ವರ್ಗಾವಣೆ ಹಸ್ತಕ್ಷೇಪಕ್ಕೆ ಪರಮಾಕ್ರೋಶ| ಕಿಚ್ಚು ಹೊತ್ತಿಸಿದ ಪಿಐ ವರ್ಗಾವಣೆ ಪಟ್ಟಿ; ಶಾಸಕೇತರರ ಕೈವಾಡ ಆರೋಪ

ksp
Published on

ಬೆಂಗಳೂರು: ಇನ್​ಸ್ಪೆಕ್ಟರ್​ಗಳ ವರ್ಗಾವಣೆ ಪಟ್ಟಿ ಆಡಳಿತಾರೂಢ ಕಾಂಗ್ರೆಸ್​ನಲ್ಲಿ ಕಿಚ್ಚು ಹೊತ್ತಿಸಿದೆ. ಶಾಸಕರ ಅಸಮಾಧಾನ ತಣಿಸುವಲ್ಲಿ ಬಸವಳಿದಿದ್ದ ನಾಯಕರಿಗೆ ವರ್ಗಾವಣೆ ಬೇಗುದಿ ಮತ್ತಷ್ಟು ಸಂಕಷ್ಟ ತಂದಿಟ್ಟಿದೆ. ಜತೆಗೆ, ಇನ್​ಸ್ಪೆಕ್ಟರ್ ಹಾಗೂ ಡಿವೈಎಸ್ಪಿ ವರ್ಗಾವಣೆಯಲ್ಲಿ ಗೃಹ ಇಲಾಖೆಯ ತೀರ್ವನಕ್ಕೆ ಮನ್ನಣೆ ನೀಡದೇ ಪ್ರಭಾವಿಗಳು ‘ಹಸ್ತಕ್ಷೇಪ’ ನಡೆಸಿರುವುದರ ಬಗ್ಗೆ ಪಕ್ಷದ ವಲಯದಲ್ಲಿ ಬಿಸಿಬಿಸಿ ಚರ್ಚೆ ನಡೆದಿದೆ. ಸರ್ಕಾರದಲ್ಲಿಲ್ಲದವರು ಹೆಚ್ಚಿನ ಹಸ್ತಕ್ಷೇಪ ನಡೆಸಿದ್ದಾರೆ ಎಂಬ ದೊಡ್ಡ ಗುಮಾನಿಯನ್ನು ಪಕ್ಷದ ಮುಖಂಡರೇ ವ್ಯಕ್ತಪಡಿಸಿದ್ದಾರೆ. ಈ ಅಸಮಾಧಾನ ಶಮನಕ್ಕೆ ಸಭೆ ನಡೆಸಲು ಸಿಎಂ ಮುಂದಾಗಿದ್ದಾರೆ.

ಸರ್ಕಾರ ನಮ್ಮ ಕೋರಿಕೆ ಈಡೇರಿಸುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರು ಸಿಡಿದೆದ್ದು ಸಹಿ ಸಂಗ್ರಹಿಸಿ ಗಮನ ಸೆಳೆದಿದ್ದರು. ಇದಾಗುತ್ತಿದ್ದಂತೆ ವರ್ಗಾವಣೆ ಪ್ರಕ್ರಿಯೆಗೆ ಸರ್ಕಾರ ಕೈಹಾಕಿತು. ಆದರೀಗ, ಮತ್ತೊಂದು ರೀತಿಯ ಅಸಮಾಧಾನ ಆರಂಭವಾಗಿದೆ.

ಇನ್​ಸ್ಪೆಕ್ಟರ್ ಹಾಗೂ ಡಿವೈಎಸ್ಪಿ ವರ್ಗಾವಣೆಯಲ್ಲಿ ಗೃಹ ಇಲಾಖೆಯ ತೀರ್ವನಕ್ಕೆ ಮನ್ನಣೆ ನೀಡದೇ ಪ್ರಭಾವಿಗಳು ‘ಹಸ್ತಕ್ಷೇಪ’ ನಡೆಸಿರುವುದರ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಬಿಸಿಬಿಸಿ ಚರ್ಚೆ ನಡೆದಿದೆ.

