ಗಣೇಶ ಮೂರ್ತಿಗೆ ಸಂಭ್ರಮದ ತೆರೆ

dj hsd ganeshothsava
Published on

ಹೊಸದುರ್ಗ: ಪಟ್ಟಣದ ವಿನಾಯಕ ರಂಗಮಂದಿರದಲ್ಲಿ ಓಂ ಗಣಪತಿ ಭಕ್ತಮಂಡಳಿಯ 20ನೇ ವರ್ಷದ ಗಣೇಶೋತ್ಸವಕ್ಕೆ ಮಂಗಳವಾರ ಮೂರ್ತಿ ವಿಸರ್ಜನೆಯೊಂದಿಗೆ ಸಂಭ್ರಮದ ತೆರೆ ಬಿದ್ದಿತು.

ಕೊನೆಯ ದಿನದ ರಾಜಬೀದಿ ಉತ್ಸವದಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಸಂಭ್ರಮದಿಂದ ಪಾಲ್ಗೊಂಡರು.

ಗಣೇಶ ಚತುರ್ಥಿಯಿಂದ 9 ದಿನಗಳ ಕಾಲ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ತ್ರಿಕಾಲ ಪೂಜೆಯೊಂದಿಗೆ ಗಣಪತಿಯನ್ನು ಆರಾಧಿಸಲಾಯಿತು.

ಮಧ್ಯಾಹ್ನ ಮತ್ತು ರಾತ್ರಿ ವಿಶೇಷ ಮಹಾ ಪೂಜೆ, ಗಣಪತಿ ಸಹಸ್ರನಾಮ ಪಠಣ, ಮಂಗಳಾರತಿ, ಪ್ರಸಾದ ವಿತರಣೆ ಕಾರ್ಯಕ್ರಮಗಳು ನಡೆದವು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಆಕರ್ಷಿಸಿದವು.

ಗಣೇಶ ಮೂರ್ತಿಗೆ ಸಂಕಲ್ಪ, ಅಷ್ಟೋತ್ತರ ಪೂಜೆ, ಅಲಂಕಾರ ಪೂಜೆ, ಮಹಾ ಪೂಜೆ ಹಾಗೂ ಮಹಾ ಮಂಗಳಾರತಿ ನಡೆದವು.

ರಾಜಬೀದಿ ಉತ್ಸವ ಸಾಗುವ ಮಾರ್ಗವನ್ನು ರಂಗೋಲಿ, ಹೂಮಾಲೆಗಳಿಂದ ಅಲಂಕರಿಸಲಾಗಿತ್ತು. ಮೂರ್ತಿಯ ಮೇಲೆ ಭಕ್ತರು ಪುಷ್ಪವೃಷ್ಠಿ ಮಾಡಿ ಭಕ್ತಿ ಸಮರ್ಪಿಸಿದರು.

ಮೆರವಣಿಗೆಯಲ್ಲಿ ಜನಪದ ಕಲಾತಂಡಗಳು, ನಾದಸ್ವರ, ವಾದ್ಯಮೇಳಗಳು ಪಾಲ್ಗೊಂಡಿದ್ದವು. ರಸ್ತೆಯ ಎರಡು ಬದಿಯಲ್ಲಿ ನಿಂತ ಭಕ್ತರು ಗಣಪತಿಯ ದರ್ಶನ ಪಡೆದರು. ರಾತ್ರಿ ಬಸ್ ನಿಲ್ದಾಣದ ಬಳಿ ಮಠದ ಹೊಂಡದಲ್ಲಿ ಗಣಪತಿಯ ವಿಸರ್ಜನೆ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net