

ನವದೆಹಲಿ: ಮೋಡ ಕವಿದ ವಾತಾವರಣ ಹಾಗೂ ರಾತ್ರಿ ವೇಳೆಯೂ ಕಾಣಲು ನೆರವಾಗುವ ಕಣ್ಗಾವಲು ಸಾಮರ್ಥ್ಯದ ಬೇಹುಗಾರಿಕೆ ಉಪಗ್ರಹವನ್ನು ಭಾನುವಾರ ಉಡಾಯಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಜ್ಜುಗೊಂಡಿದೆ. ಭಾರತ-ಪಾಕಿಸ್ತಾನ ಉದ್ವಿಗ್ನತೆ ಹಿನ್ನೆಲೆಯಲ್ಲಿ ಇದು ಮಹತ್ವ ಪಡೆದುಕೊಂಡಿದೆ.
ಇಒಎಸ್-09 ಉಪಗ್ರಹವನ್ನು ಶ್ರೀಹರಿಕೋಟಾ ದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮುಂಜಾನೆ 5.59ಕ್ಕೆ ನಭೋಮಂಡಲಕ್ಕೆ ಹಾರಿ ಬಿಡಲಾಗುತ್ತದೆ. ಇದು ಇಸ್ರೋ ಹಾರಿಬಿಡುವ 101ನೇ ಉಪಗ್ರಹವಾಗಿದೆ. 1,696 ಕೆಜಿ ತೂಕದ ಇಒಎಸ್-9 ರೇಡಾರ್ ಇಮೇಜಿಂಗ್ ಉಪಗ್ರಹವು ಭೂಮಿಯ ಮೇಲ್ಮೈಯಿಂದ ಸುಮಾರು 500 ಕಿಮೀ ಎತ್ತರದ ಕಕ್ಷೆಯಲ್ಲಿ ಕಾರ್ಯನಿರ್ವಹಿಸಲಿದೆ.
ಬೆಂಗಳೂರಿನಲ್ಲಿ ಅಭಿವೃದ್ಧಿ: ಆರ್ಐಸ್ಯಾಟ್-1ಬಿ ಎಂದೂ ಪರಿಚಿತವಾದ ಇಒಎಸ್-09 ಉಪಗ್ರಹ ವನ್ನು ಬೆಂಗಳೂರಿನಲ್ಲಿರುವ ಇಸ್ರೋದ ಯು.ಆರ್. ರಾವ್ ಉಪಗ್ರಹ ಕೇಂದ್ರ ವಿನ್ಯಾಸಗೊಳಿಸಿದ್ದು, ಸಿ-ಬ್ಯಾಂಡ್ ಸಿಂಥೆಟಿಕ್ ಅಪಾರ್ಚರ್ ರೇಡಾರ್ನಿಂದ ಸುಸಜ್ಜಿತಗೊಂಡಿದೆ. ಯಾವುದೇ ರೀತಿಯ ವಾತಾವರಣವಿದ್ದರೂ ಹೈ- ರಿಸಲ್ಯೂಷನ್ ಚಿತ್ರಗಳನ್ನು ತೆಗೆಯಲು ಈ ರೇಡಾರ್ ನೆರವಾಗುತ್ತದೆ. ಆಪ್ಟಿಕಲ್ ಕ್ಯಾಮರಾಗಳಂತಲ್ಲದೆ, ಈ ರೇಡಾರ್ ಮೋಡ, ಮಳೆಯ ವಾತಾವರಣ ಮತ್ತು ರಾತ್ರಿ ವೇಳೆಯಲ್ಲೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಉಪಗ್ರಹವು ಸೂರ್ಯ-ಸಮವ್ಯಾಪಕ ಕಕ್ಷೆಯನ್ನು (ಸನ್-ಸಿಂಕ್ರೋನಸ್ ಆರ್ಬಿಟ್) ಪ್ರವೇಶಿಸುತ್ತದೆ. ಇದು ಚಿತ್ರಗಳಿಗೆ ನಿರಂತರ ಬೆಳಕಿನ ಲಭ್ಯತೆಯನ್ನು ಖಾತರಿಪಡಿಸುತ್ತದೆ.
