VIDEO| ಸ್ಪಷ್ಟ, ಸುಲಲಿತವಾಗಿ ಇಂಗ್ಲಿಷ್​ ಮಾತನಾಡುವ ಈ ಹಿರಿಯ ಮಹಿಳೆಗೆ ನೀವೆಷ್ಟು ಅಂಕ ಕೊಡುತ್ತೀರಾ!

Woman English
Published on

ನವದೆಹಲಿ: ತುಂಬಾ ಸರಳವಾಗಿ ಹಾಗೂ ನೋಡಲು ಅನಕ್ಷರಸ್ಥೆಯಂತೆ ಕಾಣುವ ಹಿರಿಯ ಮಹಿಳೆಯೊಬ್ಬಳು ಸ್ಪಷ್ಟವಾಗಿ, ಅರಳು ಹುರಿದಂತೆ ಇಂಗ್ಲಿಷ್​ ಮಾತನಾಡುವ ವಿಡಿಯೋಗೆ ನೆಟ್ಟಿಗರು ಅಕ್ಷರಶಃ ಫಿದಾ ಆಗಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಬಿಳಿ ಶರ್ಟ್ ಮತ್ತು ಕೆಂಪು ಸೀರೆಯುಟ್ಟಿರುವ ಮಹಿಳೆಯು ಇಂಗ್ಲಿಷ್​ನಲ್ಲೇ ಮಹಾತ್ಮ ಗಾಂಧಿಯವರ ಬಗ್ಗೆ ಚಿಕ್ಕದಾದ ವಿವರಣೆಯನ್ನು ನೀಡುತ್ತಾರೆ. ಗಾಂಧಿ ವಿಶ್ವದ ಶ್ರೇಷ್ಠ ವ್ಯಕ್ತಿ. ಅವರು ಸಾಮಾನ್ಯ ಕುಟುಂಬಕ್ಕೆ ಸೇರಿದವರು. ಅವರು ತುಂಬಾ ಸರಳ ವ್ಯಕ್ತಿ ಹಾಗೂ ಸರಳವಾದ ಆಹಾರವನ್ನು ಸೇವಿಸುತ್ತಿದ್ದರು. ಅವರು ಮೇಕೆಯ ಹಾಲನ್ನು ಕುಡಿಯುತ್ತಿದ್ದರು ಎಂದು ಹೇಳಿದ್ದಾರೆ.

ಗಾಂಧಿ ರಾಷ್ಟ್ರದ ಪಿತಾಮಹ. ಅವರು ಹಿಂದು ಮತ್ತು ಮುಸ್ಲಿಂ ಇಬ್ಬರನ್ನು ಪ್ರೀತಿಸುತ್ತಿದ್ದರು. ಅವರೊಬ್ಬ ಅಹಿಂಸಾವಾದಿ ಎಂದು ಹೇಳಿ ತನ್ನ ಮಾತನ್ನು ಮುಗಿಸಿದ್ದಾರೆ.

ಈ ವಿಡಿಯೋವನ್ನು ಅರುಣ್​ ಬೋತ್ರಾ ಎಂಬುವರು ಶೇರ್​ ಮಾಡಿಕೊಂಡು ಈ ಮಹಿಳೆಯ ಸ್ಪೋಕನ್​ ಇಂಗ್ಲಿಷ್​ ಟೆಸ್ಟ್​ಗೆ 10 ಅಂಕಗಳಲ್ಲಿ ಎಷ್ಟು ಅಂಕ ಕೊಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಅನೇಕ ನೆಟ್ಟಿಗರು ಮಹಿಳೆಯ ಇಂಗ್ಲಿಷ್​ ಕೌಶಲಕ್ಕೆ ಮರುಳಾಗಿದ್ದಾರೆ. ಅಲ್ಲದೆ ಕಾಂಗ್ರೆಸ್​ ನಾಯಕ ಶಶಿ ತರೂರ್​ ಅವರ ಗಮನವನ್ನು ಸೆಳೆದಿದೆ.

ಈಶಾನ್ಯ ದೆಹಲಿ ಗಲಭೆ ನಡುವೆಯೇ ಈ ವಿಡಿಯೋ ಭಾರಿ ವೈರಲ್​ ಆಗಿದ್ದು, ಕೋಮು ಸೌಹಾರ್ದತೆಯ ಸಂದೇಶವನ್ನು ಸಾರಿದೆ. ಈವರೆಗೂ ವಿಡಿಯೋವನ್ನು 2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net