ಸಂಸ್ಕಾರಯುತ ಶಿಕ್ಷಣದಿಂದ ಭವಿಷ್ಯ ಉಜ್ವಲ

RemasterDirector_22abe5b5f
ಪಿರಿಯಾಪಟ್ಟಣದ ಶ್ರೀ ಗುರುರೇಣುಕಾದೇವಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಕಾಲೇಜಿನ ಪ್ರಾಂಶುಪಾಲೆ ಶಾಲಿನಿ ಅನಿತ್ ಉದ್ಘಾಟಿಸಿದರು. ಕರವೇ ಗೌರವಾಧ್ಯಕ್ಷ ಎನ್.ಎಲ್.ಗಿರೀಶ್, ಕಿರಣ್ ಕುಮಾರ್, ಕೆ.ಕೆ.ಅನಿತ್, ಜಾಫರ್ ಶರೀಫ್ ಮತ್ತಿತರರಿದ್ದರು.
Published on

ಪಿರಿಯಾಪಟ್ಟಣ: ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡಿದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗತ್ತದೆ ಎಂದು ಪಿರಿಯಾಪಟ್ಟಣ ಕರವೇ ಗೌರವಾಧ್ಯಕ್ಷ ಹಾಗೂ ಗ್ರೀನ್ ಕಿಡ್ಸ್ ಡಾನ್ಸ್ ಸ್ಕೂಲ್ ನ್ಯಾಷನಲ್ ಅಕಾಡೆಮಿ ಗೌರವಾಧ್ಯಕ್ಷ ಎನ್.ಎಲ್.ಗಿರೀಶ್ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಗುರುರೇಣುಕಾದೇವಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಬಸವೇಶ್ವರ ಪದವಿ ಪೂರ್ವ ಕಾಲೇಜು ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದರ ಜತೆಗೆ ಜೀವನದ ಮೌಲ್ಯಗಳನ್ನು ತಿಳಿಸಬೇಕು. ವಿನಯವಿಲ್ಲದ ಶಿಕ್ಷಣಕ್ಕೆ ಬೆಲೆಯಿಲ್ಲ. ಆದ್ದರಿಂದ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಆಗ ಮಾತ್ರ ಶಿಕ್ಷಣಕ್ಕೆ ಬೆಲೆ ಸಿಗುತ್ತದೆ ಎಂದರು.

ಕೇವಲ ಅಂಕಗಳನ್ನು ಪಡೆಯುವುದೇ ಶಿಕ್ಷಣವಲ್ಲ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶ್ರೀಗುರುರೇಣುಕಾದೇವಿ ಶಿಕ್ಷಣ ಸಂಸ್ಥೆಯು ತಾಲೂಕಿನಲ್ಲಿ ಉತ್ತಮ ಶಿಕ್ಷಣವನ್ನು ನೀಡುತ್ತಾ ಬಂದಿದೆ ಎಂದು ಶಿಕ್ಷಣ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.

ಸಂಸ್ಥೆ ಕಾರ್ಯದರ್ಶಿ ಕೆ.ಕೆ.ಅನಿತ್ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆಯು ಪ್ರಾರಂಭವಾಗಿ ಸುಮಾರು 33 ವರ್ಷಗಳಾಗಿದ್ದು ಅಂದಿನಿಂದಲೂ ತಾಲೂಕಿನಲ್ಲಿ ಉತ್ತಮ ಶಿಕ್ಷಣವನ್ನು ನೀಡುತ್ತಾ ಬಂದಿದೆ. ನಮ್ಮ ಸಂಸ್ಥೆಯಲ್ಲಿ ಸುಮಾರು 650ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸಂಸ್ಕಾರಯುತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇಲ್ಲಿ ಶಿಕ್ಷಣ ಪಡೆದ ಹಲವು ವಿದ್ಯಾರ್ಥಿಗಳು ಇಂದು ರಾಜ್ಯದಲ್ಲಿ ಹಾಗೂ ಹೊರ ರಾಜ್ಯಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುನಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲಾ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಕಾಲೇಜಿನ ಪ್ರಾಂಶುಪಾಲೆ ಶಾಲಿನಿ ಅನಿತ್, ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್, ಯುಕೊ ಬ್ಯಾಂಕ್ ವ್ಯವಸ್ಥಾಪಕ ಜಾಫರ್ ಶರೀಫ್, ಪುರಸಭೆ ಸದಸ್ಯ ರವಿ, ನಟ ಮದನ್ ಕುಮಾರ್, ಹಾಸ್ಯ ನಟ ಸೂರ್ಯ, ನಿವೃತ್ತ ಶಿಕ್ಷಕ ಟಿ.ರಾಜು, ಡಾ.ನಿಶಿತಾ, ತಿಲಕ್, ಸಮಿತಾ, ಪ್ರಭಾರಿ ಮುಖ್ಯ ಶಿಕ್ಷಕರಾದ ಪ್ರಸಾದ್, ರಾಘವೇಂದ್ರ, ಉಪನ್ಯಾಸಕರಾದ ಕಿರಂಗೂರು ಸ್ವಾಮಿ, ಪ್ರಕಾಶ್, ಮಂಜಣ್ಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net