ಬಡ್ಡಿ ದರ ಮತ್ತಷ್ಟು ಕಡಿತ ಸಂಭವ; ಹಣದುಬ್ಬರ ಇಳಿಕೆ ಎಫೆಕ್ಟ್; ಮುಂದಿನ ತಿಂಗಳ ಎಂಪಿಸಿ ಸಭೆಯಲ್ಲಿ ನಿರ್ಧಾರ

RBI Reserve Bank of India
Published on

ಮುಂಬೈ: ಮುಂದಿನ ತಿಂಗಳು ನಡೆಯಲಿರುವ ಆರ್​ಬಿಐನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೊ ದರವನ್ನು ಮತ್ತೆ 25 ಮೂಲಾಂಶಗಳಷ್ಟು ಕಡಿತ ಮಾಡಿ ಶೇ. 5.25ಕ್ಕೆ ಇಳಿಸುವ ಸಾಧ್ಯತೆ ಇದೆ. ‘ನಗರಗಳಲ್ಲಿನ ಬೇಡಿಕೆ ಪ್ರಮಾಣ ಕಡಿಮೆಯಾಗಿದ್ದರೂ ಗ್ರಾಮೀಣ ಬೇಡಿಕೆ ಇನ್ನೂ ಬಲವಾಗಿದೆ. ಅಮೆರಿಕಕ್ಕೆ ಸರಕುಗಳ ರಫ್ತು ಸುಧಾರಣೆಯಾಗಿದ್ದು, ಇತರ ದೇಶಗಳಿಗೆ ಇನ್ನೂ ಕಡಿಮೆಯೇ ಇದೆ.

ಈ ಪ್ರವೃತ್ತಿಯಿಂದಾಗಿ ಮತ್ತು ಪ್ರಸ್ತುತ ಹಣದುಬ್ಬರ ಪರಿಸ್ಥಿತಿ ಅನುಲಕ್ಷಿಸಿ ಆರ್​ಬಿಐ ಮತ್ತೊಂದು ಸುತ್ತಿನ ರೆಪೊ ದರ ಕಡಿತಕ್ಕೆ ಮುಂದಾಗಬಹುದು’ ಎಂದು ಐಸಿಐಸಿಐ ಬ್ಯಾಂಕ್ ವರದಿ ತಿಳಿಸಿದೆ. ಈ ಹಿಂದಿನ ಎಂಪಿಸಿ ಸಭೆ ಬಳಿಕ ಹಣದುಬ್ಬರ ಕಡಿಮೆಯಾಗಿದೆ. 2025-26ರ ಹಣಕಾಸು ವರ್ಷದಲ್ಲಿ ಹಣದುಬ್ಬರ ಸರಾಸರಿ ಶೇ. 2.9ರಷ್ಟಿರುವ ಅಂದಾಜಿದೆ. ಇದು ಆರ್​ಬಿಐ ಈ ಹಿಂದೆ ತಿಳಿಸಿದ್ದ ಶೇ.3.7ಕ್ಕಿಂತ ಕಡಿಮೆ. ಈ ಇಳಿಕೆ ಪ್ರವೃತ್ತಿ ಮತ್ತಷ್ಟು ಬಡ್ಡಿ ದರ ಕಡಿತಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ರೆಪೊ ದರ ಇಳಿಕೆಯಾದರೆ ಅದನ್ನು ಅನುಸರಿಸಿ ಬ್ಯಾಂಕುಗಳು ತಮ್ಮ ಗೃಹ, ವಾಹನ ಮತ್ತಿತರ ಸಾಲಗಳ ಬಡ್ಡಿ ದರವನ್ನು ಮತ್ತೊಮ್ಮೆ ಇಳಿಸುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net