

ಕಾನ್ಪುರ: ಸಹಚರರೊಂದಿಗೆ ಎಂಟು ಪೊಲೀಸರನ್ನು ಕೊಂದು ತಲೆಮರೆಸಿಕೊಂಡಿರುವ ಗ್ಯಾಂಗ್ಸ್ಟರ್ ವಿಕಾಸ್ ದುಬೆ ಮನೆಯನ್ನು ಘಟನೆ ನಡೆದ ಎರಡನೇ ದಿನವೇ ನೆಲಸಮಗೊಳಿಸಲಾಗಿದೆ. ಈ ಮನೆಯ ಅವಶೇಷಗಳಡಿಯಲ್ಲಿ ಪೊಲೀಸರು ಬಾಂಬ್ಗಳನ್ನು ಪತ್ತೆ ಹಚ್ಚಿದ್ದಾರೆ.
ಉತ್ತರಪ್ರದೇಶದ ಭಿಕರೂ ಗ್ರಾಮದಲ್ಲಿರುವ ವಿಕಾಸ್ ದುಬೆಯ ಅವಶೇಷಗಳಲ್ಲಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಈತನ ಮನೆಯಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಇದಲ್ಲದೇ, ಮನೆಯಲ್ಲಿಯೇ ಕಚ್ಚಾವಸ್ತುಗಳನ್ನು ಬಳಸಿ ಬಾಂಬ್ ತಯಾರಿಸುತ್ತಿದ್ದ ಎಂದು ಹೇಳಲಾಗಿತ್ತು. ಇದೀಗ ಬಾಂಬ್ ಪತ್ತೆಯಾಗಿರುವುದು ಇದಕ್ಕೆ ಪುಷ್ಠಿ ನೀಡಿದೆ. ಇದಲ್ಲದೇ, ಪೊಲೀಸರು ದಾಳಿ ಬಂದಾಗ ಇಡೀ ಪ್ರದೇಶವನ್ನೇ ಸ್ಫೋಟಿಸಲು ಸಂಚು ರೂಪಿಸಿದ್ದ ಎಂದೇ ಹೇಳಲಾಗಿತ್ತು.
ಕಾನ್ಪುರದಲ್ಲೊಂದು ಮನೆ: ಗ್ಯಾಂಗ್ಸ್ಟರ್ ವಿಕಾಸ್ ದುಬೆ ಕಾನ್ಪುರದಲ್ಲೊಂದು ಮನೆ ಹೊಂದಿದ್ದಾನೆ. ಹಳ್ಳಿಯ ಮನೆಗೆ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾಗಳನ್ನು ಈ ಮನೆಯಿಂದಲೇ ವೀಕ್ಷಿಸುತ್ತಿದ್ದ. ಈತನ ಪತ್ನಿ ಕೂಡ ಮನೆಗೆ ಪೊಲೀಸರು ಬಂದ ಮಾಹಿತಿಯನ್ನು ಆತನಿಗೆ ನೀಡುತ್ತಿದ್ದಳು ಎನ್ನಲಾಗಿದೆ.
ನೇಪಾಳಕ್ಕೆ ಪರಾರಿ: ಈವರೆಗೂ ಪತ್ತೆಯಾಗದ ವಿಕಾಸ್ ದುಬೆ ನೇಪಾಳಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈತನ ಶೋಧಕ್ಕಾಗಿ ಪೊಲೀಸರು 40 ತಂಡಗಳನ್ನು ರಚಿಸಿ ಹುಡುಕಾಟ ನಡೆಸಿದ್ದಾರೆ.