ಹಾಟ್​ಸ್ಪಾಟ್ ಆಗಿದೆ. ಇದೇ ಗಾಂಜಾವನ್ನು ರಾಜ್ಯದ ಪ್ರಮುಖ ನಗರಗಳಲ್ಲಿ 4 ಪಟ್ಟು ಹೆಚ್ಚಿನ ಬೆಲೆಗೆ ಪೆಡ್ಲರ್​ಗಳು ಗ್ರಾಹಕರಿಗೆ ಮಾರಾಟ ಮಾಡಿ ಲಕ್ಷ-ಲಕ್ಷ ಸಂಪಾದಿಸುತ್ತಾರೆ ಎಂಬ ಸ್ಪೋಟಕ ಸಂಗತಿ ಪೆಡ್ಲರ್​ಗಳ ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.

10 ವರ್ಷ ಜೈಲು: ಗಾಂಜಾ ಪೆಡ್ಲಿಂಗ್ ಮಾಡಿ ಎನ್​ಡಿಪಿಎಸ್ ಕಾಯ್ದೆ ಅಡಿ ಬಂಧನಕ್ಕೊಳಗಾಗಿ ಅಪರಾಧ ಸಾಬೀತಾದರೆ ಕನಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಕಠಿಣ ಕಾನೂನು ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಬಹುತೇಕ ಕೇಸ್​ಗಳಲ್ಲಿ ಆರೋಪಿಗಳಿಗೆ ಜಾಮೀನು ಸಿಗುತ್ತಿದೆ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.

ಟೋಲ್​ಫ್ರೀ ಸಂಖ್ಯೆಗೆ ಮಾಹಿತಿ ನೀಡಿ: ಡ್ರಗ್ಸ್ ಡೀಲ್, ಸೇವನೆ, ಮಾರಾಟ ಮಾಡುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದರೆ ಟೋಲ್ ಫ್ರೀ ಸಂಖ್ಯೆ 1908ಕ್ಕೆ ಮಾಹಿತಿ ನೀಡಬಹುದು. ಮಾಹಿತಿ ನೀಡಿದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸುವ ಪೊಲೀಸರು ಡ್ರಗ್ಸ್ ದಂಧೆಕೋರರನ್ನು ಬಂಧಿಸುತ್ತಾರೆ. ಮಾಹಿತಿ ಕೊಟ್ಟ ಸಾರ್ವಜನಿಕರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪದೇಪದೆ ಡ್ರಗ್ಸ್ ಪೆಡ್ಲಿಂಗ್​ನಲ್ಲಿ ತೊಡಗಿ ಅಕ್ರಮವಾಗಿ ಹಣ ಸಂಪಾದಿಸಿದವರ ಆಸ್ತಿ ಮುಟ್ಟುಗೋಲು ಹಾಕಲು ಶೀಘ್ರ ಕ್ರಮ ಕೈಗೊಳ್ಳುತ್ತೇವೆ. ಡ್ರಗ್ಸ್ ದಂಧೆ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಶ್ರಮಿಸುತ್ತಿದೆ. | ರಮಣ್ ಗುಪ್ತಾ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ

ಆನ್​ಲೈನ್ ಗಾಂಜಾ ಡೀಲ್: ಇತ್ತೀಚೆಗೆ ಗಾಂಜಾ ವ್ಯಸನಿಗಳು ಆನ್​ಲೈನ್ ಮೂಲಕವೇ ಪೆಡ್ಲರ್​ಗಳನ್ನು ಸಂರ್ಪಸಿ ಡೀಲ್ ಕುದುರಿಸುತ್ತಾರೆ. ಬ್ಯಾಂಕ್ ಖಾತೆಗೆ ಹಣ ಬಿದ್ದ 3 ಗಂಟೆಯೊಳಗೆ ಸ್ವಿಗ್ಗಿ, ಅಮೆಜಾನ್, ಡನ್ಜೊ ಡೆಲಿವರಿ ಬಾಯ್ಗಳ ಸೋಗಿನಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಗಾಂಜಾ ಪೂರೈ ಸುವ ವ್ಯವಸ್ಥೆಯೂ ಇದೆ. ಆನ್​ಲೈನ್ ಗಾಂಜಾ ಡೀಲಿಂಗ್ ಬಹಳ ಸುರಕ್ಷಿತವಾಗಿದ್ದು, ಶೇ.90ರಷ್ಟು ಕೇಸ್​ಗಳು ಬೆಳಕಿಗೆ ಬರುತ್ತಿಲ್ಲ.

ಆಂಧ್ರದಿಂದ ಪೂರೈಕೆ: ಆಂಧ್ರಪ್ರದೇಶದ ವಿಶಾಖಪಟ್ಟಣ, ಕರ್ನಲ್, ಅನಂತಪುರ, ತಮಿಳುನಾಡಿನ ಕೃಷ್ಣಗಿರಿಯಿಂದ ಶೇ.80ರಷ್ಟು ಗಾಂಜಾ ಕರ್ನಾಟಕಕ್ಕೆ ಪೂರೈಕೆಯಾಗುತ್ತಿದೆ. ಇನ್ನು ಒಡಿಶಾ, ಬಾಂಗ್ಲಾದೇಶ ಮತ್ತು ಗೋವಾದಿಂದ ಶೇ.20ರಷ್ಟು ರಾಜಧಾನಿಗೆ ರವಾನೆಯಾಗುತ್ತದೆ. ಬೆಂಗಳೂರಿನಿಂದ ರೈಲು, ಬಸ್, ಗೂಡ್ಸ್ ವಾಹನಗಳಲ್ಲಿ ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಚಿತ್ರದುರ್ಗ, ಬಳ್ಳಾರಿ, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಿಗೆ ನಿರಂತರವಾಗಿ ಪೊಲೀಸರ ಕಣ್ತಪ್ಪಿಸಿ ಗಾಂಜಾ ಸರಬರಾಜಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net