ಗಾಂಧಿ ಕುಟುಂಬದ ಹಿಡಿತದಲ್ಲಿ ಖರ್ಗೆ; ಬಿಜೆಪಿ ಸಂಸದ ಟೀಕೆ

Lahar singh siroai
Published on

ಬೆಂಗಳೂರು: ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಗಾಂಧಿ ಕುಟುಂಬ ಬಿಡುತ್ತಿಲ್ಲ ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ಲಹರ್ ಸಿಂಗ್ ಸಿರೋಯ್ ಟೀಕಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖರ್ಗೆ ಸೇವಾಹಿರಿತನ, ಅನುಭವ ಹಾಗೂ ಪಕ್ಷ ನಿಷ್ಠೆ ಹಾಗೂ ದೇಶಕ್ಕಿಂತ ಕುಟುಂಬ ನಿಷ್ಠೆಯೇ ಗಾಂಧಿ ಪರಿವಾರಕ್ಕೆ ಮುಖ್ಯವಾಗಿದೆ ಎಂದರು.

ಕಿರಿಯ ಸಂಸದರಾದ ಜೈರಾಮ್ ರಮೇಶ್, ಕೆ.ಸಿ.ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಆಣತಿಯಂತೆ ಖರ್ಗೆ ನಡೆಯಬೇಕಾಗಿದೆ. ಕಾಂಗ್ರೆಸ್ ಪಕ್ಷದ ದುರವಸ್ಥೆಯಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಉದ್ಯಮ ಉಳಿಸಲು ಒತ್ತಾಯ

ಅಗರಬತ್ತಿ ಉದ್ಯಮ ಉಳಿಸಿ ಬೆಳೆಸಲು ಸಂಸತ್ತಿನ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನಕ್ಕೆ ತಂದಿರುವೆ. ಕರ್ನಾಟಕವು ಜಗತ್ತಿನ ಅಗರಬತ್ತಿ ರಾಜಧಾನಿಯಾಗಿದ್ದು, ನಾಲ್ಕು ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ.

ಈ ಉದ್ಯಮದಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯ ಸರ್ಕಾರವು ಅವಾಸ್ತವಿಕ ಯೋಜನೆಗಳ ಬದಲು ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡಿ, ಅಗರಬತ್ತಿ ಉದ್ಯಮವನ್ನು ಉಳಿಸಿ ಬೆಳೆಸಲು ಅಗತ್ಯ ಕ್ರಮವಹಿಸಬೇಕು ಎಂದು ಸಿರೋಯ್ ಒತ್ತಾಯಿಸಿದರು.

ಮಾಹಿತಿ ಮತ್ತು ಸಂವಹನದ ಸಂಸತ್ ಸ್ಥಾಯಿ ಸಮಿತಿ ಸದಸ್ಯನಾಗಿ ಕೆಲಸ ಮಾಡುವ ಉತ್ತಮ ಅವಕಾಶ ನನಗೆ ದೊರೆತಿದೆ. ವೈಯಕ್ತಿಕ ಡಿಜಿಟಲ್ ದತ್ತಾಂಶ ಸಂರಕ್ಷಣಾ ಮಸೂದೆಯ ಬಗ್ಗೆ ಸಮಿತಿ ವಿವಿಧ ಹಂತದಲ್ಲಿ ಚರ್ಚೆಯಾಗಿ ಸಂಸತ್ತಿನಲ್ಲಿ ಮಂಡನೆಯಾಗಿ ಅಂಗೀಕಾರವಾಗಿದೆ.

ವೈಯಕ್ತಿಕ ದತ್ತಾಂಶದ ರಕ್ಷಣೆಗಾಗಿ ಇರುವ ದೇಶದ ಮೊದಲ ಸಮಗ್ರ ಕಾನೂನು ಇದಾಗಿದೆ. ಒಟ್ಟು 25 ಮಸೂದೆಗಳು ಅಂಗೀಕಾರವಾಗಿವೆ. ಸದನದಲ್ಲಿ ಕಲಾಪಕ್ಕೆ ಅಡ್ಡಿಪಡಿಸುವ, ಸತ್ಯ ತಿರುಚುವ ಪ್ರಯತ್ನ ವಿರೋಧ ಪಕ್ಷಗಳು ಮಾಡಿದವು ಎಂದು ಲಹರ್ ಸಿಂಗ್ ಸಿರೋಯ್ ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net