

ಐರೋಪ್ಯ ಒಕ್ಕೂಟ ಹಾಗೂ ಜಿ 7 ರಾಷ್ಟ್ರಗಳು ರಷ್ಯಾದ ಮೇಲೆ ಹೇರಿರುವ ತೈಲ ಬೆಲೆ ಮಿತಿ ಡಿ. 5ರಿಂದ ಲಾಗೂ ಆಗಿದ್ದು, ಇತರ ಪೆಟ್ರೋಲಿಯಂ ಉತ್ಪನ್ನಗಳಿಗೆ ಈ ಮಿತಿ ಮುಂದಿನ ಫೆ. 5ರಂದು ಶುರುವಾಗಲಿದೆ. ಒಂದು ವೇಳೆ ತೈಲ ಬೆಲೆ ಮಿತಿ ಉಲ್ಲಂಘಿಸಿದರೆ, ಹಡಗುಗಳಿಗೆ ವಿಮೆ ಸೇವೆ ಸೌಲಭ್ಯ ಸ್ಥಗಿತಗೊಳಿಸುವುದಾಗಿ ಬ್ರಿಟನ್, ಅಮೆರಿಕ ಮೊದಲಾದ ಜಿ 7 ರಾಷ್ಟ್ರಗಳು ಹಾಗೂ ಐರೋಪ್ಯ ರಾಷ್ಟ್ರಗಳ ಒಕ್ಕೂಟ ಬೆದರಿಕೆ ಹಾಕಿದೆ. ಆದರೆ, ಈ ಬೆಲೆ ಮಿತಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ರಷ್ಯಾ ಖಡಾಖಂಡಿತವಾಗಿ ಹೇಳಿದೆ.
ರಷ್ಯಾದ ತೈಲಕ್ಕೆ ವಿಧಿಸಿರುವ ಮಿತಿ ಬ್ಯಾರಲ್ ಒಂದಕ್ಕೆ 60 ಡಾಲರ್. ಅಂದರೆ, ರಷ್ಯಾ ತನ್ನ ಪೆಟ್ರೋಲನ್ನು ಈ ಬೆಲೆಗಿಂತ ಹೆಚ್ಚಿನ ದರದಲ್ಲಿ ಬೇರೆ ದೇಶಗಳಿಗೆ ಮಾರಾಟ ಮಾಡಬಾರದು. ಇತರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಮಿತಿಯನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಈ ದೇಶಗಳು ಹೇಳಿವೆ.
ಬೆಲೆ ಮಿತಿಗಿಂತ ಹೆಚ್ಚಿನ ದರಕ್ಕೆ ಕಚ್ಚಾ ತೈಲವನ್ನು ರಷ್ಯಾ ಮಾರಾಟ ಮಾಡಿದರೆ, ಆ ತೈಲ ಅಥವಾ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸುವ ಹಡಗಿಗೆ ವಿಮೆ, ಹಣಕಾಸು ಮತ್ತು ಇತರೆ ಸೇವಾ ಸೌಲಭ್ಯಗಳನ್ನು ಒದಗಿಸುವುದಕ್ಕೆ ಐರೋಪ್ಯ ಒಕ್ಕೂಟ ಹಾಗೂ ಜಿ 7 ರಾಷ್ಟ್ರಗಳು ಸೇರಿದಂತೆ 27 ದೇಶಗಳು ಹೇರಿವೆ. ಈ ನಿಷೇಧ 90 ದಿನಗಳ ಕಾಲ ಜಾರಿಯಲ್ಲಿರುತ್ತದೆ.
ಹಲವು ನಿರ್ಬಂಧ: ಯೂಕ್ರೇನ್ ಮೇಲೆ ರಷ್ಯಾ ದಾಳಿ ಕೈಗೊಳ್ಳುತ್ತಿದ್ದಂತೆಯೇ, ಅಮೆರಿಕ ಹಾಗೂ ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ವಿವಿಧ ನಿರ್ಬಂಧಗಳನ್ನು ವಿಧಿಸಿದ್ದು, ರಷ್ಯಾದಿಂದ ತೈಲ ಆಮದನ್ನು ಸ್ಥಗಿತಗೊಳಿಸಿವೆ. ಜಿ 7 ಒಕ್ಕೂಟದ ಸದಸ್ಯ ರಾಷ್ಟ್ರಗಳಾದ ಬ್ರಿಟನ್, ಅಮೆರಿಕ, ಫ್ರಾನ್ಸ್, ಜರ್ಮನಿ, ಜಪಾನ್, ಇಟಲಿ ಮತ್ತು ಕೆನಡಾ ರಷ್ಯಾದ ಆದಾಯವನ್ನು ಕಡಿಮೆ ಮಾಡಲು ಈ ತೈಲ ಬೆಲೆ ಮಿತಿ ತಂತ್ರವನ್ನು ಪ್ರಯೋಗಿಸಿವೆ. ರಷಾವು ತೈಲವನ್ನು ರಫ್ತು ಮೂಲಕ ಅಪಾರ ಪ್ರಮಾಣದ ಆದಾಯ ಗಳಿಸುತ್ತದೆ. ಜಗತ್ತಿನಲ್ಲಿ ಎರಡನೇ ಅತಿದೊಡ್ಡ ತೈಲ ರಫ್ತು ದೇಶ ಅದಾಗಿದೆ. ಅದರ ಬಹುತೇಕ ಅರ್ಧದಷ್ಟು ಆದಾಯವು ತೈಲ ಹಾಗೂ ಅದರ ಉತ್ಪನ್ನಗಳಿಂದ ಬರುತ್ತದೆ. ಜಗತ್ತಿನ ಒಟ್ಟು ತೈಲ ಉತ್ಪಾದನೆಯಲ್ಲಿ ರಷ್ಯಾದ ಪಾಲು ಶೇ. 10 ಇದೆ. ತೈಲ ದರ ಮಿತಿಯನ್ನು ಒಪ್ಪದ ರಷ್ಯಾ ಜಿ-7 ರಾಷ್ಟ್ರಗಳ ವಿಮೆ ಹೊಂದಿರದ ಹಡಗುಗಳ ಮೂಲಕ ತೈಲ ರವಾನೆ ಮಾಡಲು ಮುಂದಾಗಿದೆ.
