

ಗಂಗಾವತಿ: ಹನುಮ ಜಯಂತಿ ನಿಮಿತ್ತ ಅಖಿಲ ಭಾರತ ಹನುಮಮಾಲಾ ಸೇವಾ ಸಮಿತಿಯಿಂದ ಆಂಜನೇಯ ಮೂರ್ತಿಯೊಂದಿಗೆ ಸೋಮವಾರ ಬೃಹತ್ ಶೋಭಾಯಾತ್ರೆ ನಡೆಸಲಾಯಿತು.
ನಗರದ ಸಿಬಿಎಸ್ ವೃತ್ತದ ಎಪಿಎಂಸಿ ಪ್ರಾಂಗಣದಿಂದ ಆರಂಭವಾದ ಶೋಭಾಯಾತ್ರೆ ಶ್ರೀರಾಮಮಂದಿರದವರೆಗೂ ಅದ್ದೂರಿಯಾಗಿ ನೆರವೇರಿಸಲಾಯಿತು. ದಾರಿಯುದ್ದಕ್ಕೂ ಶ್ರೀರಾಮ, ಹನುಮ ಜಪ, ಹನುಮಾನ್ ಚಾಲೀಸ ಪಾರಾಯಣ, ಕರ್ಪೂರದ ಆರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಳೆದ ತಿಂಗಳಿಂದ ಕಠಿಣ ವ್ರತ ಕೈಗೊಂಡ ಮಾಲಾಧಾರಿಗಳು ವಿವಿಧ ದೇವಾಲಯ ಮತ್ತು ಭಕ್ತರ ಮನೆಯಲ್ಲಿ ಹನುಮಾನ್ ಚಾಲೀಸ ಪಾರಾಯಣ ಮತ್ತು ಪೂಜೆ ಕೈಗೊಂಡಿದ್ದರು.
ಅಂಜನಾದ್ರಿ ಬೆಟ್ಟದಲ್ಲಿ ಏ.6ರಂದು ಮಾಲಾ ವಿಸರ್ಜನೆ ಕಾರ್ಯಕ್ರಮ ಜರುಗಲಿದ್ದು, ನಿರಂತರ ಭಜನೆ, ಪವನಾಮ ಹೋಮ, ಮೂರ್ತಿಗೆ ವಿಶೇಷ ಅಲಂಕಾರ ಮತ್ತು ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ನೀತಿ ಸಂಹಿತೆ ಕಾರಣ ಶೋಭಾಯಾತ್ರೆ ಸಂದರ್ಭದಲ್ಲಿ ಪ್ರಮುಖ ಪ್ರಾರ್ಥನೆ ಮಂದಿರದ ಬಳಿ ಪೊಲೀಸ್ ಬಂದೋಬಸ್ತ್ ಆಯೋಜಿಸಿದ್ದು, ಏಕಮುಖ ಸಂಚಾರದ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಪ್ರಮುಖರಾದ ಜಗದೀಶ ಹೇರೂರು, ಪ್ರಶಾಂತ ಚಿತ್ರಗಾರ, ಕೃಷ್ಣ ನಾಯಕ ವಾಲ್ಮೀಕಿ, ಅನಿಲ್‌ಕುಮಾರ, ಅಯ್ಯನಗೌಡ ಹೇರೂರು ಇತರರಿದ್ದರು.