

ಲಖನೌ: ಇದೊಂದು ವಿಚಿತ್ರ ಮತ್ತು ವಿಲಕ್ಷಣ, ವಿಕೃತಿ ಮತ್ತು ವಿಚಿತ್ರ ಘಟನೆ ಎನ್ನಬಹುದು. ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಜೀವಂತ ಹಾವನ್ನು ಹಿಡಿದು ಕಚ್ಚಿ ತಿಂದಿದ್ದಾನೆ. ಇದರ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ.
ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ ಗಂಗಾ ಪ್ರಸಾದ್ ಎಂಬ ಡಕಾಯಿತ ಉತ್ತರ ಪ್ರದೇಶದ ಫತೇಪುರ್‌ನಲ್ಲಿ ನೀರಿನಲ್ಲಿ ಜೀವಂತ ಹಾವನ್ನು ಹಿಡಿದು ಕಚ್ಚಿ ತಿಂದಿದ್ದಾನೆ.
ಗಂಗಾ ಪ್ರಸಾದ್ಗೆ ಮೊದಲಿನಿಂದಲೂ ಜೀವಂತ ಹಾವುಗಳನ್ನು ತಿನ್ನುವ ಅಭ್ಯಾಸವಿದ್ದು, ಜೈಲಿನಲ್ಲಿ ಅದು ಸಾಧ್ಯವಾಗಿರಲಿಲ್ಲ. ಕಡೆಗೆ ಜೈಲಿನಿಂದ ಹೊರಬಂದವನೇ ನೇರವಾಗಿ ನದಿ ಬಳಿ ತೆರಳಿ ನೀರಿಗಿಳಿದು ಹಾವು ಹಿಡಿದು ಅದರ ಹೊಟ್ಟೆಯನ್ನು ಕಚ್ಚಿ ತಿಂದಿದ್ದಾನೆ. ಇದರೊಂದಿಗೆ ಬಹುದಿನಗಳ ಬಯಕೆ ಈಡೇರಿಸಿಕೊಂಡಿದ್ದಾನೆ.
ಈತ ಜೀವಂತ ಹಾವು ತಿಂದಿರುವಂತೆಯೇ ಒಬ್ಬ ಭಯಂಕರ ಡಕಾಯಿತ. ಅವನ ವಿಕೃತಿ ಕೇವಲ ಹಾವುಗಳಿಗೆ ಸೀಮಿತವಾಗಿಲ್ಲ. ಹಲವು ವರ್ಷಗಳಿಂದ ಫತೇಪುರ ಮತ್ತಿತರ ಕಡೆ ಡಕಾಯಿತಿ ಮತ್ತು ಅಮಾನುಷವಾಗಿ ಜನರ ಮೇಲೆ ದಾಳಿ ನಡೆಸುತ್ತ ಭಯಭೀತರಾಗುವಂತೆ ಮಾಡಿದ್ದ ಎನ್ನಲಾಗಿದೆ.
ಇನ್ನು ಹಲವು ವರ್ಷ ಜೈಲಿನಲ್ಲೇ ಇದ್ದ ಗಂಗಾ ಪ್ರಸಾದ್ ಗೆ ಪ್ರಾಯಶ್ಚಿತ್ತ ಆದಂತೆ ತೋರುತ್ತಿಲ್ಲ. ಹಾವು ತಿನ್ನುವ ವೀಡಿಯೋ ನೋಡಿದರೆ ವಿಲಕ್ಷಣ ಮತ್ತು ಭಯಾನಕತೆಯ ಬಗ್ಗೆ ಸ್ವಲ್ಪವೂ ಬದಲಾವಣೆಯಾಗಿಲ್ಲ ಎಂಬುದನ್ನು ಕಾಣಬಹುದು.
ಡಕಾಯಿತ ಗಂಗಾ ಪ್ರಸಾದ್ ಶಂಕರ್ ಕೇವಟ್ ಗ್ಯಾಂಗ್‌ನ ಸಕ್ರಿಯ ಸದಸ್ಯನಾಗಿದ್ದು, ಈ ಗ್ಯಾಂಗ್ ಲೂಟಿ ಮತ್ತು ಬೆದರಿಕೆಯ ಕೃತ್ಯಗಳಿಗೆ ಕುಖ್ಯಾತವಾಗಿದೆ. ಈ ನಿರ್ದಿಷ್ಟ ವೀಡಿಯೊ ಕಿಶನ್‌ಪುರ ಠಾಣಾ ಕಲ್ಕಾ ಕಾ ದೇರಾದಿಂದ ಬಂದಿದೆ ಎಂದು ಹೇಳಲಾಗುತ್ತದೆ.