ಶಾಸಕರಿಗೆ ಅನುದಾನ ಬಿಡುಗಡೆ ಸನಿಹ

CM ಸಿದ್ದರಾಮಯ್ಯ
Published on

ಬೆಂಗಳೂರು: ಕ್ಷೇತ್ರದ ಅಭಿವೃದ್ಧಿಗೆ ಹಣ ಇಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದ ಶಾಸಕರಿಗೆ 50 ಕೋಟಿ ರೂ. ಅನುದಾನ ಬಿಡುಗಡೆ ಸಮಯ ಸನಿಹವಾಗಿದೆ. ಇದೇ ಜು.29ರಿಂದ 4 ದಿನಗಳ ಕಾಲ ವಿಧಾನಸೌಧದಲ್ಲಿ ಜಿಲ್ಲಾವಾರು ಶಾಸಕರ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿದ್ದಾರೆ. ಶಾಸಕರ ಬೇಡಿಕೆ ಮನವಿ ಪತ್ರಗಳನ್ನು ಪರಿಶೀಲನೆ ನಡೆಸಿ ಅನುಮೋದನೆ ನೀಡಲಿದ್ದಾರೆ.

2025-26ರ ಬಜೆಟ್‌ನಲ್ಲಿ ೋಷಣೆಯಂತೆ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಶಾಸಕರಿಗೆ ತಲಾ 50 ಕೋಟಿ ರೂ. ವಿಶೇಷ ಅನುದಾನ ಹಂಚಿಕೆಗೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ಸಾಮಾಜಿಕ ಕ್ಷೇತ್ರದ ಅಗತ್ಯ ಸೇವೆಗಳಾದ ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಮತ್ತು ನೈರ್ಮಲ್ಯ ಇತ್ಯಾದಿಗಳನ್ನು ಒದಗಿಸುವುದು, ಕೈಗಾರಿಕೆ, ಕೃಷಿ, ಸೇವಾ ಕ್ಷೇತ್ರಗಳ ವೃದ್ಧಿಗೆ ರಸ್ತೆಗಳ ನಿರ್ಮಾಣ, ವಿವಿಧ ಪಟ್ಟಣ/ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ರಸ್ತೆ ಸಂಪರ್ಕ ಕಲ್ಪಿಸಿ ದೈನಂದಿನ ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಸುಧಾರಣೆಯೇಯೋಜನೆ ಆಶಯವಾಗಿದೆ.

50 ಕೋಟಿ ರೂ. ಪೈಕಿ 37.50 ಕೋಟಿ ರೂ. ಅನುದಾನವನ್ನು ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆಯಿಂದ ರಸ್ತೆ, ಸೇತುವೆ ಕಾಮಗಾರಿ, ಗ್ರಾಮೀಣ ರಸ್ತೆ ಮತ್ತು ಸೇತುವೆ, ಚರಂಡಿ ಕಾಮಗಾರಿಗಳಿಗೆ ಬಳಸಬಹುದು.

ಉಳಿದ ಅನುದಾನ ಶಾಸಕರ ವಿವೇಚನಾಧಿಕಾರದಡಿ ಇತರ ಕಾಮಗಾರಿಗಳಿಗೆ ಬಳಕೆ ಮಾಡಬಹುದು. ಕಡ್ಡಾಯವಾಗಿ ಮೂಲಸೌಕರ್ಯ ಕಲ್ಪಿಸುವ ಮತ್ತು ಸಾರ್ವಜನಿಕರಿಗೆ ದೈನಂದಿನ ಕಾರ್ಯಗಳಿಗೆ ಉಪಯೋಗವಾಗುವ ಕಾಮಗಾರಿಗಳು ಆಗಿರಬೇಕು. ಇದನ್ನು ಗಮನದಲ್ಲಿ ಇಟ್ಟುಕೊಂಡು ಶಾಸಕರು ಬೇಡಿಕೆ ಪತ್ರದೊಂದಿಗೆ ಕೈಗೊಳ್ಳುವ ಕಾಮಗಾರಿಗಳ ವಿವರ ನೀಡುವುದು ಕಡ್ಡಾಯವಾಗಿದೆ. ಈ ಬೇಡಿಕೆ ಪತ್ರ ಮತ್ತು ಕಾಮಗಾರಿ ಮಾಹಿತಿಯನ್ನು ಪಡೆದು ಸಿದ್ದರಾಮಯ್ಯ, ಜಿಲ್ಲಾವಾರು ವಿಧಾನಸಭಾ ಸದಸ್ಯರ ಸಭೆ ನಡೆಸಿ ಪರಿಶೀಲಿಸಿ ಒಪ್ಪಿಗೆ ನೀಡಲಿದ್ದಾರೆ.

ಯೋಜನೆ ರೂಪಿಸುವಿಕೆ

ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು. ಇದರಲ್ಲಿ ಸಿಇಒ, ಜಿಲ್ಲಾ, ಲೋಕೋಪಯೋಗಿ ಇಂಜಿನಿಯರ್‌ಗಳು ಸೇರಿ 7 ಮಂದಿ ಸದಸ್ಯರು ಇರಲಿದ್ದಾರೆ. ವಿಧಾನಸಭಾ ಕ್ಷೇತ್ರದ ಶಾಸಕರ ಮಾರ್ಗಸೂಚಿ ಪಡೆದು ಕಾಮಗಾರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. 10 ಕೋಟಿ ರೂ. ವರೆಗಿನ ಮೊತ್ತದ ಕಾಮಗಾರಿಗಳಿಗೆ ಜಿಲ್ಲಾಧಿಕಾರಿ ಆಡಳಿತಾತ್ಮಕ ಅನುಮೋದನೆ ನೀಡಬಹುದು.

ಕಾಮಗಾರಿವಾರು ಅನುದಾನ ಹಂಚಿಕೆ

-ಲೋಕೋಪಯೋಗಿ ಇಲಾಖೆ ರಸ್ತೆ, ಸೇತುವೆಗೆ ಶೇ.50

-ಗ್ರಾಮೀಣ ರಸ್ತೆ, ಸೇತುವೆಗೆ ಶೇ.25

-ಶಾಸಕರ ವಿವೇಚನಾಧಿಕಾರದಡಿ ಶೇ.25

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net