

| ಸತೀಶ್ ಕಂದಗಲ್ಪುರ ಬೆಂಗಳೂರು
ಪ್ಯಾಕ್ ಮಾಡಿದ ಆಹಾರ ಪದಾರ್ಥಗಳಿಗೆ ಸರಕು ಸೇವಾ ತೆರಿಗೆ (ಜಿಎಸ್ಟಿ) ಅನ್ವಯಿಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ವಿವಿಧ ರಾಜ್ಯಗಳು ವಿಧಿಸುತ್ತಿದ್ದ ಮನಸೋ ಇಚ್ಛೆ ತೆರಿಗೆ ಪದ್ಧತಿ ರದ್ದುಗೊಳಿಸಿ ದೇಶಾದ್ಯಂತ ಜಾರಿಯಾದ ಏಕರೂಪದ ಜಿಎಸ್ಟಿ ವ್ಯವಸ್ಥೆಗೆ ಉದ್ಯಮಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಈ ಮುನ್ನ ಇದ್ದಂತಹ ತೆರಿಗೆ ವ್ಯವಸ್ಥೆಗಿಂತ ಜಿಎಸ್ಟಿಯೇ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಜು.1ಕ್ಕೆ ಜಿಎಸ್ಟಿ ಜಾರಿಗೊಂಡು 5 ವರ್ಷ ಪೂರ್ಣಗೊಳಿಸಿದೆ. ದೇಶಾದ್ಯಂತ ಶೇ.5ರಿಂದ ಆರಂಭವಾದ ಜಿಎಸ್ಟಿ ಹಂತ ಹಂತವಾಗಿ ಶೇ.12, ಶೇ.18 ಹಾಗೂ ಶೇ.28ಕ್ಕೆ ತಲುಪಿದೆ. ಹೊಸ ತೆರಿಗೆ ವ್ಯವಸ್ಥೆ ಬಗ್ಗೆ ಮೊದಲು ಉದ್ಯಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗ ಎಲ್ಲ ಉದ್ಯಮಗಳಿಗೂ ಜಿಎಸ್ಟಿ ಸುಲಭ ಮತ್ತು ಪಾರದರ್ಶಕವುಳ್ಳ ತೆರಿಗೆ ಪಾವತಿ ಪದ್ಧತಿ ಎಂಬುದು ಮನವರಿಕೆಯಾಗಿರುವುದು ದೇಶಾದ್ಯಂತ ನಡೆದ ಸಮೀಕ್ಷೆಯಿಂದ ದೃಢಪಟ್ಟಿದೆ.
ಲೋಕಲ್ ಸರ್ಕಲ್ಸ್ ಎಂಬ ಖಾಸಗಿ ಸಂಸ್ಥೆಯು ಒಟ್ಟು ಐದು ವರ್ಷಗಳ ಜಿಎಸ್ಟಿ ವ್ಯವಸ್ಥೆ ಅನುಸರಣೆ ಬಗ್ಗೆ ದೇಶದ 170 ಜಿಲ್ಲೆಗಳ 2,400ಕ್ಕೂ ವ್ಯವಹಾರಗಳ 12 ಸಾವಿರ ಉದ್ಯಮಿಗಳಿಂದ ಅಭಿಪ್ರಾಯ ಸಂಗ್ರಹಿಸಿ ವರದಿ ಬಿಡುಗಡೆ ಮಾಡಿದೆ. ಈ ಪೈಕಿ ಶೇ.45 ಉದ್ಯಮಿಗಳು ಜಿಎಸ್ಟಿ ಪದ್ಧತಿ ಉತ್ತಮವಾಗಿದೆ ಎಂದು ಒಪ್ಪಿಕೊಂಡಿದ್ದು, ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಉತ್ತಮ ವ್ಯವಸ್ಥೆ: ಜಿಎಸ್ಟಿಯ ಅನುಷ್ಠಾನದ ಆರಂಭದಲ್ಲಿ ತೆರಿಗೆದಾರರು ರಿಟರ್ನ್ಗಳನ್ನು ಸಲ್ಲಿಸಲು ತಾಂತ್ರಿಕ ಸಮಸ್ಯೆ ಎದುರಿಸಿದರು. ಪ್ರಸ್ತುತ ದಿನಗಳಲ್ಲಿ ಶೇ.40 ಮಂದಿ ಲಾಗಿನ್ ವ್ಯವಸ್ಥೆ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ. ಉಳಿದ ಶೇ.40 ಮಂದಿ ಈಗಲೂ ಜಿಎಸ್ಟಿ ರಿಟರ್ನ್ ಸಲ್ಲಿಕೆ ಸವಾಲಾಗಿದೆ ಎಂದರೆ, ಶೇ.20 ಈವರೆಗೆ ಜಿಎಸ್ಟಿ ಕುರಿತ ವ್ಯವಹಾರವೇ ಅರ್ಥವಾಗಿಲ್ಲ. ರಿಟರ್ನ್ಸ್ ಪಾವತಿಗೆ ಬೇರೊಬ್ಬರ ಸಹಾಯ ಪಡೆಯುತ್ತೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಲೆಕ್ಕಪತ್ರ ವೆಚ್ಚಗಳ ಹೆಚ್ಚಳ: ಒಂದು ಆರ್ಥಿಕ ವರ್ಷದಲ್ಲಿ 2 ಕೋಟಿ ರೂ. ನಿಗದಿತ ಮಿತಿಯನ್ನು ಮೀರಿದ ವಹಿವಾಟು ನಡೆಸಿದ್ದರೆ ಅದರ ಖಾತೆಗಳನ್ನು ಲೆಕ್ಕಪರಿಶೋಧನೆಗೆ ಒಳಪಡಿಸಬೇಕು. ಜಿಎಸ್ಟಿ ಅಡಿಯಲ್ಲಿ ಖರೀದಿ, ಮಾರಾಟ, ಸ್ಟಾಕ್, ಇತ್ಯಾದಿಗಳಂತಹ ವ್ಯವಹಾರ ಖಾತೆಗಳನ್ನು ನಿರ್ವಹಿಸಬೇಕಾಗುತ್ತದೆ. ಇದರಿಂದ ಲೆಕ್ಕಪತ್ರ ನಿರ್ವಹಣೆ ಮತ್ತು ಪುಸ್ತಕ ದಾಖಲೆಗಳನ್ನು ಇಡುವುದರಿಂದ ಸ್ಪಷ್ಟತೆ ಸಿಗುತ್ತದೆ. ಆದರೆ, ಹಳೆಯ ತೆರಿಗೆ ಪದ್ಧತಿಗೆ ಸಂಗ್ರಹಿಸಿ ಇಡಬೇಕಾಗಿದ್ದ ಲೆಕ್ಕಪತ್ರಗಳು ಕಡಿಮೆಯಾಗಿದ್ದು, ವೆಚ್ಚವೂ ಕಡಿಮೆಯಿತ್ತು. ಆದರೆ, ಪ್ರಸ್ತುತ ಜಿಎಸ್ಟಿ ಪದ್ಧತಿ ಅಡಿಯಲ್ಲಿ ರಿಟರ್ನ್ಸ್ ಸಲ್ಲಿಕೆಗೆ ವಾರ್ಷಿಕವಾಗಿ ಮಾಡಿದ ಎಲ್ಲ ವ್ಯವಹಾರಗಳಿಗೂ ಮಾಸಿಕ ಅಥವಾ ವಾರ್ಷಿಕ ಶುಲ್ಕವನ್ನು ಪಾವತಿಯ ಬಗ್ಗೆ ದಾಖಲೆಗಳನ್ನಿಡಬೇಕು. ಹೀಗಾಗಿ, ಹಳೆಯ ತೆರಿಗೆ ಪದ್ಧತಿಗಿಂತ ಜಿಎಸ್ಟಿ ಪಾವತಿಯ ಲೆಕ್ಕಪತ್ರಗಳ ಸಂಖ್ಯೆ ಅಧಿಕವಾಗಿದ್ದು, ಇದರ ವೆಚ್ಚವೂ ಶೇ.50 ಅಧಿಕವಾಗಿದೆ. ಜಿಎಸ್ಟಿ ಸರಳೀಕರಣಗೊಂಡಿದ್ದರೂ ಶುಲ್ಕ ಮಾತ್ರ ಕಡಿಮೆಯಾಗಿಲ್ಲ.
ಮೊದಲಿಗಿಂತಲೂ ಕಡಿಮೆ ಸಮಯ: ಜಿಎಸ್ಟಿ ಅನುಷ್ಠಾನದ ನಂತರ ಮತ್ತು ಅದಕ್ಕಿಂತ ಪೂರ್ವವಾಗಿ ಇದ್ದ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ಯಾವುದಕ್ಕೆ ಹೆಚ್ಚು ಸಮಯ ಮೀಸಲಿಡಲಾಗಿದೆ ಎಂಬ ಪ್ರಶ್ನೆಗೆ 2,692 ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅದರಲ್ಲಿ ಶೇ.37 ಉದ್ಯಮದಾರರು ಮೊದಲಿಗಿಂತ ಕಡಿಮೆ ಸಮಯ ವ್ಯಯವಾಗುತ್ತಿದೆ ಎಂದು ತಿಳಿಸಿದ್ದಾರೆ. ಶೇ.26 ಮಂದಿ ಈ ಹಿಂದೆ ಯಾವ ರೀತಿ ಇತ್ತೋ ಅಷ್ಟೇ ಸಮಯ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ಶೇ.11 ಜನರು ಹೆಚ್ಚು ಸಮಯವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೂರು ಶ್ರೇಣಿಯ ಉದ್ಯಮಿಗಳ ಸಮೀಕ್ಷೆ: ಸಮೀಕ್ಷೆಯಲ್ಲಿ ಪಾಲ್ಗೊಂಡ 12 ಸಾವಿರ ಉದ್ಯಮಿಗಳ ಪೈಕಿ ಶೇ.47 ಉನ್ನತ ಶ್ರೇಣಿ, ಶೇ.32 ದ್ವಿತೀಯ ಶ್ರೇಣಿಯ ಉದ್ಯಮಿಗಳು ಹಾಗೂ ಶೇ. 21 ತೃತೀಯ ಮತ್ತು 4ನೇ ಶ್ರೇಣಿಯ (ಜಿಲ್ಲೆ ಮತ್ತು ಗ್ರಾಮೀಣ ಮಟ್ಟದ) ಉದ್ಯಮಿಗಳಿಂದ ಅಭಿಪ್ರಾಯ ಪಡೆಯಲಾಗಿದೆ. ಇವರೆಲ್ಲರೂ ಮೌಲ್ಯೀಕರಿಸಿದ ವ್ಯಾಪಾರೋದ್ಯಮಿಗಳಾಗಿದ್ದಾರೆ. ಈ ಸಮೀಕ್ಷೆಯಿಂದ ಜಿಎಸ್ಟಿ ಜಾರಿಗೆ ಬರುವ ಮೊದಲಿದ್ದ ತೆರಿಗೆ ಪದ್ದತಿ ಮತ್ತು ಈಗಿನ ಪದ್ದತಿಯ ಬಗ್ಗೆ ಹೋಲಿಕೆ ಮಾಡಲು ನೆರವಾಗಲಿದೆ. ಸರ್ಕಾರದಿಂದ ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆಯೂ ವರದಿಯು ಪೂರಕ ಮಾಹಿತಿ ಒದಗಿಸಲಿದೆ.