‘ಫುಲ್ ಮೀಲ್ಸ್’ ಖುಷಿ: ‘ದಿಯಾ’ ನಟಿಯ ಎರಡು ಸಿನಿಮಾಗಳ ಚಿತ್ರೀಕರಣ ಪೂರ್ಣ

khushi 11
Published on


ಶಿವ ಸ್ಥಾವರಮಠ

‘ದ ಗ್ರೇಟ್ ಸ್ಟೋರಿ ಆಫ್​ ಸೋಡಾಬುಡ್ಡಿ’ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದರೂ ಖುಷಿ ರವಿಗೆ ಹೆಸರು ತಂದುಕೊಟ್ಟಿದ್ದು ‘ದಿಯಾ’. ಇಂದಿಗೂ ಅವರನ್ನು ಗುರುತಿಸುವುದು ಕೂಡ ‘ದಿಯಾ’ ಎಂದೇ. ಬಳಿಕ ‘ಸ್ಪೂಕಿ ಕಾಲೇಜ್’, ‘ಕೇಸ್ ಆಫ್ ಕೊಂಡಾಣ’ ಸೇರಿ ತೆಲುಗಿನ ‘ಪಿಂಡಂ’ನಲ್ಲೂ ಅಭಿನಯಿಸಿದ್ದರು. ಸದ್ಯ ಖುಷಿ ನಟಿಸಿರುವ ‘ಸನ್ ಆ್ ಮುತ್ತಣ್ಣ’ ಹಾಗೂ ‘ಫುಲ್ ಮೀಲ್ಸ್’ ಚಿತ್ರೀಕರಣ ಪೂರ್ಣಗೊಂಡಿವೆ. ಈ ಎರಡು ಸಿನಿಮಾಗಳ ಜರ್ನಿ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ್ದಾರೆ.

ಡಾ. ಖುಷಿ ರವಿನೇ ಸಾಕ್ಷಿ!: ಶ್ರೀಕಾಂತ್ ಹುಣಸೂರು ನಿರ್ದೇಶನದ ಪ್ರಣಂ ದೇವರಾಜ್ ಅಭಿನಯದ ‘ಸನ್ ಆಫ್ ಮುತ್ತಣ್ಣ’ ಚಿತ್ರದಲ್ಲಿ ಖುಷಿ ರವಿ ವೈದ್ಯೆ ಪಾತ್ರ ನಿರ್ವಹಿಸುತ್ತಿದ್ದಾರೆ. ‘ಈ ಚಿತ್ರದಲ್ಲಿ ನಾನು ಸಾಕ್ಷಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇಂದಿನ ಪರಿಸ್ಥಿತಿಗೆ ಕನೆಕ್ಟ್ ಆಗುವ ಪಾತ್ರ. ಎಂಬಿಬಿಎಸ್ ಓದಿ ವಿದೇಶದಲ್ಲಿ ಸೇವೆ ಮಾಡಬೇಕು ಎಂಬ ಅಭಿಲಾಷೆ ಹೊಂದಿರುವ ನಾನು ಕೊನೆಗೆ ತಂದೆಯೊಂದಿಗೆ ಇದ್ದು, ಹೇಗೆ ಬದುಕು ನಡೆಸುತ್ತೇನೆ ಎಂಬುದನ್ನು ತೋರಿಸಲಾಗಿದೆ. ಚಿತ್ರೀಕರಣ ಪೂರ್ಣಗೊಂಡಿದ್ದು, ಡಬ್ಬಿಂಗ್ ಬಾಕಿಯಿದೆ. ವರಮಹಾಲಕ್ಷ್ಮೀ ಹಬ್ಬದಂದು ಪೋಸ್ಟರ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಅಂದುಕೊಂಡಂತಾದರೆ, ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಚಿತ್ರ ತೆರೆಗೆ ಬರಲಿದೆ’ ಎನ್ನುತ್ತಾರೆ.

ಮತ್ತೊಮ್ಮೆ ಮಧುಮಗಳು: ಖುಷಿ ರವಿ ‘ಫುಲ್‌ಮೀಲ್ಸ್’ ಚಿತ್ರದಲ್ಲಿ ಮಧುಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ವಿನಾಯಕ್ ನಿರ್ದೇಶಿಸುತ್ತಿದ್ದು, ಲಿಖಿತ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ. ‘ಫುಲ್ ಮೀಲ್ಸ್’ನಲ್ಲಿ ಲವ್, ಎಮೋಷನ್, ಕಾಮಿಡಿ ಜತೆಗೆ ಇನ್ನು ಅನೇಕ ಬಗೆಗಳನ್ನು ಕಾಣಬಹುದು. ಫೋಟೋಗ್ರಾಫರ್ ಒಬ್ಬನ ಸಾಹಸವನ್ನು ಇಲ್ಲಿ ತೋರಿಸಲಾಗುತ್ತಿದೆ. ಚಿತ್ರೀಕರಣ, ಡಬ್ಬಿಂಗ್ ಪೂರ್ಣಗೊಂಡಿದೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡುತ್ತಿದ್ದಾರೆ. ಈ ನವೆಂಬರ್‌ಗೆ ಚಿತ್ರ ಬಿಡುಗಡೆಯಾಗಲಿದೆ. ಇನ್ನೂ ನಾಲ್ಕು ಕಥೆಗಳನ್ನು ಕೇಳಿದ್ದು, ಸದ್ಯ ಮಾತುಕತೆ ಹಂತದಲ್ಲಿವೆ’ ಎಂದು ಮಾಹಿತಿ ನೀಡುತ್ತಾರೆ ಖುಷಿ.

ತಮಿಳಿನ ಅಲ್ಬಂಸಾಂಗ್‌ನಲ್ಲಿ ಖುಷಿ: ಕನ್ನಡ ಸೇರಿ ತೆಲುಗು, ತಮಿಳು ಸಿನಿಮಾ ಸೇರಿ ಅಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಂಡಿರುವ ಖುಷಿ, ಈ ಹಿಂದೆ ತಮಿಳಿನ ‘ಅಡಿಪೊಲಿ’ ಎಂಬ ಅಲ್ಬಂ ಸಾಂಗ್ ಹೆಸರು ತಂದುಕೊಟ್ಟಿತ್ತು. ಸದ್ಯ, ಮಣಿರತ್ನಂರ ‘ಮದ್ರಾಸ್ ಟಾಕೀಸ್’ ಪ್ರೊಡಕ್ಷನ್ ಹೌಸ್ ನಿರ್ಮಾಣದ ಅಲ್ಬಂಸಾಂಗ್‌ನಲ್ಲಿ ನಟಿಸಿದ್ದಾರೆ. ಶೂಟಿಂಗ್ ಪೂರ್ಣಗೊಂಡಿದೆ. ಇದೊಂದು ಲವ್ ಸ್ಟೋರಿ ಸಾಂಗ್ ಆಗಿದ್ದು, ತಮಿಳಿನ ‘ಕನಾ’ ಖ್ಯಾತಿಯ ದರ್ಶನ್‌ಗೆ ಖುಷಿ ಜೋಡಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net