ಕೊಲ್ಕತ್ತಾ ಹತ್ಯೆ ಕೇಸ್​: ವ್ಯಾಪಕ ಪ್ರತಿಭಟನೆಯ ಹಿನ್ನಲೆ ಕಪ್ಪು ಬಣ್ಣದ ಡಿಪಿ ಹಾಕಿದ ಸೌರವ್ ಗಂಗೂಲಿ!

ವಿಜಯವಾಣಿ - 2024-08-20T120221.942
Published on

ಪಶ್ಚಿಮ ಬಂಗಾಳ: ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಟ್ರೈನಿ ವೈದ್ಯೆಯ ಮೇಲೆ ನಡೆದ ಭೀಕರ ಅತ್ಯಾಚಾರ ಹಾಗೂ ಹತ್ಯೆ ಘಟನೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ಕೈಗೊಂಡಿರುವ ವೈದ್ಯಕೀಯ ಸಿಬ್ಬಂದಿ ಇಂದೂ ಕೂಡ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಯುವತಿಯ ಮೇಲೆ ಬರ್ಬರವಾಗಿ ಅತ್ಯಾಚಾರವೆಸಗಿ, ಕೊಲೆ ಮಾಡಿದ ಅಪರಾಧಿಗಳಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂದು ದೇಶಾದ್ಯಂತ ಒತ್ತಾಯದ ಕೂಗುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಈಗಾಗಲೇ ಪ್ರಕರಣವನ್ನು ಆ.14ರಂದು ಕೈಗೆತ್ತಿಕೊಂಡಿರುವ ಸಿಬಿಐ ತನಿಖೆಯನ್ನು ಇದೀಗ ಮತ್ತಷ್ಟು ಚುರುಕುಗೊಳಿಸಿದೆ. ಈ ಮಧ್ಯೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಘಟನೆಗೆ ಪ್ರತಿಕ್ರಿಯಿಸಿದ್ದು, ಇದು ನನ್ನ ಹೊಸ ಡಿಪಿ ಎಂದು ಕಪ್ಪು ಬಣ್ಣವನ್ನು ತೋರಿಸಿದ್ದಾರೆ.

ಆಗಸ್ಟ್​ 16ರಂದು 24 ಗಂಟೆಗಳ ಕಾಲ ದೇಶವ್ಯಾಪಿ ಮೆಡಿಕಲ್ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ತಮ್ಮ ಸಮಸ್ಯೆಯನ್ನು ಒತ್ತಿ ಹೇಳಿದ ಮಹಿಳಾ ವೈದ್ಯರು, ಮೃತಪಟ್ಟ ಟ್ರೈನಿ ವೈದ್ಯೆಯ ಸಾವಿಗೆ ನ್ಯಾಯ ಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ಬೆನ್ನಲ್ಲೇ ಪ್ರತಿಕ್ರಿಯಿಸಿದ ಗಂಗೂಲಿ, ಇದೊಂದು ಹೀನಾಯ ಕೃತ್ಯ. ಇಂತಹ ಘಟನೆ ನಡೆಯಬಾರದಿತ್ತು. ಇದು ತುಂಬ ನಾಚಿಕೆಗೇಡಿನ ಸಂಗತಿ. ಸದ್ಯ ಸಿಬಿಐ ತನಿಖೆ ಕೈಗೆತ್ತಿಕೊಂಡಿದೆ. ಅಪರಾಧಿಯನ್ನು ಪತ್ತೆಹಚ್ಚಿದ ಬಳಿಕ ನ್ಯಾಯಾಲಯವು ಅವರಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದರು.

ಈ ಬಾರಿ ನ್ಯಾಯಾಲಯ​ ಕೊಡುವ ಶಿಕ್ಷೆಯು ಮುಂದೆ ಇಂತಹ ಅಪರಾಧ ಮಾಡಲು ಯಾರಿಗೂ ಧೈರ್ಯ ಬರಬಾರದು. ಅಂತಹ ಶಿಕ್ಷೆ ವಿಧಿಸಬೇಕು, ಅದು ಮುಖ್ಯ ಎಂದರು. ನಿರಂತರ ಪ್ರತಿಭಟನೆ ಬೆನ್ನಲ್ಲೇ ಇದೀಗ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಿಗೆ ಕಪ್ಪು ಬಣ್ಣದ ಡಿಪಿಯನ್ನು ಹಾಕಿದ್ದಾರೆ. ಈ ಮೂಲಕ ತಾವು ಕೂಡ ಪ್ರತಿಭಟನೆಗೆ ಕೈಜೋಡಿಸಿದ್ದೇನೆ. ನ್ಯಾಯಕ್ಕಾಗಿ ಹೋರಾಟ ಮುಂದುವರೆಸುತ್ತೇನೆ ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net