

ಬೆಂಗಳೂರು: ಬ್ಲಾಕ್ಬಸ್ಟರ್ ಚಿತ್ರ ಪುಷ್ಪದಲ್ಲಿ ತೋರಿಸಿರುವಂತೆ ನಾಯಕನ ಶೈಲಿಯಲ್ಲಿಯೇ ಕಳ್ಳತನ ಮಾಡಿದ್ದ ವಸ್ತುಗಳನ್ನು ಸಾಗಿಸಲು ಹೋಗಿ ಚಾಲಾಕಿ ಕಳ್ಳರು ಸಿಕ್ಕಿಹಾಕಿಕೊಂಡಿರುವ ಘಟನೆ ಅನೇಕ ಕಡೆ ವರದಿಯಾಗಿದೆ. ಇದೀಗ ಅಂತಹುದೇ ಪ್ರಕರಣ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಹೌದು, ಪುಷ್ಪ ಚಿತ್ರದ ಸ್ಟೈಲಲ್ಲೇ ಗಾಂಜಾ ಸರಬರಾಜು ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಅರೆಸ್ಟ್ ಮಾಡಲಾಗಿದೆ.
ಬೆಂಗಳೂರು ನಗರ ಸಿಸಿಬಿ ಮಹಿಳಾ ಸಂರಕ್ಷಕ ದಳದ ಪೊಲೀಸರು ಈ ಕಾರ್ಯಚರಣೆ ನಡೆಸಿದ್ದು, ಕುಖ್ಯಾತ ಗಾಂಜಾ ಪೆಡ್ಲರ್ ಚಾಂದ್ ಸೋದರ್ ಸೇರಿದಂತೆ ಇಬ್ಬರು ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಗಳನ್ನು ಸೆರೆ ಹಿಡಿಯಲಾಗಿದೆ.
ಸಲ್ಮಾನ್ ಪಾಷಾ, ಚಂದ್ರು ಭಾನು ಬಿಶ್ಣೋಯ್ ಹಾಗೂ ಲಕ್ಷ್ಮಿ ಮೋಹನ್ ದಾಸ್ ಬಂಧಿತ ಆರೋಪಿಗಳು. ಆರೋಪಿಗಳಿಂದ 12 ಕೋಟಿ ರೂ. ಮೌಲ್ಯದ 1500 ಕೆ.ಜಿ ಗಾಂಜಾ ಹಾಗೂ ಗೂಡ್ಸ್ ವಾಹನ ವಶಪಡಿಸಿಕೊಳ್ಳಲಾಗಿದೆ. ಗಾಂಜಾ ದಂಧೆ ಭೇದಿಸಲು ಸಿಸಿಬಿ ಅಧಿಕಾರಿಗಳಿಂದ ನಿರಂತರ ಮೂರು ವಾರಗಳಿಂದ ಕಾರ್ಯಾಚರಣೆ ನಡೆದಿದೆ. ಸಿಸಿಬಿ ಅಧಿಕಾರಿಗಳು ಕುಖ್ಯಾತ ಗಾಂಜಾ ಪೆಡ್ಲರ್ ಚಾಂದ್ ಬಂಧನಕ್ಕೆ ಬಲೆ ಬೀಸಿದ್ದರು. ಆದರೆ ಚಾಂದ್ ಬದಲಿಗೆ ಅತನ ಸೋದರ ಸಲ್ಮಾನ್ ಪಾಷಾ ಖೆಡ್ಡಾಗೆ ಬಿದ್ದಿದ್ದು, ಆತನ ವಿಚಾರಣೆ ವೇಳೆ ಗಾಂಜಾ ಸಪ್ಲೈನ ಸೀಕ್ರೇಟ್ ಬೆಳಕಿಗೆ ಬಂದಿದೆ.
ವಾಹನದ ಚಾರ್ಸಿ ಮಾರ್ಪಾಡು
ಗಾಂಜಾ ಸಪ್ಲೈಗೆಂದೇ ಮೊದಲು ಗೂಡ್ಸ್ ವಾಹನದ ಚಾರ್ಸಿ ಮಾರ್ಪಾಡು ಮಾಡಲಾಗಿದೆ. ಅಸಲಿ ಚಾರ್ಸಿ ಅಡಿಯಲ್ಲಿ ಒಂದು ಅಡಿ ಎತ್ತರದ ಸೀಕ್ರೇಟ್ ಚಾರ್ಸಿ ನಿರ್ಮಿಸಿದ್ದು, ಅದರಲ್ಲಿ ಪೆಡ್ಲರ್ಗಳು ಗಾಂಜಾ ಪ್ಯಾಕ್ಗಳನ್ನ ಜೋಡಿಸುತ್ತಿದ್ದರು. ಅದನ್ನು ಪೂರ್ತಿಯಾಗಿ ಕ್ಲೋಸ್ ಮಾಡಿದ ಬಳಿಕ ಮೇಲೆ ಖಾಲಿ ಕಾಟನ್ ಬಾಕ್ಸ್ಹಾಕಿಕೊಂಡು ಪೆಡ್ಲರ್ಸ್ ಬರುತ್ತಿದ್ದರು. ಯಾರಿಗೂ ಅನುಮಾನ ಬರದಂತೆ ಆಂಧ್ರದ ವಿಶಾಖಪಟ್ಟಣದಿಂದ ಬೆಂಗಳೂರಿಗೆ ಸಪ್ಲೈ ಮಾಡಲಾಗುತ್ತಿತ್ತು.
ಆರೋಪಿಗಳ ಬಂಧನ
ಸೀಕ್ರೇಟ್ ಕಂಪಾರ್ಟ್ ಮೆಂಟ್ ಮೂಲಕ ಸಾವಿರಾರು ಕೆಜಿ ಗಾಂಜಾವನ್ನು ಆಸಾಮಿಗಳು ಸಪ್ಲೈ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಸಿಸಿಬಿ ಮಹಿಳಾ ರಕ್ಷಣಾ ದಳ, ಕಳೆದ ಮೂರು ವಾರಗಳಿಂದ ಆರೋಪಿಗಳ ಬಂಧನಕ್ಕೆ ಫೀಲ್ಡ್ ಗಿಳಿದಿದ್ದು, ಕೊನೆಗೂ ಕಳ್ಳರನ್ನು ಹಿಡಿಯುವಲ್ಲಿ ಸಿಸಿಬಿ ಟೀಂ ಯಶಸ್ವಿಯಾಗಿದೆ.