ಬಾಕ್ಸ್​ ಆಫೀಸ್​ನಲ್ಲಿ ಘರ್ಜಿಸಿದ 'ಗದರ್​ 2'; ಒಟ್ಟು ಕಲೆಕ್ಷನ್​ ಎಷ್ಟು ಗೊತ್ತಾ?

Untitled design - 2023-08-15T190910.993
Published on

ಮುಂಬೈ: ಕಳೆದ ನಾಲ್ಕು ದಿನಗಳಿಂದ ಭಾರತೀಯ ಚಿತ್ರರಂಗದ ಬಾಕ್ಸ್​ ಆಫೀಸ್​ನಲ್ಲಿ ಭಾರೀ ಪೈಪೋಟಿ ನಡೆಯುತ್ತಿದ್ದು, ರಜನಿಕಾಂತ್​ ಅಭಿನಯದ 'ಜೈಲರ್'​ ಮತ್ತು ಸನ್ನಿ ಡಿಯೋಲ್​ ನಟನೆಯ 'ಗದರ್​ 2' ಸಿನಿಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಬಹುಸಂಖ್ಯೆಯಲ್ಲಿ ಕರೆತರುವಲ್ಲಿ ಯಶಸ್ವಿಯಾಗಿದೆ. ಈ ಮಧ್ಯೆ ಗದರ್​ 2 ಗಳಿಕೆಯಲ್ಲಿ ಮುನ್ನುಗ್ಗುತ್ತಿದ್ದು, ಆಗಸ್ಟ್​ 15 ರಂದು ಉತ್ತಮ ಕಲೆಕ್ಷನ್​ ಮಾಡಿದೆ.

'ಗದರ್: ಏಕ್ ಪ್ರೇಮ್ ಕಥಾ' ಚಿತ್ರದ ಮುಂದುವರಿದ ಭಾಗವಾಗಿರುವ 'ಗದರ್​ 2' ಚಿತ್ರದಲ್ಲಿ ಸನ್ನಿ ಡಿಯೋಲ್​ ನಾಯಕನಾಗಿ ಕಾಣಿಸಿಕೊಂಡಿದ್ದು, ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್​ನತ್ತ ಸಾಗುತ್ತಿದೆ. ಆಕ್ಷನ್-ಡ್ರಾಮಾ ಜಾನರ್​ನ ಈ ಸಿನಿಮಾ ಸಿನಿಪ್ರೇಕ್ಷಕರಿಗೆ ಉತ್ತಮ ಸಂದೇಶವನ್ನು ತಲುಪಿಸಿದೆ. ಸದ್ಯ ಬಾಕ್ಸ್​ ಆಫೀಸ್​​ನಲ್ಲಿ ಭರ್ಜರಿ ಗಳಿಕೆಯನ್ನು ಮಾಡುತ್ತಿರುವ ಗದರ್​ 2, ಬಿಡುಗಡೆಗೊಂಡ 4 ದಿನಗಳಲ್ಲಿ ಬರೋಬ್ಬರಿ 173 ಕೋಟಿ ರೂ.ಗಳನ್ನು ಸಂಗ್ರಹಿಸಿದೆ.

ಆಗಸ್ಟ್​ 15 ರಂದು ಸ್ವಾತಂತ್ರ್ಯ ದಿನಾಚರಣೆ ಆದ ಕಾರಣ ಸರ್ಕಾರಿ ರಜೆಯಿತ್ತು. ಹಾಗಾಗಿ ಈ ದಿನ ಚಿತ್ರಮಂದಿರಗಳಿಗೆ ಸಿನಿಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ ಎಂದು ಈ ಹಿಂದೆಯೇ ನಿರೀಕ್ಷಿಸಲಾಗಿತ್ತು. ಇಂದು ಚಿತ್ರ ಕನಿಷ್ಠ 50 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದ್ದು, ಶೀಘ್ರವೇ 200 ಕೋಟಿ ರೂ. ಗಡಿ ತಲುಪಲಿದೆ. ಅನಿಲ್ ಶರ್ಮಾ ನಿರ್ದೇಶನದ ಗದರ್ 2 ಸಿನಿಮಾಗೆ ಚಿತ್ರಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net