

ಬೆಂಗಳೂರು: ಕರೊನಾ ತಂದೊಡ್ಡುತ್ತಿರುವ ಅವಾಂತರ ಅಷ್ಟಿಷ್ಟಲ್ಲ. ಲಾಕ್ಡೌನ್ ವೇಳೆ ಕೆಲಸ ಕಳೆದುಕೊಂಡ ಗಗನಸಖಿಯ ಸಂಸಾರದಲ್ಲಿ ವಿರಸ ಉಂಟಾಗಿ ಬೇಸತ್ತ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಮೃತಹಳ್ಳಿ ಸಮೀಪದ ಕೆಂಪಾಪುರ ನಿವಾಸಿ ಪರಿಣಿತ ಬೋರಾ (26) ಮೃತರು. ಅಸ್ಸಾಂ ಮೂಲದ ಪರಿಣಿತ ಮತ್ತು ವಿಶಾಲ್ 3 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಈ ದಂಪತಿಗೆ 1 ವರ್ಷದ ಗಂಡು ಮಗುವಿದೆ. ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರಿಣಿತ ಗಗನಸಖಿ ಆಗಿದ್ದರು. ವಿಶಾಲ್ ಖಾಸಗಿ ದೂರ ಸಂಪರ್ಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಒಂದೂವರೆ ವರ್ಷದಿಂದ ಕೆಂಪಾಪುರದಲ್ಲಿ ನೆಲೆಸಿದ್ದ ದಂಪತಿಯ ಬದುಕು ಅನ್ಯೋನ್ಯವಾಗಿತ್ತು.
ಕರೊನಾ ಲಾಕ್ಡೌನ್ ಬಳಿಕ ಪರಿಣಿತ ಕೆಲಸದಿಂದ ವಜಾಗೊಂಡಿದ್ದರು. ಅದೇ ಸಮಯಕ್ಕೆ ವಿಶಾಲ್ ಕೂಡ ನಿರುದ್ಯೋಗಿಯಾದ. ಇದಾದ ಬಳಿಕ ಮನೆಯಲ್ಲಿ ಸಣ್ಣಪುಟ್ಟ ವಿಚಾರಕ್ಕೂ ಜಗಳ ನಡೆಯುತ್ತಿತ್ತು. ಸೋಮವಾರ ರಾತ್ರಿ ಕೂಡ ಪರಿಣಿತ ಮತ್ತು ವಿಶಾಲ್ ನಡುವೆ ಗಲಾಟೆಯಾಗಿದೆ. ಕೊಠಡಿಗೆ ತೆರಳಿದ ಪರಿಣಿತ ನೇಣು ಬಿಗಿದುಕೊಂಡಿದ್ದಾರೆ. ಮನೆ ಕೆಲಸದಾಕೆ ರಾತ್ರಿ ಗಮನಿಸಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮೃತಳ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಅವರು ನೀಡುವ ದೂರು ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.