ಐಪಿಎಸ್ ಅಧಿಕಾರಿಗಳ ವರ್ಗಾವಣೆಯನ್ನು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯನ್ನು ಹೊಂದಿರುವ ಮುಖ್ಯಮಂತ್ರಿಯವರೇ ನಿರ್ವಹಿಸುತ್ತಾರೆ. ಆದರೆ, ಇನ್​ಸ್ಪೆಕ್ಟರ್ ವರ್ಗಾವಣೆಯಲ್ಲಿ ಸರ್ಕಾರದಲ್ಲಿಲ್ಲದವರು ಹಸ್ತಕ್ಷೇಪ ನಡೆಸಿದ್ದಾರೆ ಎಂಬ ದೊಡ್ಡ ಗುಮಾನಿಯನ್ನು ಪಕ್ಷದ ಮುಖಂಡರೇ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಪದಾಧಿಕಾರಿಯೊಬ್ಬರು, 211 ಇನ್​ಸ್ಪೆಕ್ಟರ್​ಗಳ ವರ್ಗಾವಣೆಯಲ್ಲಿ 155 ಹೆಸರಿನ ಪಟ್ಟಿಯನ್ನು ಗೃಹ ಇಲಾಖೆ ಸಿದ್ಧಪಡಿಸಿಲ್ಲ. ಅದನ್ನು ಕೊಟ್ಟವರು ಶಾಸಕರಲ್ಲದವರು, ಸರ್ಕಾರದ ಮೇಲೆ ಪ್ರಭಾವ ಬೀರುತ್ತಿರುವವರು. ಇದರಿಂದ ಹಿರಿಯ ಸಚಿವರೂ ಸಹ ಬೇಸರಗೊಂಡಿದ್ದಾರೆ ಎಂದರು.

ಮೈಸೂರು ಜಿಲ್ಲೆಯ ಮಾಜಿ ಶಾಸಕರೊಬ್ಬರು, ಇಬ್ಬರು ಸಚಿವರು ಈ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇನ್ನಷ್ಟು ವರ್ಗಾವಣೆ ಆದೇಶ ಹೊರ ಬೀಳಬೇಕಿದೆ. ಅದರಲ್ಲೂ ಅವರದ್ದೇ ಪ್ರಾಮುಖ್ಯತೆ ಇದೆ. ಇದರಿಂದ ಕೆಲ ಶಾಸಕರು ಸಹ ಬೇಸರಗೊಂಡಿದ್ದಾರೆಂದು ವಿವರಿಸಿದರು.

ಇದಿಷ್ಟೇ ಅಲ್ಲದೇ, ಕೆಪಿಸಿಸಿಯ ಪ್ರಮುಖ ಪದಾಧಿಕಾರಿ ನೀಡಿದ ಶಿಫಾರಸನ್ನೇ ವರ್ಗಾವಣೆಯಲ್ಲಿ ಪರಿಗಣಿಸಿಲ್ಲ. ಈ ಸಂಗತಿ ಕೂಡ ದೆಹಲಿಯಲ್ಲಿ ಅನೌಪಚಾರಿಕವಾಗಿ ಚರ್ಚೆಯಾಗಿದೆ. ಇದೇ ಕಾರಣಕ್ಕೆ ಪ್ರಮುಖರೊಂದಿಗೆ ಚರ್ಚೆ ನಡೆಸಿ ವರ್ಗಾವಣೆ ಪ್ರಕ್ರಿಯೆ ಮುಂದುವರಿಸುವಂತೆ ದೆಹಲಿ ನಾಯಕರು ಸೂಚನೆ ಕೂಡ ನೀಡಿದ್ದಾರೆಂದು ಗೊತ್ತಾಗಿದೆ.

