ಕರಾವಳಿಯಲ್ಲಿ ಉಗ್ರ ಕೃತ್ಯ: ಆಟೋದಲ್ಲಿ ಸ್ಫೋಟಿಸಿದ್ದು ಕುಕ್ಕರ್ ಬಾಂಬ್; ಶಂಕಿತ ಗಂಭೀರ

Auto
ಆಟೋರಿಕ್ಷಾದಲ್ಲಿ ಸ್ಪೋಟಗೊಂಡ ಕುಕ್ಕರ್.
Published on

ಮಂಗಳೂರು: ಕಂಕನಾಡಿ ಸಮೀಪದ ನಾಗುರಿ ಎಂಬಲ್ಲಿ ಶನಿವಾರ ಸಂಜೆ ಆಟೋ ರಿಕ್ಷಾದಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಇದೊಂದು ಆಕಸ್ಮಿಕವಲ್ಲ, ಉದ್ದೇಶಿತ ಭಯೋತ್ಪಾದಕ ಕೃತ್ಯ ಎಂಬುದನ್ನು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ.

ಘಟನೆ ವೇಳೆ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾತ ಶಂಕಿತ ಉಗ್ರನಾಗಿದ್ದು, ತೀರ್ಥಹಳ್ಳಿ ಮೂಲದವನೆಂದು ಪತ್ತೆ ಹಚ್ಚಿರುವ ಪೊಲೀಸರು, ಕುಕ್ಕರ್ ಬಾಂಬ್ ಸ್ಪೋಟದಲ್ಲಿ ಈತನದೇ ಕೈವಾಡವಿದೆ ಎಂದು ಶಂಕಿಸಿದ್ದಾರೆ. ಈತ 2020ರಲ್ಲಿ ಮಂಗಳೂರಿನಲ್ಲಿ ಪ್ರಚೋದನಕಾರಿ ಗೋಡೆಬರಹ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಎಂಬ ಮಾಹಿತಿಯೂ ಬೆಳಕಿಗೆ ಬಂದಿದೆ. ಸುಟ್ಟ ಗಾಯಗಳೊಂದಿಗೆ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಕ್ಷಾ ಚಾಲಕ ಪುರುಷೋತ್ತಮ ಚೇತರಿಸಿ ಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಂಕನಾಡಿ ಪೊಲೀಸ್ ಠಾಣೆಯ ಬಳಿ ಸಂಚರಿಸುತ್ತಿದ್ದ ಪುರುಷೋತ್ತಮ ಎಂಬುವವರ ಆಟೋರಿಕ್ಷಾದಲ್ಲಿ ಶನಿವಾರ ಸಂಜೆ ಸ್ಫೋಟ ಸಂಭವಿಸಿತ್ತು. ಭಾರಿ ಶಬ್ದ ಕೇಳಿಬಂದು, ಪರಿಸರದಲ್ಲಿ ದಟ್ಟ ಹೊಗೆ ಆವರಿಸಿತ್ತು. ಸ್ಥಳೀಯರು ಗಾಬರಿಗೊಂಡು, ರಿಕ್ಷಾದತ್ತ ಓಡಿ ಬಂದಿದ್ದರು. ಈ ಸಂದರ್ಭ ಅದರಲ್ಲಿ ಪ್ರಯಾಣಿಕನ ಸೋಗಿನಲ್ಲಿದ್ದ ಮಹಮ್ಮದ್ ಶಾರೀಕ್ ಹಾಗೂ ಆಟೋರಿಕ್ಷಾ ಚಾಲಕ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೈಸೂರಿನಿಂದ ಬಂದಿದ್ದ ಶಾರೀಕ್!: ಶಂಕಿತ ಭಯೋತ್ಪಾದಕ ಶಾರೀಕ್ ಶನಿವಾರ ಮೈಸೂರಿನಿಂದ ಬಂದು ನಾಗುರಿ ಬಳಿ ಇಳಿದಿದ್ದ. ಸಂಜೆ 4.30ರಲ್ಲಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಕಡೆಯಿಂದ ಬರುತ್ತಿದ್ದ ಆಟೋರಿಕ್ಷಾವನ್ನು ನಾಗುರಿ ಬಳಿ ಹತ್ತಿದ್ದ. ಪಂಪ್​ವೆಲ್​ಗೆ ಬಿಡುವಂತೆ ಹೇಳಿದ್ದ. ರಿಕ್ಷಾ ಅಂದಾಜು ಒಂದು ಕಿ.ಮೀ ಸಂಚರಿಸಿದಾಗ ಏಕಾಏಕಿ ಸ್ಫೋಟ ಸಂಭವಿಸಿತ್ತು. ರಿಕ್ಷಾ ಚಾಲಕ ಪುರುಷೋತ್ತಮ ತಕ್ಷಣ ಹಿಂದೆ ನೋಡಿದ್ದರಿಂದ ಮುಖಕ್ಕೆ ಗಾಯಗಳಾಗಿವೆ. ಶಾರೀಕ್ ಮುಖ, ಕೈ, ಕಾಲು, ಎದೆಭಾಗಕ್ಕೆ ಗಾಯಗಳಾಗಿವೆ. ಸ್ಪೋಟದ ದೃಶ್ಯ ಕಟ್ಟಡವೊಂದರಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಆಟೋರಿಕ್ಷಾದಲ್ಲಿ ಸ್ಫೋಟ ಪ್ರಕರಣ ಭಯೋತ್ಪಾದಕ ಕೃತ್ಯ ಎನ್ನುವುದು ಗೊತ್ತಾಗಿದೆ. ಸ್ಪೋಟಕ ಸಾಗಾಟ ಮಾಡುತ್ತಿದ್ದ ಅಂದಾಜು 25 ವರ್ಷದ ಯುವಕನನ್ನು ವಶಕ್ಕೆ ಪಡೆಯಲಾಗಿದೆ. ಸ್ಪೋಟದಿಂದ ಗಂಭೀರ ಸ್ವರೂಪದ ಗಾಯವಾದ ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಬಳಿ ಪತ್ತೆಯಾಗಿದ್ದ ಆಧಾರ್ ಕಾರ್ಡ್ ಬೇರೆಯವರದ್ದು. ಮಂಗಳೂರು ನಗರ ಮತ್ತು ಗಡಿಭಾಗದಲ್ಲಿ ಚೆಕ್​ಪೋಸ್ಟ್​ಗಳನ್ನು ತೆರೆದು ತಪಾಸಣೆ ಬಿಗಿಗೊಳಿಸಲಾಗಿದೆ. | ಎನ್. ಶಶಿಕುಮಾರ್ ಮಂಗಳೂರು ಪೊಲೀಸ್ ಆಯುಕ್ತ

ಕೊಯಮತ್ತೂರು ಕೃತ್ಯದ ನಂಟು: ಮಂಗಳೂರು ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಾಥಮಿಕ ತನಿಖೆಯಲ್ಲಿ ಇದೊಂದು ಉಗ್ರರ ಕೃತ್ಯ ಎಂಬುದು ಗೊತ್ತಾಗಿದೆ. ಲಭ್ಯ ಆಧಾರಗಳನ್ನು ಆಧರಿಸಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಶಂಕಿತರು ಮಂಗಳೂರು, ಕೊಯಮತ್ತೂರು ಓಡಾಡಿರುವ ಶಂಕೆ ಇದೆ. ವ್ಯವಸ್ಥಿತವಾಗಿ ಯೋಜಿಸಿ ಕೃತ್ಯ ಎಸಗಲಾಗಿದೆ. ಆದಷ್ಟು ಬೇಗ ಜಾಲ ಪತ್ತೆಮಾಡಲಾಗುವುದು ಎಂದರು.

ನಕಲಿ ಆಧಾರ್!: ಶಂಕಿತನ ಬಳಿ ಲಭಿಸಿದ್ದ ಆಧಾರ್ ಕಾರ್ಡ್ ಪ್ರೇಮ್ಾಜ್ ಎಂಬ ಹೆಸರಲ್ಲಿತ್ತು. ಅದನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ ದಾಗ ಆತನದ್ದಲ್ಲ ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಆಧಾರ್ ಕಾರ್ಡ್​ನ ನೈಜ ವ್ಯಕ್ತಿ ಹುಬ್ಬಳ್ಳಿಯ ರೈಲ್ವೆ ಸಿಬ್ಬಂದಿಯಾಗಿದ್ದು, ಅವರನ್ನು ಪತ್ತೆ ಮಾಡಲಾಗಿದೆ.

ದೇಶದ ವಿವಿಧೆಡೆ ಇದೇ ವಿಧಾನ ಬಳಕೆ: ಆಟೋರಿಕ್ಷಾದಲ್ಲಿ ಸ್ಪೋಟಗೊಂಡಿರುವುದು ಕುಕ್ಕರ್ ಬಾಂಬ್. ದೇಶದ ಕೆಲವೆಡೆ ಈ ಹಿಂದೆ ಭಯೋತ್ಪಾದಕರು ಬಳಸಿದ್ದ ವಿಧಾನವನ್ನೇ ಇಲ್ಲಿಯೂ ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಪೋಟದ ತೀವ್ರತೆಗೆ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಕುಕ್ಕರ್ ಪತ್ತೆಯಾಗಿದೆ. ಕುಕ್ಕರ್​ನಲ್ಲಿ ಯಾವುದಾದರೂ ಡಿಟೋನೇಟರ್, ಬ್ಯಾಟರಿ ಸಂಪರ್ಕ ಮಾಡಿ ಅದು ಸ್ಫೋಟ ಆಗಿದ್ದರೆ ಬಾಂಬ್ ಸ್ಪೋಟದಂತೆಯೇ ತೀವ್ರತೆ ಉಂಟುಮಾಡುತ್ತಿತ್ತು. ಎಫ್​ಎಸ್​ಎಲ್ ತಂಡ ಈಗಾಗಲೇ ತಪಾಸಣೆ ನಡೆಸಿದ್ದು, ಬೋಲ್ಟ್ ಮಾದರಿಯ ಪರಿಕರಗಳು ಪತ್ತೆಯಾಗಿವೆ. ಎಫ್​ಎಸ್​ಎಲ್​ನ ವಿಶೇಷ ತಂಡ ಕೂಡ ಆಗಮಿಸಿದ್ದು ಸಮಗ್ರ ಪರಿಶೀಲನೆ ನಡೆಸಿದೆ. ಜಮ್ಮುಮತ್ತು ಕಾಶ್ಮೀರ, ಪಂಜಾಬ್ ಮೊದಲಾದ ಕಡೆ ಇಂತಹ ಮಾದರಿಯ ಸ್ಫೋಟ ಆಗಿರುವ ಉದಾಹರಣೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net