ಬೆನಕನ ಸ್ವಾಗತಕ್ಕೆಸಜ್ಜಾದ ಕೊಪ್ಪಳ ಜನತೆ

GANESH FESTIVAL WElCOME KOPPAL PEOPLE
ಕೊಪ್ಪಳದಲ್ಲಿ ಭಾನುವಾರ ಗಣೇಶ ಮೂರ್ತಿ ಕೊಳ್ಳುತ್ತಿರುವ ಜನರು.
Published on

ಕೊಪ್ಪಳ: ಜಿಲ್ಲಾದ್ಯಂತ ಬೆನಕನ ಬರ ಮಾಡಿಕೊಳ್ಳಲು ಜನತೆ ಸಜ್ಜಾಗಿದ್ದು, ಭಾನುವಾರ ನಗರಾದ್ಯಂತ ಜನ ಜಂಗುಳಿ ಕಂಡುಬಂತು.

ಪ್ರಮುಖ ರಾಷ್ಟೀಯ ಹಬ್ಬಗಳಲ್ಲಿ ಒಂದಾದ ಗಣೇಶ ಚೌತಿಗೆ ನಗರ, ಗ್ರಾಮೀಣ ಭಾಗಗಳಲ್ಲಿ ವಿಶೇಷ ಸ್ಥಾನವಿದೆ. ಭಾನುವಾರ ಗೌರಿಯನ್ನು ಬರ ಮಾಡಿಕೊಂಡ ಭಕ್ತರು, ಗಣೇಶ ಮೂರ್ತಿಗಳನ್ನು ಕೊಂಡೊಯ್ದರು.

ಕೊಪ್ಪಳ ನಗರದ ವಿವಿಧ ಬಡಾವಣೆ, ಮುಖ್ಯ ರಸ್ತೆ, ಗುಡಿ, ಸಾರ್ವಜನಿಕ ಸ್ಥಳ, ಉದ್ಯಾನಗಳಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಬೃಹತ್, ಮಧ್ಯಮ ಗಾತ್ರದ ವೇದಿಕೆಗಳು ಸಿದ್ಧಗೊಂಡಿವೆ.

ಪಿಒಪಿ ಗಣೇಶ ಮೂರ್ತಿ ನಿಷೇಧವಿದ್ದರೂ ಮಾರುಕಟ್ಟೆಯಲ್ಲಿ ಬಹುಪಾಲು ವರ್ತಕರು ಇದೇ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ.

ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಮೂರ್ತಿಗಳಿದ್ದರೂ ಕಾಳಜಿ ಇದ್ದವರು ಮಾತ್ರ ಕೊಳ್ಳುತ್ತಿದ್ದಾರೆ. ಬಹುಪಾಲು ಜನರು ಪಿಒಪಿ ಮೂರ್ತಿಗಳನ್ನೇ ಕೊಳ್ಳುತ್ತಿದ್ದಾರೆ.

ಸಾವಿರ ರೂ.ನಿಂದ ಹಿಡಿದು ಲಕ್ಷಾಂತರ ರೂ. ಮೌಲ್ಯದ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಜಿಲ್ಲಾಡಳಿತ, ಪರಿಸರ ಇಲಾಖೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆಗೆ ಸೀಮಿತವಾಗಿವೆ.

ಮಾರುಕಟ್ಟೆಯಲ್ಲಿ ಅಂಗಡಿಗಳಿಗೆ ಭೇಟಿ ನೀಡಿ ಮಾರಾಟಗಾರರು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಯತ್ನಗಳಾಗುತ್ತಿಲ್ಲ. ಇದರಿಂದ ಜಾಗೃತಿ ಕೇವಲ ಬಾಯಿ ಮಾತಿಗೆ ಸೀಮಿತವಾದಂತಾಗಿದೆ.

ಮತ್ತೊಂದೆಡೆ ನಿರೀಕ್ಷಿತ ಮಳೆ ಇಲ್ಲದೆ ಬರ ಆವರಿಸಿದೆ. ರೈತಾಪಿ ವರ್ಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ರಾಷ್ಟ್ರೀಯ ಹಬ್ಬವಾದ ಕಾರಣ ಹಬ್ಬಾಚರಣೆ ಮೇಲೆ ಬರದ ಪ್ರಭಾವ ಅಷ್ಟಾಗಿ ಬೀರಿದಂತಿಲ್ಲ. ಮಾರುಕಟ್ಟೆಯಲ್ಲಿ ಜನರು ಲವಲವಿಕೆಯಿಂದ ಓಡಾಡಿದರು.

ಮತ್ತೊಂದೆಡೆ ಬೆಲೆ ಏರಿಕೆ ಬಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ಹಣ್ಣು, ಹೂ, ಬಾಳೆದಿಂಡು, ದಿನಸಿ ಬೆಲೆ ದುಪ್ಪಟ್ಟಾಗಿದ್ದು, ಸಾರ್ವಜನಿಕರು ಬೆಲೆ ಏರಿಕೆ ಬಿಸಿ ಅನುಭವಿಸುವಂತಾಗಿದೆ.
ತಿಂಗಳ ಹಿಂದಿದ್ದ ದಿನಸಿ ಬೆಲೆ ಗಣನೀಯವಾಗಿ ಹೆಚ್ಚಳವಾಗಿದೆ. 10 ರೂ. ಇದ್ದ ಮೊಳ ಹೂ 25ರೂ., 30ರೂ, ಡಜನ್ ಇದ್ದ ಬಾಳೆ ಹಣ್ಣು 50ರೂ., 150ರೂ. ಕೆಜಿ ಇದ್ದ ಸೇಬು 180ರೂ.ಗೆ ಏರಿದ್ದು ಗಣೇಶ ಚೌತಿ ಜನರಿಗೆ ದುಬಾರಿಯಾಗಿ ಪರಿಣಮಿಸುವಂತಾಗಿದೆ.

ಕೊಪ್ಪಳ ಬಸ್ ನಿಲ್ದಾಣ ಮುಂಭಾಗ, ಅಶೋಕ ವೃತ್ತ, ಸಾರ್ವಜನಿಕ ಮೈದಾನ ಸೇರಿ ವಿವಿಧೆಡೆ ಬಾಳೆ ದಿಂಡು, ಹೂ ಮಾರಾಟ ಮಾಡಲಾಗುತ್ತಿದೆ. ತಾಲೂಕು ಕ್ರೀಡಾಂಗಣದಲ್ಲಿ ಪಟಾಕಿ ಅಂಗಡಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net