

ಶಿಕಾರಿಪುರ: ನಾವು ಜ್ಞಾನ ಸಂಪಾದನೆಯ ಕಡೆಗೆ ಹೆಚ್ಚಿನ ಮಹತ್ವ ನೀಡಬೇಕು. ಏಕೆಂದರೆ ಅಕ್ಷರ ಜ್ಞಾನದಿಂದ ಬದುಕು ಹಸನಾಗುವ ಜತೆಗೆ ಗೌರವ ತಂದುಕೊಡುತ್ತದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತಾಲೂಕು ಸಂಚಾಲಕಿ ಶುಭಾ ರಘು ಹೇಳಿದರು.
ದತ್ತ ಕೇವಲಾನಂದ ಆಶ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಿಳಾ ಘಟಕದಿಂದ ಮಕ್ಕಳಿಗೆ ಏರ್ಪಡಿಸಿದ್ದ ಆಟೋಟ ಸ್ಪರ್ಧೆ, ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅನಾದಿ ಕಾಲದಿಂದಲೂ ವಿಪ್ರ ಸಮುದಾಯ ಸಮಾಜಮುಖಿ ಚಟುವಟಿಕೆ ಮಾಡುತ್ತ ಬಂದಿದೆ. ಮಕ್ಕಳಿಗೂ ಬಾಲ್ಯದಿಂದಲ್ಲೇ ಇಂತಹ ಗುಣಗಳನ್ನು ಬೆಳೆಸಬೇಕು. ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಬಾಪೂಜಿ ಪ್ರೌಢಶಾಲೆ ಮುಖ್ಯ ಶಿಕ್ಷಕ ರಾಘವೇಂದ್ರ ಕುಲಕರ್ಣಿ ಮಾತನಾಡಿ, ನಾವು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವತ್ತ ಗಮನ ಹರಿಸಬೇಕು. ಹಿರಿಯರು ನಮಗೆ ಬಿಟ್ಟುಹೋದ ಆಚಾರ, ವಿಚಾರ, ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಹೋಗಬೇಕು. ದೈವಾರಾಧನೆಯಿಂದ ನಮ್ಮಲ್ಲಿ ಚೈತನ್ಯ ಮೂಡುತ್ತಲ್ಲದೇ, ಧರ್ಮೋತ್ಥಾನ ಕಾರ್ಯ ಮಾಡಲು ಸ್ಫೂರ್ತಿ ದೊರೆಯುತ್ತದೆ ಎಂದು ತಿಳಿಸಿದರು.
ಕ್ರೀಡೆಗಳು ಆರೋಗ್ಯಕ್ಕೆ ಸಹಕಾರಿ. ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದುದು ಮತ್ತೊಂದಿಲ್ಲ. ಮಕ್ಕಳಿಗೆ ದೇಸಿ ಕ್ರೀಡೆಗಳನ್ನು ಕಲಿಸಬೇಕು. ಕ್ರೀಡೆಗಳು ಸ್ಪರ್ಧಾತ್ಮಕ ಭಾವನೆ ಬೆಳೆಸುತ್ತವೆ ಎಂದರು.
ಅಪರ್ಣಾ ಗುರುಮೂರ್ತಿ, ಸುಷ್ಮಾ ದೀಕ್ಷಿತ್, ಸುಕನ್ಯಾ ಸೋಮಶೇಖರ್, ಶಿಕ್ಷಕಿಯರಾದ ಶಾಂತಾ, ಗಾಯತ್ರಿ, ಸಿಂಧು ಗಿರೀಶ್, ಮಹಿಳಾ ಘಟಕದ ಸದಸ್ಯರು ಇದ್ದರು.