

ಗದಗ: ಗಾಂಜಾ ಬೆಳೆದ ಆರೋಪಿಗೆ 15 ವರ್ಷ ಕಠಿಣ ಶಿಕ್ಷ ವಿಧಿಸಿ ಹೆಚ್ಚುವರಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ನೀಡಿದೆ. ಬೆಳಗಟ್ಟಿ ಗ್ರಾಮದ, ಉಡಚಪ್ಪ ಬಸವಣ್ಣೆಪ್ಪ ಪುರದ ಎಂಬಾತ ಶಿಕ್ಷೆಗೊಳಗಾದ ಆರೋಪಿ.
ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳಗಟ್ಟಿ ಗ್ರಾಮದ ತನ್ನ ಜಮೀನಿನಲ್ಲಿ ಆರೋಪಿ ಉಡಚಪ್ಪ ಬಸವಣ್ಣೆಪ್ಪ ಗಾಂಜಾ ಬೆಳದಿದ್ದ. ತನ್ನ 1 ಎಕರೆ 10 ಗುಂಟೆ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದಕ್ಕೆ 2013 ನವೆಂಬರ್ 09 ರಂದು ಶಿರಹಟ್ಟಿ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದರು. ಈ ವೇಳೆ ಪೊಲೀಸರು 1 ಲಕ್ಷ ರೂಪಾಯಿ ಮೌಲ್ಯದ 101 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದರು.
ಪ್ರಕರಣದ ಬಗ್ಗೆ 2014 ಏಪ್ರಿಲ್ 30 ರಂದು ಪಿಎಸ್ಐ ಎಸ್.ಆರ್. ಕಟ್ಟಿಮನಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಇದೀಗ ಹೆಚ್ಚುವರಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ರಾಜ್ವೇಶ್ವರ ಎಸ್.ಶೆಟ್ಟಿ ಅವರು ಪರಿಶೀಲಿಸಿ ಗಾಂಜಾ ಬೆಳೆದ ಆರೋಪಿಗೆ 15 ವರ್ಷ ಕಠಿಣ ಶಿಕ್ಷೆ ಹಾಗೂ 2 ಲಕ್ಷ ರೂಪಾಯಿ ದಂಡವನ್ನು ವಿಧಿಸಿ ಆದೇಶ ನೀಡಿದ್ದಾರೆ.