ಬರೋಬ್ಬರಿ 1.87 ಕೋಟಿ ರೂ.ಗೆ ಹರಾಜಾಯ್ತು ಗಣೇಶನ ಲಡ್ಡು ಪ್ರಸಾದ! ಯಾರಪ್ಪ ಖರೀದಿಸಿದ ಪುಣ್ಯಾತ್ಮ?

Ganesh Laddu Auctioned
Published on

ಹೈದರಾಬಾದ್​: ದೇಶದೆಲ್ಲೆಡೆ ಗೌರಿ-ಗಣೇಶ ಹಬ್ಬ ಮುಗಿದಿದೆ. ಆದರೆ, ನಗರ ಪ್ರದೇಶಗಳಲ್ಲಿ ಮಾತ್ರ ಹಬ್ಬ ಇನ್ನು ಮುಂದುವರಿದಿದೆ. ಒಂದೊಂದು ಏರಿಯಾದಲ್ಲಿ ಒಂದೊಂದು ದಿನ ಗಣಪನ ಮೂರ್ತಿ ಕೂರಿಸುತ್ತಿದ್ದಾರೆ. ಮುಂಬೈ ರೀತಿ ಹೈದರಾಬಾದ್​ ನಗರದಲ್ಲಿಯೂ ಗಣೇಶೋತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಗಣೇಶ ಮೂರ್ತಿಯ ನಿಮಜ್ಜನ ಮೆರವಣಿಗೆಯಲ್ಲಿ ಅನೇಕ ಭಕ್ತರು ಪಾಲ್ಗೊಂಡು ಕುಣಿದು ಕುಪ್ಪಳಿಸುತ್ತಾರೆ.

ಇನ್ನು ನಿಮಜ್ಜನಕ್ಕೂ ಮುನ್ನ ಲಡ್ಡು ಪ್ರಸಾದ ಹರಾಜು ನಡೆಯುವುದು ತೆಲುಗು ರಾಜ್ಯಗಳಲ್ಲಿ ಸಾಮಾನ್ಯ. ಈ ಹರಾಜಿನಲ್ಲಿ ಸಾಮಾನ್ಯರಿಂದ ಹಿಡಿದು ಶ್ರೀಮಂತರು ಭಾಗವಹಿಸಿ, ವಿಘ್ನೇಶ್ವರನ ಲಡ್ಡು ಪ್ರಸಾದವನ್ನು ತಮ್ಮದಾಗಿಸಿಕೊಳ್ಳಲು ಯತ್ನಿಸುತ್ತಾರೆ. ಲಡ್ಡು ಪ್ರಸಾದ ವಿಚಾರದಲ್ಲೂ ವ್ಯಕ್ತಿಯೊಬ್ಬ ಇದೀಗ ದಾಖಲೆ ಬರೆದಿದ್ದಾನೆ.

ತೆಲಂಗಾಣದ ಬಂಡ್ಲಗುಡದ ಕೀರ್ತಿ ರಿಚ್ಮಂಡ್ ವಿಲ್ಲಾಸ್​ನಲ್ಲಿ ಗಣೇಶ ಮೂರ್ತಿಯನ್ನು ಕೂರಿಸಲಾಗಿತ್ತು. ಈ ಗಣೇಶ ಮೂರ್ತಿಯ ಲಡ್ಡು ಪ್ರಸಾದವನ್ನು ಸೋಮವಾರ (ಸೆ.16) ಹರಾಜು ಹಾಕಲಾಯಿತು. ಈ ವೇಳೆ ಬರೋಬ್ಬರಿ 1.87 ಕೋಟಿ ರೂಪಾಯಿಗೆ ಹರಾಜಾಗುವ ಮೂಲಕ ತೆಲಂಗಾಣದ ಅತ್ಯಂತ ದುಬಾರಿ ಲಡ್ಡು ಎಂಬ ದಾಖಲೆಯನ್ನು ಬರೆದಿದೆ.

