ಖ್ಯಾತ ವಿಮರ್ಶಕ ಜಿ.ಎಚ್. ನಾಯಕ ಇನ್ನಿಲ್ಲ

ghnayak
Published on

ಮೈಸೂರು: ಕನ್ನಡ ಸಾಹಿತ್ಯ ಲೋಕದಲ್ಲಿ ಜಿ.ಎಚ್. ನಾಯಕ ಎಂದೇ ಚಿರಪರಿಚಿತರಾಗಿದ್ದ ಗೋವಿಂದರಾಯ ಹಮ್ಮಣ್ಣ ನಾಯಕ ಇಂದು ಮಧ್ಯಾಹ್ನ ಮೈಸೂರಿನಲ್ಲಿ ಇಹಲೋಕವನ್ನು ತ್ಯಜಿಸಿದ್ದಾರೆ. 88 ವರ್ಷದ ಜಿ.ಎಚ್​. ನಾಯಕ ಖ್ಯಾತ ವಿಮರ್ಶಕ, ಪ್ರಾಧ್ಯಾಪಕರಲ್ಲಿ ಒಬ್ಬರಾಗಿದ್ದು. ಪತ್ನಿ ಮೀರಾ, ಪುತ್ರಿ ಕೀರ್ತಿ ಹಾಗೂ ಮೊಮ್ಮಗಳನ್ನು ಅಗಲಿದ್ದಾರೆ.

1935ರ ಸೆಪ್ಟೆಂಬರ್​ 18ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸೂರ್ವೆ ಗ್ರಾಮದಲ್ಲಿ ಜನಿಸಿದ್ದ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು.

ಸಮಕಾಲೀನ, ಅನಿವಾರ್ಯ, ನಿರಪೇಕ್ಷೆ, ನಿಜದನಿ, ಉತ್ತರಾರ್ಧ, ಸಾಹಿತ್ಯ ಸಮೀಕ್ಷೆ, ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ ಹೀಗೆ ಹತ್ತಾರು ಕೃತಿಗಳನ್ನು ರಚಿಸಿದ್ದರು. ಕನ್ನಡ ಸಣ್ಣಕಥೆಗಳು, ಹೊಸಗನ್ನಡ ಕವಿತೆಗಳು, ಸಂವೇದನೆ(ಅಡಿಗರ ಗೌರವ ಗ್ರಂಥ), ಶ್ರೀ ರಾಮಾಯಣ ದರ್ಶನಂ ಕುವೆಂಪು ಸ್ವಹಸ್ತಾಕ್ಷರ ಪ್ರತಿ ಹಾಗೂ ಶತಮಾನದ ಕನ್ನಡ ಸಾಹಿತ್ಯ ಕುರಿತ ಸಂಪಾದಕೀಯದ ಜತೆಗೆ ‘ಬಾಳು’ ಎಂಬ ಆತ್ಮಕಥನವನ್ನು ರಚಿಸಿದ್ದರು.

ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ನಾಯಕರ ಉತ್ತರಾರ್ಧ ಕೃತಿಗೆ 2014ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಿರಪೇಕ್ಷ ವಿಮರ್ಶಾ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ನಿಜದನಿ ವಿಮರ್ಶಾ ಕೃತಿಗೆ ವಿ.ಎಂ.ಇನಾಂದಾರ ಸ್ಮಾರಕ ಬಹುಮಾನ ಮತ್ತು ಪಂಪ ಪ್ರಶಸ್ತಿಯನ್ನು ನೀಡಲಾಗಿತ್ತು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net