ಬಿಕ್ಕಟ್ಟು ಶಮನಕ್ಕೆ ಗೃಹ ಸಚಿವರ ಜತೆ ಸಭೆ

ವರ್ಗಾವಣೆ ವಿಷಯದಲ್ಲಿ ಉಂಟಾಗಿರುವ ಗೊಂದಲ ಸರಿಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು, ಶುಕ್ರವಾರ ಇಲ್ಲವೇ ಶನಿವಾರ ಗೃಹ ಸಚಿವರ ಜತೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಾಸಕರ ಒತ್ತಡ, ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟು ಸೇರಿ ವಿವಿಧ ಒತ್ತಡಗಳನ್ನು ಪರಿಗಣಿಸಿ, ಸಮನ್ವಯ ಸೂತ್ರವೊಂದನ್ನು ರೂಪಿಸಿ ಆ ಪ್ರಕಾರ ಪರಿಷ್ಕೃತ ಪಟ್ಟಿ ಹೊರಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಪೈಪೋಟಿ: ಶಾಸಕರ ಸಹಿ ಸಂಗ್ರಹದ ಬಳಿಕ ಮುಕ್ತವಾಗಿ ವರ್ಗಾವಣೆ ಮಾಡಿ ಶಾಸಕರ ಕೋಪ ತಣಿಸಲು ಸರ್ಕಾರ ನಿರ್ಧರಿಸಿತು. ಹೀಗಾಗಿ ಶಾಸಕರಿಂದ ನಿರೀಕ್ಷೆಗೂ ಮೀರಿದ ಶಿಫಾರಸು ಪತ್ರ ಬಂದಿವೆ. ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ನಡುವೆ ಪೈಪೋಟಿಯೂ ನಡೆದಿದೆ. ಇದೂ ಕೂಡ ಒಂದಷ್ಟು ಸಮಸ್ಯೆಗೆ ಕಾರಣವಾಗಿದೆ. ಜಿಲ್ಲಾ ಉಸ್ತುವಾರಿ ಶಿಫಾರಸು ಮಾಡಿದ ಹೆಸರನ್ನು ವರ್ಗಾವಣೆಗೆ ಪರಿಗಣಿಸಿದ್ದಕ್ಕೆ ಶಾಸಕರು ಅಸಮಾಧಾನಗೊಂಡ ಪ್ರಸಂಗವೂ ನಡೆದಿದೆ.

ವಿಧಾನಸಭೆ ಚುನಾವಣೆಯಲ್ಲಿ ಸೋತ ಕೆಲವು ಅಭ್ಯರ್ಥಿಗಳು ಸಹ ಇನ್​ಸ್ಪೆಕ್ಟರ್​ಗಳ ವರ್ಗಾವಣೆಗೆ ಅರ್ಜಿ ಗುಜರಾಯಿಸಿದ್ದು, ಅವರನ್ನು ವಿಶ್ವಾಸಕ್ಕೆ ಇಟ್ಟುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಅವರ ಬೇಡಿಕೆಯನ್ನೂ ಸರ್ಕಾರ ಆದ್ಯತೆ ಮೇಲೆ ಈಡೇರಿಸಬೇಕಾಗಿದೆ.

ಪ್ರಕರಣವೊಂದರಲ್ಲಿ ಇನ್​ಸ್ಪೆಕ್ಟರ್ ಒಬ್ಬರು ತಮಗೆ ಸ್ಥಳ ನಿಯುಕ್ತಿ ‘ಗ್ಯಾರಂಟಿ’ಯಾದ ಠಾಣೆಯಲ್ಲಿ ಇನ್ನೇನು ಚಾರ್ಜ್ ತೆಗೆದುಕೊಳ್ಳಬೇಕೆಂದು ತುದಿಗಾಲಲ್ಲಿ ನಿಂತಿದ್ದ ವೇಳೆ ವರ್ಗಾವಣೆ ಪಟ್ಟಿಯಲ್ಲಿ ಬೇರೆ ಹೆಸರು ಕಂಡು ಹೌಹಾರಿದ್ದಾರೆ. ಹೆಸರು ತಪ್ಪಾಗಿದೆ ಎಂದೇ ಭಾವಿಸಿದ್ದರು. ಅಂತಿಮವಾಗಿ ಮೈಸೂರು ಭಾಗದ ಇನ್​ಸ್ಪೆಕ್ಟರ್ ಚಾರ್ಜ್ ತೆಗೆದುಕೊಳ್ಳಲು ಠಾಣೆಗೆ ಬರುವ ಮಾಹಿತಿ ತಿಳಿದು ಗಾಬರಿಗೊಂಡರು.

ಸಿಎಂ-ಡಿಸಿಎಂ ಮಧ್ಯೆ ಭಿನ್ನಮತ?

