ಹಿಂದು ಮಹಾ ಗಣಪತಿ ವಿಸರ್ಜನೆ

09NGD1
Published on

ನಂಜನಗೂಡು: ನಗರದ ಅರಮನೆ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದು ಮಹಾ ಗಣಪತಿ ವಿಸರ್ಜನೆ ಅಂಗವಾಗಿ ಭಾನುವಾರ ನಡೆದ ಶೋಭಾಯಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಅಲಂಕೃತ ವಾಹನದಲ್ಲಿ ಭಾರತಾಂಬೆ ಕಲಾಕೃತಿಯೊಂದಿಗೆ ಗಣಪತಿಯನ್ನು ಕೂರಿಸಿ, ವಿಶೇಷ ಪೂಜೆ ಸಲ್ಲಿಸಿ ಈಡುಗಾಯಿ ಒಡೆದು ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ವೀರಗಾಸೆ, ಪೂಜಾ ಕುಣಿತ, ಕಂಸಾಳೆ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾತಂಡಗಳ ಪ್ರದರ್ಶನ ಮೆರವಣಿಗೆಯ ಮೆರುಗು ಹೆಚ್ಚಿಸಿತ್ತು. ನಗಾರಿ ಸದ್ದಿಗೆ ಯುವಕರು ಕುಣಿದು ಸಂಭ್ರಮಪಟ್ಟರು.
ಮೆರವಣಿಗೆಯುದ್ದಕ್ಕೂ ಕೇಸರಿ ಬಾವುಟ, ಓಂಕಾರ ಬಾವುಟಗಳನ್ನು ಪ್ರದರ್ಶಿಸುತ್ತಾ ಸಾಗಿದ್ದು ಗಮನ ಸೆಳೆಯಿತು. ಯಾತ್ರೆ ಸಾಗುವ ಮಾರ್ಗದಲ್ಲೆಲ್ಲಾ ಕೇಸರಿ ಬಂಟಿಂಗ್‌ಗಳು ರಾರಾಜಿಸುತ್ತಿದ್ದವು. ಹಲವೆಡೆ ಗಣಪತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆಯಲಾಯಿತು.
ರಾಷ್ಟ್ರಪತಿ ರಸ್ತೆಯಲ್ಲಿ ಸಾಗಿದ ಶೋಭಾಯಾತ್ರೆ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಎಂಜಿಎಸ್ ರಸ್ತೆ, ನೆಹರು ವೃತ್ತ, ಬಜಾರ್ ರಸ್ತೆ, ಅಂಗಡಿ ಬೀದಿಯಲ್ಲಿ ಸಂಚರಿಸಿ ಕಪಿಲಾ ಸ್ನಾನಘಟ್ಟದಲ್ಲಿ ಗಣಪತಿ ವಿಸರ್ಜಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net