

ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಇಂದು ದೆಹಲಿಯ ಬಿಜೆಪಿ ಕಚೇರಿಯಲ್ಲಿ ದೇಶದ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನನ್ನ ಬದ್ಧತೆಯನ್ನು ನಾನು ನೆರವೇರಿಸಿದ್ದೇನೆ ಎಂದು ಹೇಳಿದರು.
ಮಸೂದೆ ಅಂಗೀಕಾರವಾಗಿದ್ದಕ್ಕೆ ಭಾರತದ ಮಹಿಳೆಯರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ, ರಾಷ್ಟ್ರವು ದಶಕಗಳಿಂದ ಕಾಯುತ್ತಿದ್ದ ಬದ್ಧತೆಯನ್ನು ಪೂರೈಸಿದ್ದೇವೆ ಎಂದು ಹೇಳಿದರು. ಈ ನಾರಿ ಶಕ್ತಿ ವಂದನ್ ಅಧಿನಿಯಮ್ ಸಾಮಾನ್ಯ ಕಾನೂನು ಅಲ್ಲ. ಇದು ನವಭಾರತದ ಪ್ರಜಾಸತ್ತಾತ್ಮಕ ಬದ್ಧತೆಯ ಘೋಷಣೆಯಾಗಿದೆ. ಇದು ಮೋದಿಯವರ ಮಹಿಳಾ ನೇತೃತ್ವದ ಅಭಿವೃದ್ಧಿಯ ಭರವಸೆಗೆ ಸಾಕ್ಷಿಯಾಗಿದೆ ಎಂದರು.
ಇಂದು, ನಾನು ಭಾರತದ ಪ್ರತಿಯೊಬ್ಬ ತಾಯಿ, ಸಹೋದರಿ ಮತ್ತು ಮಗಳನ್ನು ಅಭಿನಂದಿಸಲು ಬಯಸುತ್ತೇನೆ. ಸೆಪ್ಟೆಂಬರ್ 20 ಮತ್ತು 21 ರಂದು ನಾವೆಲ್ಲರೂ ಇತಿಹಾಸ ನಿರ್ಮಿಸುವುದನ್ನು ನೋಡಿದ್ದೇವೆ. ಭಾರತದ ಪ್ರಜೆಗಳು ನಮಗೆ ಇತಿಹಾಸವನ್ನು ಸೃಷ್ಟಿಸುವ ಅವಕಾಶವನ್ನು ನೀಡಿರುವುದು ನಮ್ಮ ಅದೃಷ್ಟ. ಈ ನಿರ್ಧಾರವನ್ನು ಮುಂದಿನ ಪೀಳಿಗೆಗಳು ಆಚರಿಸುತ್ತವೆ. ನಾರಿ ಶಕ್ತಿ ವಂದನ್ ಅಧಿನಿಯಂ ಸಂಸತ್ತಿನಲ್ಲಿ ಬಹುಮತದೊಂದಿಗೆ ಅಂಗೀಕಾರಗೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಸಂಸತ್ತಿನ ಉಭಯ ಸದನಗಳಲ್ಲಿ ಈ ಮಸೂದೆಯನ್ನು ಅಂಗೀಕರಿಸಿರುವುದು ಬಹುಮತದ ಸರ್ಕಾರ ಹೊಂದಿರುವ ದೇಶವು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತೋರಿಸುತ್ತದೆ. ಯಾರೊಬ್ಬರ ರಾಜಕೀಯ ಸ್ವಹಿತಾಸಕ್ತಿಗಳು ಮಹಿಳಾ ಮೀಸಲಾತಿಗೆ ಅಡ್ಡಿಯಾಗಲು ನಾವು ಎಂದಿಗೂ ಬಿಡುವುದಿಲ್ಲ. ನಿಮ್ಮ ಪ್ರಯತ್ನಗಳಲ್ಲಿ ನೀವು ಪ್ರಾಮಾಣಿಕ ಉದ್ದೇಶಗಳು ಮತ್ತು ಪಾರದರ್ಶಕತೆಯನ್ನು ಹೊಂದಿದಿದ್ದರೆ, ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಹುದು ಮತ್ತು ಫಲಿತಾಂಶಗಳನ್ನು ಖಚಿತವಾಗಿ ಪಡೆದುಕೊಳ್ಳಬಹುದು. ಹೊಸ ಸಂಸತ್ತಿನಲ್ಲಿ ಈ ಮಸೂದೆಯನ್ನು ಬಹುತೇಕ ಎಲ್ಲರೂ ಬೆಂಬಲಿಸಿದ್ದು, ಇದು ದಾಖಲೆಯಾಗಿದೆ. ಇದಕ್ಕಾಗಿ ನಾನು ಪ್ರತಿ ರಾಜಕೀಯ ಪಕ್ಷಗಳಿಗೆ ಮತ್ತು ಸಂಸತ್ತಿನ ಸದಸ್ಯರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ದೇಶದಲ್ಲಿ ಸಂಪೂರ್ಣ ಬಹುಮತದ ಸರ್ಕಾರ ಅಧಿಕಾರಕ್ಕೆ ಬಂದಿದ್ದರಿಂದ ಇಂತಹ ಬೃಹತ್ ಕಾರ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಯಿತು. ಮಹಿಳಾ ಮೀಸಲಾತಿಯ ಮುಂದೆ ಯಾರ ಸ್ವಾರ್ಥವೂ ಗೋಡೆಯಾಗಲು ನಾವು ಬಿಡಲಿಲ್ಲ. ಇದಕ್ಕೂ ಮುಂಚೆ ಈ ಮಸೂದೆ ಸಂಸತ್ತಿನ ಮುಂದೆ ಪ್ರಸ್ತಾಪವಾದಾಗಲೆಲ್ಲ ನುಣುಚಿಕೊಳ್ಳುವಿಕೆ ಮಾತ್ರ ನಡೆಯುತ್ತಿತ್ತು. ಆದರೆ, ದೃಢಸಂಕಲ್ಪದ ಪ್ರಯತ್ನಗಳು ಮಾತ್ರ ನಡೆಯಲಿಲ್ಲ. ಜನರು ವಿಧೇಯಕಕ್ಕೆ ಮತ ಹಾಕಿದರು ಆದರೆ, ನಾರಿ ಶಕ್ತಿ ವಂದನ್ ಎಂಬ ಪದವನ್ನು ಏಕೆ ತಂದರು ಎಂದು ಕೆಲವರಿಗೆ ಬೇಸರವಾಯಿತು. ಈ ನಾಡಿನ ಹೆಣ್ಣಿಗೆ ನಮಸ್ಕಾರ ಬೇಡವೇ? ನಾರಿ ಶಕ್ತಿ ವಂದನದ ಬಗ್ಗೆ ಅಸಂತೋಷಪಡುವಷ್ಟು ದುರಹಂಕಾರ ಪುರುಷರಲ್ಲಿ ಮತ್ತು ನಮ್ಮ ರಾಜಕೀಯ ಸಿದ್ಧಾಂತದಲ್ಲಿ ಇರಬೇಕೇ? ಪ್ರಸ್ತುತ ಸ್ಥಿರ ಸರ್ಕಾರ ಇರುವಾಗ ಈ ಮಸೂದೆಯು ವಾಸ್ತವವಾಗಿದೆ ಎಂದು ಹೇಳಿದರು.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಮಸೂದೆ ಗುರುವಾರ ಸಂಸತ್ತಿನ ಅಂಗೀಕಾರವನ್ನು ಪಡೆಯಿತು, ರಾಜ್ಯಸಭೆಯು ಅದರ ಪರವಾಗಿ ಸರ್ವಾನುಮತದಿಂದ ಮತ ಚಲಾಯಿಸಿತು. ಲೋಕಸಭೆಯ ಸದನದಲ್ಲಿದ್ದ 456 ಸಂಸದರಲ್ಲಿ ಇಬ್ಬರು ನಾರಿ ಶಕ್ತಿ ವಂದನ್ ಅಧಿನಿಯಂ ವಿರುದ್ಧ ಮತ ಚಲಾಯಿಸಿದ್ದರು, ರಾಜ್ಯಸಭೆಯಲ್ಲಿ ಹಾಜರಿದ್ದ ಎಲ್ಲಾ 214 ಸದಸ್ಯರು ಗುರುವಾರ ಅದರ ಪರವಾಗಿ ಮತ ಚಲಾಯಿಸಿದರು.
ನಾರಿ ಶಕ್ತಿ ವಂದನ್ ಅಧಿನಿಯಮ್ ಎಂದು ಉಲ್ಲೇಖಿಸಲಾದ 128ನೇ ಸಂವಿಧಾನ ತಿದ್ದುಪಡಿ ಮಸೂದೆಗೆ ಈಗ ಬಹುಪಾಲು ರಾಜ್ಯಗಳ ಅಸೆಂಬ್ಲಿಗಳ ಅನುಮೋದನೆ ಅಗತ್ಯವಿರುತ್ತದೆ. ಮುಂದಿನ ವರ್ಷ ಆರಂಭ ಮಾಡುವುದಾಗಿ ಸರ್ಕಾರ ಹೇಳಿರುವ ಜನಗಣತಿಯ ಆಧಾರದ ಮೇಲೆ ಸಂಸತ್ತಿನ ಮತ್ತು ವಿಧಾನಸಭಾ ಕ್ಷೇತ್ರಗಳನ್ನು ಮರುಹೊಂದಿಸಲು ಡಿಲಿಮಿಟೇಶನ್ ಪ್ರಕ್ರಿಯೆ ನಂತರ ಇದನ್ನು ಜಾರಿಗೊಳಿಸಲಾಗುವುದು. (ಏಜೆನ್ಸೀಸ್)