ಪೊಲೀಸ್ ಇನ್​ಸ್ಪೆಕ್ಟರ್​ಗಳ ವರ್ಗಾವಣೆ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮಧ್ಯೆ ವೈಮನಸ್ಸು ಉಂಟಾಗಿದೆಯೇ? ಬಿಜೆಪಿ ರಾಷ್ಟ್ರೀಯ ಮಾಹಿತಿ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಟ್ವೀಟ್ ಇಂಥದ್ದೊಂದು ಅನುಮಾನಕ್ಕೆ ಕಾರಣವಾಗಿದೆ. ಆ.1ರಂದು 211 ಪೊಲೀಸ್ ಇನ್ಸ್​ಸ್ಪೆಕ್ಟರ್​ಗಳ ವರ್ಗಾವಣೆಗೆ ಆದೇಶ ಮಾಡಲಾಗಿತ್ತು. ಆದರೆ, ತಮ್ಮನ್ನು ಕೇಳದೆಯೇ ಈ ಆದೇಶ ಮಾಡಲಾಗಿದೆ ಎಂದು ಡಿಕೆ ಶಿವಕುಮಾರ್ ಆಕ್ರೋಶಗೊಂಡಿದ್ದರು. ಮುಖ್ಯವಾಗಿ ಸೋದರ ಡಿ.ಕೆ. ಸುರೇಶ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ತಮ್ಮಿಚ್ಛೆಯ ಪೊಲೀಸ್ ಇನ್​ಸ್ಪೆಕ್ಟರ್​ಗಳನ್ನು ವರ್ಗಾವಣೆ ಮಾಡಲಾಗಿಲ್ಲ ಎನ್ನುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ ಎಂದು ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದರು.

ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅಸಮಾಧಾನಗೊಂಡ ಸಿದ್ದರಾಮಯ್ಯ, ಇದನ್ನೆಲ್ಲ ಯಾರು ಹೇಳಿದ್ದು ನಿಮಗೆ? ನನ್ನ ಮತ್ತು ಶಿವಕುಮಾರ್ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವು ಒಗ್ಗಟ್ಟಾಗಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ವರ್ಗಾವಣೆ ಆದೇಶವಾದ ಕೆಲ ಹೊತ್ತಲ್ಲೇ ಅದನ್ನು ತಡೆಹಿಡಿಯಲಾಯಿತು ಮತ್ತು ಎಲ್ಲ ಕಂಟ್ರೋಲ್ ರೂಮ್ಳಿಗೆ ಕರೆ ಮಾಡಿ, ಈಗ ಇರುವ ಕಾರ್ಯಸ್ಥಳದಲ್ಲೇ ಕೆಲಸ ಮುಂದುವರಿಸುವಂತೆ ಸೂಚನೆ ನೀಡಲಾಯಿತು. ಇದು ನಿಜಕ್ಕೂ ಮುಜುಗರದ ಸನ್ನಿವೇಶ ಸೃಷ್ಟಿಸಿತು ಎಂದು ಮಾಳವೀಯ ಟ್ವೀಟ್ ಮಾಡಿ ಕಾಂಗ್ರೆಸ್ ನಾಯಕರ ಕಾಲೆಳೆದಿದ್ದಾರೆ.

ಇನ್​ಸ್ಪೆಕ್ಟರ್​ಗಳ ಪಟ್ಟಿ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ ಇನ್​ಸ್ಪೆಕ್ಟರ್​ಗಳನ್ನು ಪಟ್ಟಿಮಾಡುವ ಕೆಲಸ ಸದ್ದಿಲ್ಲದೇ ನಡೆದಿದೆ. ಯಾವೆಲ್ಲ ಇನ್​ಸ್ಪೆಕ್ಟರ್​ಗಳು ಹೆಚ್ಚು ಆಸಕ್ತಿ ವಹಿಸಿ ಪಕ್ಷದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದರು ಎಂಬ ಮಾಹಿತಿ ಸಂಗ್ರಹ ನಡೆದಿದ್ದು, ಇವರನ್ನು ವರ್ಗಾವಣೆಯಲ್ಲಿ ಪರಿಗಣಿಸುವ ಬಗ್ಗೆಯೂ ಪಕ್ಷದಲ್ಲಿ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net