ಇಒಎಸ್-09 ಉಪಗ್ರಹವು ಬಹುಮುಖಿ ಅನ್ವಯತೆ ಗಳನ್ನು ಹೊಂದಿದೆ. ಗಡಿಗಳ ಕಾವಲು ನಡೆಸಿ ಹಾಗೂ ಒಳನುಸುಳುವಿಕೆಯನ್ನು ಪತ್ತೆ ಮಾಡುವ ಮೂಲಕ ರಾಷ್ಟ್ರೀಯ ಭದ್ರತೆಗೆ ಅದು ನೆರವಾಗುತ್ತದೆ. ಕೃಷಿ ಕ್ಷೇತ್ರಕ್ಕೂ ಇದರ ಉಪಯೋಗವಿದೆ. ಬೆಳೆ ನಿಗಾ ಮತ್ತು ಅರಣ್ಯ ಸಮೀಕ್ಷೆಗಳಿಗೆ ಅದು ನೆರವಾಗುತ್ತದೆ. ಪ್ರವಾಹ ಮತ್ತು ಇತರ ತುರ್ತು ಸನ್ನಿವೇಶಗಳಲ್ಲಿ ರಿಯಲ್- ಟೈಮ್ ಡೇಟಾ ಒದಗಿಸುವ ಮೂಲಕ ಅದು ನೈಸರ್ಗಿಕ ವಿಪತ್ತು ನಿರ್ವಹಣೆಗೂ ಸಹಾಯಕವಾಗಲಿದೆ.
ನೂತನ ಉಪಗ್ರಹವು ಈಗಾಗಲೇ ಕಾರ್ಯಾ ಚರಿಸುತ್ತಿರುವ 57 ಭಾರತೀಯ ಉಪಗ್ರಹ ಗಳಿಗೆ ಪೂರಕವಾಗಿರುತ್ತದೆ. ರಿಸೋರ್ಸ್ಸ್ಯಾಟ್, ಕಾಟೋಸ್ಯಾಟ್, ಮತ್ತು ಆರ್ಐಸ್ಯಾಟ್-2ಬಿ ಸರಣಿಯ ಉಪಗ್ರಹಗಳು ಅದರಲ್ಲಿ ಸೇರಿವೆ. ಅವುಗಳು ಒಟ್ಟಾಗಿ ಭೂ ಬಳಕೆ, ಹವಾಮಾನ ವಿಧಾನಗಳು (ಪ್ಯಾಟರ್ನ್) ಮತ್ತು ಭದ್ರತೆಯ ಮೇಲೆ ನಿಗಾ ವಹಿಸುವ ಭಾರತದ ಸಾಮರ್ಥ್ಯವನ್ನು ಹೆಚ್ಚಿಸಲಿವೆ. ಈ ಉಪಗ್ರಹಗಳಲ್ಲಿ ನಾಲ್ಕು ರೇಡಾರ್ ಉಪಗ್ರಹಗಳೂ ಸೇರಿವೆ. ಏಪ್ರಿಲ್ 22ರಂದು ಪಹಲ್ಗಾಮ್ಲ್ಲಿ ನಡೆದ ಭಯೋತ್ಪಾದಕರ ದಾಳಿ ಮತ್ತು ಅದರ ಕಾರಣ ನಡೆದ ಮಿಲಿಟರಿ ಕಾರ್ಯಾಚರಣೆಗಳಿಂದ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಉಪಗ್ರಹಗಳು ಗಡಿಗಳಲ್ಲಿ ನಿಕಟ ಕಣ್ಗಾವಲು ಇರಿಸಿವೆ. ದೇಶದ ಭದ್ರತೆ ಮತ್ತು ಸುರಕ್ಷತೆಗಾಗಿ ಕನಿಷ್ಠ 10 ಉಪಗ್ರಹಗಳು ನಿರತವಾಗಿವೆ ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್, ಪಹಲ್ಗಾಮೋತ್ತರ ಭಾರತ-ಪಾಕ್ ಸಂಘರ್ಷದ ಸಂದರ್ಭ ಹೇಳಿದ್ದು ಗಮನಾರ್ಹವಾಗಿದೆ.
ಒಂದು ಮೀಟರ್ನಷ್ಟು ಚಿಕ್ಕ ವಸ್ತುವನ್ನು ಕೂಡ ಪತ್ತೆ ಮಾಡಲು ಇದರಲ್ಲಿರುವ ರೇಡಾರ್ ಸಮರ್ಥವಾಗಿದೆ. ಪಾಕಿಸ್ತಾನ ಮತ್ತು ಚೀನಾ ಗಡಿಗಳಲ್ಲಿ ಅನುಮಾನಾಸ್ಪದ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಈ ನಿಖರತೆಯು ನೆರವಾಗಲಿದೆ.