ಹರಾಜಿನ ಸಮಯದಲ್ಲಿ ತೀವ್ರವಾದ ಬಿಡ್ಡಿಂಗ್ ನಡೆದಿದ್ದರಿಂದ ಇಷ್ಟೊಂದು ದೊಡ್ಡ ಬೆಲೆಗೆ ಲಡ್ಡು ಮಾರಾಟವಾಯಿತು. 2023ನೇ ವರ್ಷದ ಬೆಲೆಗಿಂತ 61 ಲಕ್ಷ ಹೆಚ್ಚಳವನ್ನು ಇದು ಸೂಚಿಸುತ್ತದೆ. ಕಳೆದ ಬಾರಿ 1.26 ಕೋಟಿಗೆ ಲಡ್ಡು ಪ್ರಸಾದ ಹರಾಜಾಗಿತ್ತು. ಸದ್ಯ ಖರೀದಿದಾರರ ಹೆಸರನ್ನು ಸಂಘಟಕರು ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಇದಕ್ಕೆ ಸಂಬಂಧಿಸಿದ ಸುದ್ದಿ ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಹರಾಜಿನಲ್ಲಿ ಸಂಗ್ರಹಿಸಿದ ಹಣವನ್ನು ರಾಜ್ಯದ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಉನ್ನತೀಕರಿಸಲು ಬಹು ಅಭಿವೃದ್ಧಿ ಯೋಜನೆಗಳಿಗೆ ಬಳಸಲಾಗುತ್ತದೆ ಎಂದು ಹರಾಜು ಆಯೋಜನೆ ಮಾಡಿದ್ದ ಟ್ರಸ್ಟ್ ಹೇಳಿದೆ. ಆರು ವರ್ಷಗಳ ಹಿಂದೆ 2 ಲಕ್ಷ ಸಂಗ್ರಹಿಸಿದಾಗ ಶಾಲಾ ಮಕ್ಕಳ ಶುಲ್ಕವನ್ನು ಪಾವತಿಸಲು ಹಣವನ್ನು ಬಳಸಿದ್ದೇವೆ. ಈಗ ಹಣ ಮೊತ್ತ 60 ಪಟ್ಟು ಹೆಚ್ಚು ಬೆಳೆದಿದೆ. ಇದೇ ರೀತಿಯ ಕಲ್ಯಾಣ ಚಟುವಟಿಕೆಗಳಿಗೆ ಹಣವನ್ನು ಬಳಸಲಾಗುವುದು ಎಂದು ಟ್ರಸ್ಟ್​ ಹೇಳಿದೆ.

ಅಂದಹಾಗೆ ಬಾಳಾಪುರ ಗಣೇಶ ಉತ್ಸವ ಸಮಿತಿಯು 1994ರಲ್ಲಿ ಪ್ರಾರಂಭವಾಯಿತು. ಅಂದಿನಿಂದ ಬಾಳಾಪುರ ಗಣೇಶ ಲಡ್ಡುವನ್ನು ಹರಾಜು ಮಾಡುವ ಪದ್ಧತಿಯು ವಾರ್ಷಿಕ ಕಾರ್ಯಕ್ರಮವಾಗಿ ಮುಂದುವರಿಯುತ್ತಾ ಬರುತ್ತಿದೆ. 450 ರೂಪಾಯಿ ಬಿಡ್‌ನೊಂದಿಗೆ ರೈತ ಕೋಲನ್‌ ಮೋಹನ್‌ ರೆಡ್ಡಿ ಅವರು ಮೊದಲ ಹರಾಜಿನಲ್ಲಿ ಲಡ್ಡು ಗೆದ್ದರು. ವರ್ಷಗಳು ಕಳೆದಂತೆ, ಕೀರ್ತಿ ರಿಚ್ಮಂಡ್ ವಿಲ್ಲಾಸ್ ಲಡ್ಡು ತೆಲಂಗಾಣದ ಗಣೇಶ ಚತುರ್ಥಿ ಆಚರಣೆಯಲ್ಲಿ ಅತ್ಯಂತ ದುಬಾರಿ ಲಡ್ಡು ಎನಿಸಿಕೊಳ್ಳುತ್ತಿದೆ. 2022ರಲ್ಲಿ ಲಡ್ಡು ಪ್ರಸಾದ ಬರೋಬ್ಬರಿ 60 ಲಕ್ಷಕ್ಕೆ ಹರಾಜಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net