ಭಾರತೀಯ ತೈಲ ಕಂಪನಿಗಳಿಗೆ ಲಾಭ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 10 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ರಷ್ಯಾದ ಅಗ್ಗದ ತೈಲದಿಂದಾಗಿ ಭಾರತೀಯ ತೈಲ ಸಂಸ್ಕರಣಾ ಕಂಪನಿಗಳು ಪ್ರಪಂಚದಾದ್ಯಂತ ಲಾಭ ಮಾಡಿಕೊಳ್ಳುತ್ತಿವೆ. ಕಡಿಮೆ ಬೆಲೆಗೆ ರಷ್ಯಾ ಕಚ್ಚಾ ತೈಲ ಖರೀದಿಸಿ, ನಂತರ ಸಂಸ್ಕರಣೆ ಮಾಡಿ ವಿದೇಶಗಳಿಗೆ ರಫ್ತು ಮಾಡುವ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಸಾಕಷ್ಟು ಲಾಭ ಗಳಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ದೀರ್ಘಕಾಲದವರೆಗೆ ಕಡಿಮೆಯಾಗಿ ಉಳಿದಿರುವುದರಿಂದ ಸರ್ಕಾರಿ ಕಂಪನಿಗಳಾದ ಇಂಡಿಯನ್ ಆಯಿಲ್, ಬಿಪಿ ಸಿಎಲ್, ಎಚ್ಪಿಸಿಎಲ್ ಕೂಡ ಲಾಭ ಪಡೆದುಕೊಂಡಿವೆ.
ಭಾರತಕ್ಕೆ ಬಾಧಿಸದು: ಯುದ್ಧ ಆರಂಭದ ನಂತರ ರಷ್ಯಾ ತನ್ನ ತೈಲವನ್ನು ಕಡಿಮೆ ದರದಲ್ಲಿ ಮಾರಾಟ ಮಾಡಿದೆ. ಕಳೆದ ಆರು ತಿಂಗಳಲ್ಲಿ ರಷ್ಯಾ ಅಗ್ಗದ ತೈಲದ ಪ್ರಮುಖ ಖರೀದಿದಾರನಾಗಿ ಭಾರತ ಹೊರಹೊಮ್ಮಿದೆ. ಪ್ರಸ್ತುತ ಚೀನಾದ ನಂತರ ರಷ್ಯಾದಿಂದ ಅತಿಹೆಚ್ಚು ತೈಲ ಖರೀದಿಸುವ ರಾಷ್ಟ್ರ ಭಾರತ. ಈಗ ಬ್ಯಾರೆಲ್ಗೆ 60 ಡಾಲರ್ ಬೆಲೆಯ ಮಿತಿ ಜಾರಿಗೆ ಬಂದರೂ, ಅಂದರೆ ಒಂದು ಬ್ಯಾರೆಲ್ ಪೆಟ್ರೋಲ್ಗೆ 60 ಡಾಲರ್ಗಿಂತ ಹೆಚ್ಚಾದರೂ ಭಾರತಕ್ಕೆ ಹೆಚ್ಚಿನ ತೊಂದರೆಯೇನೂ ಆಗದು. ಏಕೆಂದರೆ ಯುದ್ಧಪೂರ್ವದಲ್ಲಿ ಈ ಮಿತಿಗಿಂತ ಹೆಚ್ಚಿನ ಬೆಲೆಯಲ್ಲಿಯೇ ಭಾರತ ತೈಲವನ್ನು ಖರೀದಿ ಮಾಡುತ್ತಿತ್ತು. ‘ಜಿ7 ರಾಷ್ಟ್ರಗಳ ತೈಲ ಬೆಲೆ ಮಿತಿ ಜಾರಿಯಿಂದ ಭಾರತದ ಮೇಲೆ ಹೆಚ್ಚಿನ ಪರಿಣಾಮ ಆಗುವುದಿಲ್ಲ’ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ‘ರಷ್ಯಾವು ನಮಗೆ ತೈಲದ ಅಗ್ರ ಪೂರೈಕೆದಾರರಲ್ಲ. ಸೌದಿ ಅರೇಬಿಯಾ, ಇರಾಕ್ ಮತ್ತು ಯುಎಇ ಕಚ್ಚಾ ತೈಲದ ಪ್ರಮುಖ ಪೂರೈಕೆ ಮಾಡುವ ದೇಶಗಳಾಗಿವೆ ಎಂದು ಅವರು ಹೇಳಿದ್ದಾರೆ.
