ಪಕ್ಷ ನೀಡಿರುವ ಹೊಣೆಗಾರಿಕೆ ನಿಭಾಯಿಸಿ

bjp
ಶಿವಮೊಗ್ಗ ನಗರ ಕಾರ್ಯಕಾರಿಣಿ ಮತ್ತು ಸೇವಾ ಪಾಕ್ಷಿಕ ಸಿದ್ಧತಾ ಸಭೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್ ಉದ್ಘಾಟಿಸಿದರು. ಎಸ್.ಎನ್.ಚನ್ನಬಸಪ್ಪ, ಆರ್.ಕೆ.ಸಿದ್ದರಾಮಣ್ಣ, ಮೋಹನ್ ರೆಡ್ಡಿ, ನಾಗರಾಜ್, ಮಂಜುನಾಥ್ ಇದ್ದರು.
Published on

ಶಿವಮೊಗ್ಗ: ರಾಜ್ಯ ಬಿಜೆಪಿಯಲ್ಲಿ ಕಳೆದೊಂದು ತಿಂಗಳಿನಿಂದ ಸಂಘಟನಾ ಪರ್ವ ನಡೆಯುತ್ತಿದೆ. ಹಲವು ಕಾರ್ಯಕರ್ತರಿಗೆ ನೂತನ ಜವಾಬ್ದಾರಿ ವಹಿಸಲಾಗಿದೆ. ಪದಾಧಿಕಾರಿಗಳು ಸಂಘಟನೆ ಬಲಪಡಿಸುವ ಮೂಲಕ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್ ತಿಳಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಶಿವಮೊಗ್ಗ ನಗರ ಕಾರ್ಯಕಾರಿಣಿ ಮತ್ತು ಸೇವಾ ಪಾಕ್ಷಿಕ ಸಿದ್ಧತಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದಲ್ಲಿ ಪ್ರತಿಯೊಬ್ಬ ಕಾರ್ಯಕರ್ತನಿಗೂ ಒಂದು ಜವಾಬ್ದಾರಿ ಇರುತ್ತದೆ. ಪ್ರಾಮಾಣಿಕ ಕಾರ್ಯಕರ್ತನಾಗಿ ಕೆಲಸ ಮಾಡುವುದು ಬೇರೆ. ನಿಗದಿತ ಜವಾಬ್ದಾರಿ ವಹಿಸಿಕೊಂಡ ಮೇಲೆ ಅದನ್ನು ನಿಭಾಯಿಸುವ ಅನುಭವವೇ ವಿಭಿನ್ನ ಎಂದು ಹೇಳಿದರು.

ಕಾರ್ಯಕರ್ತರನ್ನು ಒಗ್ಗೂಡಿಸಿ ಕರೆದೊಯ್ಯುವ ಜತೆಗೆ ಪಕ್ಷ ಕೊಟ್ಟಿರುವ ಕಾರ್ಯವನ್ನು ಪೂರ್ಣಗೊಳಿಸುವುದು ಅವಶ್ಯ. ನಮಗೆ ಸಿಕ್ಕ ಅವಕಾಶವನ್ನು ಉತ್ತಮವಾಗಿ ನಿಭಾಯಿಸುವ ಹೊಣೆಗಾರಿಕೆಯೂ ಇದೆ. ಹಿರಿಯರ ಹೆಜ್ಜೆ ಗುರುತು ವಿಶೇಷ. ಅವರು ಮಾಡಿರುವ ಕಾರ್ಯದ ವಿಶೇಷತೆಗಳನ್ನು ