

ಬೆಟ್ಟದಪುರ: ಕಳೆದ ನಾಲ್ಕು ದಶಕಗಳಿಂದ ಪ್ರಾಮಾಣಿಕವಾಗಿ ನಡೆದುಕೊಂಡು ಬಂದ ರೈತ ಸಂಘ ಇತ್ತೀಚಿನ ದಿನಗಳಲ್ಲಿ ಶೋಕಿ ಶಾಲುಗಳಾಗಿ ಬದಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮೈಸೂರು ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್‌ರಾಜೇ ಅರಸ್ ಬೇಸರ ವ್ಯಕ್ತಪಡಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಎಪಿಎಂಸಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಸಭೆಯಲ್ಲಿ ಮಾತನಾಡಿದ ಅವರು, ದಲ್ಲಾಳಿಗಳು, ಕಳ್ಳ-ಕಾಕರು ಹಸಿರು ಶಾಲು ಹಾಕಿಕೊಂಡು ಅಧಿಕಾರಿಗಳ ಬಳಿ ಹೋಗಿ ವಸೂಲಿ ದಂಧೆಗೆ ನಿಂತಿದ್ದಾರೆ. ರೈತರು ಸಮಸ್ಯೆ ಎಂದು ಬಂದರೆ ಹಣ ನೀಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ದರ್ಪ ತೋರುತ್ತಿದ್ದಾರೆ. ರೈತ ಸಂಘದ ತತ್ವಗಳಿಗೆ ದ್ರೋಹ ಮಾಡುವುದಲ್ಲದೆ, ಹೋರಾಟ ಮಾಡುವ ವ್ಯಕ್ತಿಗಳನ್ನು ಕುಗ್ಗಿಸುವ ಕೆಲಸ ನಡೆಯುತ್ತಿದೆ. ತಾಲೂಕಿನ ಎಲ್ಲ ಅಧಿಕಾರಿಗಳ ಎದುರು ಶಾಲು ಹಾಕಿಕೊಂಡು ಯಾಮಾರಿಸುತ್ತಿದ್ದಾರೆ. ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಹಣ ಕೇಳಿ ಬಂದ ವ್ಯಕ್ತಿಯನ್ನು ನಮಗೆ ತಿಳಿಸುವಂತಹ ಕೆಲಸವಾಗಬೇಕು, ಮುಂದಿನ ದಿನಗಳಲ್ಲಿ ನಾವು ಒಂದು ಸದೃಢ ತಂಡವನ್ನು ನಿರ್ಮಿಸುತ್ತೇವೆ ಎಂದು ಹೇಳಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಸ್ವಾಮಿಗೌಡ ಮಾತನಾಡಿ, ತಂಬಾಕು ಮಂಡಳಿಯಲ್ಲಿ 7 ಕೋಟಿ ರೂ. ಹಗರಣ ಮಾಡಿರುವ ವ್ಯಕ್ತಿಯನ್ನು ಬಂಧಿಸುವಲ್ಲಿ ಪಿರಿಯಾಪಟ್ಟಣ ಪೊಲೀಸರು ವಿಫಲರಾಗಿದ್ದಾರೆ. ತಾಲೂಕಿನಲ್ಲಿರುವ ಪೊಲೀಸರು ಹಣ ವಸೂಲಿಗೆ ನಿಂತಿದ್ದಾರೆ. ಕಳೆದ ಎರಡು ತಿಂಗಳಿನಲ್ಲಿ ಐದು ಬಾರಿ ವಿವಿಧೆಡೆ ಕಳ್ಳತನವಾಗಿದೆ. ಇದುವರೆಗೂ ಯಾರನ್ನೂ ಹಿಡಿದಿಲ್ಲ ಎಂದು ಆರೋಪಿಸಿದರು.
ರೈತ ಸಂಘದ ಮೈಸೂರು ಜಿಲ್ಲಾ ನಿರ್ದೇಶಕ ದಶರಥ, ರೈತ ಸಂಘದ ಪದಾಧಿಕಾರಿಗಳಾದ ಕೊಣಸೂರು ಆನಂದ್, ಗಡಿಗೌಡ, ದೇವರಾಜು, ವಿಜಯರಾಜೇ ಅರಸ್, ಹರೀಶ್ ರಾಜೇ ಅರಸ್, ಕುಮಾರ್, ಪಿ.ಎಂ.ಮಹಾದೇವ, ಮಹೇಶ್, ಗುರು, ಮಹಾದೇವಗೌಡ, ಮಲ್ಲೇಶ್, ಶಿವಮೂರ್ತಿ, ಸತೀಶ್, ಗಣೇಶ್, ಸೇರಿದಂತೆ ರೈತ ಸಂಘದ ಮುಖಂಡರು ಇದ್ದರು.