ಲಾಭವಾಗಿದ್ದು ಹೀಗೆ...: ಕಳೆದ ಫೆಬ್ರವರಿಯಲ್ಲಿ ಯೂಕ್ರೇನ್ ಮೇಲೆ ರಷ್ಯಾದ ದಾಳಿಯು ತೈಲ ಬೆಲೆಗಳು ಗಗನಕ್ಕೇರುವಂತೆ ಮಾಡಿತು. ಕಳೆದ ವರ್ಷದ ಡಿಸೆಂಬರ್ನಲ್ಲಿ, ಭಾರತ ಖರೀದಿಸಿದ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ ಸರಾಸರಿ 73.3 ಡಾಲರ್ ಆಗಿತ್ತು. ಆಗ, ರಷ್ಯಾವು ಯೂಕ್ರೇನ್ ಮೇಲೆ ದಾಳಿ ಮಾಡುತ್ತದೆ ಎಂದು ಜಾಗತಿಕ ವಲಯ ನಿರೀಕ್ಷಿಸಿರಲಿಲ್ಲ. ಆದರೆ, ಇದರ ಸಾಧ್ಯತೆ ಹೆಚ್ಚಾದಂತೆ ತೈಲ ಬೆಲೆಯೂ ಹೆಚ್ಚಾಯಿತು. ಈ ವರ್ಷದ ಜನವರಿಯಲ್ಲಿ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ ಸರಾಸರಿ 84.7, ಫೆಬ್ರವರಿಯಲ್ಲಿ 94.1, ಮಾರ್ಚ್ನಲ್ಲಿ 112.9 ಡಾಲರ್ಗಳಿಗೆ ಏರಿತು. ಐರೋಪ್ಯ ರಾಷ್ಟ್ರಗಳು ನಿಷೇಧ ಹೇರಿದ ಹಿನ್ನೆಲೆಯಲ್ಲಿ ಪ್ರತಿ ಬ್ಯಾರೆಲ್ಗೆ 35 ಡಾಲರ್ ದರದಲ್ಲಿ ಭಾರತಕ್ಕೆ ತೈಲ ಮಾರಾಟ ಮಾಡಲು ರಷ್ಯಾ ಮುಂದಾಯಿತು. ಇತ್ತೀಚಿನವರೆಗೂ ರಷ್ಯಾ 30 ಡಾಲರ್ ಆಸುಪಾಸಿನಲ್ಲೇ ತೈಲವನ್ನು ಮಾರಾಟ ಮಾಡಿದೆ ಎನ್ನಲಾಗಿದೆ.
35 ಸಾವಿರ ಕೋಟಿ ರೂ. ಉಳಿತಾಯ: ಯುದ್ಧ ಆರಂಭದ ನಂತರ ರಷ್ಯಾದಿಂದ ಡಿಸ್ಕೌಂಟ್ ದರದಲ್ಲಿ ತೈಲ ಖರೀದಿ ಮಾಡುವ ಮೂಲಕ ಭಾರತವು ಉಳಿಸಿರುವ ಹಣವು ಆಗಸ್ಟ್ ತಿಂಗಳವರೆಗೆ ಅಂದಾಜು 35 ಸಾವಿರ ಕೋಟಿ ರೂಪಾಯಿ ಆಗಿದೆ. ಈ ಹಿಂದೆ ಭಾರತ ಒಟ್ಟಾರೆ ತೈಲ ಖರೀದಿಯಲ್ಲಿ ಶೇ. 1ರಷ್ಟನ್ನು ಮಾತ್ರ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಇದು ಶೇ. 12ಕ್ಕೆ ತಲುಪಿದೆ. ಕಳೆದ ವರ್ಷ 1.5 ಶತಕೋಟಿ ಡಾಲರ್ (12360 ಕೋಟಿ ರೂಪಾಯಿ) ಮೊತ್ತದಷ್ಟು ತೈಲವನ್ನು ಭಾರತ ಖರೀದಿಸಿತ್ತು. ಈ ವರ್ಷ ಆಗಸ್ಟ್ವರೆಗೆ 12 ಶತ ಕೋಟಿ ಡಾಲರ್ (98,878 ಕೋಟಿ ರೂಪಾಯಿ) ಮೊತ್ತದಷ್ಟು ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಂಡಿದೆ.