ಬ್ಯಾಕ್‌ಲಾಗ್ ಹುದ್ದೆ ಭರ್ತಿಗೆ ಒತ್ತಾಯ

2-klr-3
Published on

ಕೋಲಾರ: ರಾಜ್ಯದಲ್ಲಿ ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮುಖಂಡರು ಜಿಲ್ಲಾಡಳಿತ ಭವನದ ಎದುರು ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿಗೆ ಮನವಿ ಸಲ್ಲಿಸಿದರು.

ಸಮಿತಿ ಜಿಲ್ಲಾಧ್ಯಕ್ಷ ಪುರಹಳ್ಳಿ ಜಿ. ಯಲ್ಲಪ್ಪ ಮಾತನಾಡಿ, ರಾಜ್ಯದ ಇತರ ಜಿಲ್ಲೆಗಳಲ್ಲಿ ಹೊಲೆಯರನ್ನು ಆದಿ ಕರ್ನಾಟಕ ಹಾಗೂ ಮಾದಿಗರನ್ನು ಆದಿ ದ್ರಾವಿಡ ಎಂದು ಕರೆಯುವುದರಿಂದ ಜನಗಣತಿ ಪ್ರಕಾರ ಮಾದಿಗರ ಸಂಖ್ಯೆ ಹೆಚ್ಚಾಗಿದೆ. ಜಾತಿವಾರು ಹೊಲೆಯರೆಂದು ಮಾದಿಗರನ್ನು ಮಾದಿಗರೆಂದು ಜನಗಣತಿ ಮಾಡಿ ಸದಾಶಿವ ಆಯೋಗ ಜಾರಿ ಮಾಡಬೇಕು. ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ವರದಿ ಜಾರಿಗೊಳಿಸಬಾರದು ಎಂದರು.

ಮುಳಬಾಗಿಲು ತಾಲೂಕಿನ ಕಗ್ಗಲಹಳ್ಳಿ ದಲಿತ ಮುನಿವೆಂಕಟಪ್ಪರನ್ನು ಹತ್ಯೆ ಮಾಡಿರುವವರ ವಿರುದ್ಧ ಕೇಸು ದಾಖಲಿಸಬೇಕು, ಜಿಲ್ಲೆಯಲ್ಲಿ ಫಾರ್ಮ 57 ಹಾಕಿಕೊಂಡಿರುವ ದಲಿತ ಹಾಗೂ ರೈತರಿಗೆ ಭೂಮಿ ಮಂಜೂರು ಮಾಡಿ, ಕೊಡಲೇ ಸಾಗುವಳಿ ಚೀಟಿ ನೀಡಬೇಕು, ಗುಂಡುತೋಪು ಮತ್ತು ಹಕ್ಕುದಾರಿ ತೋಪು ಮಂಜೂರು ಮಾಡಬಾರದು, ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ದಲಿತರಿಗೆ ನೀಡಿರುವ ಎಲ್ಲ ಸಾಲ ಮನ್ನಾ ಮಾಡಬೇಕು ಎಂದರು.

ಜಿಲ್ಲಾ ಉಪಾಧ್ಯಕ್ಷ ನಾಗನಾಳ ರಮೇಶ್, ಪ್ರಧಾನ ಕಾರ್ಯದರ್ಶಿ ಕಲ್ಕೆರೆ ವಿಜಯಕುಮಾರ್, ಖಜಾಂಚಿ ಬಿ.ನಾಗರಾಜ್, ಜಿಲ್ಲಾ ಸಂಘಟನಾ ಸಂಚಾಲಕರಾದ ನಾಗನಾಳ ಶಂಕರ್, ರಾಮಾಪುರ ಮುನಿರಾಜು, ದೊಡ್ಡವಲ್ಲಬಿ ಮಂಜುನಾಥ್, ನರಸಾಪುರ ಕೆಇಬಿ ಚಂದ್ರು, ಜಿಂಕೆ ರಾಮು, ದಿನ್ನೊಹೊಸಹಳ್ಳಿ ವಿಜಯಕುಮಾರ್, ಪಾಡಿಗಾನಹಳ್ಳಿ ರಾಮಾಂಜಿ, ಕೃಷ್ಣಾಪುರ ಮಂಜುನಾಥ್, ನಾಗನಾಳ ನಾರಾಯಣಸ್ವಾಮಿ, ಕರೇನಹಳ್ಳಿ ಮುನಿರಾಜು, ನೆರ್ನಹಳ್ಳಿ ಶ್ರೀನಿವಾಸ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net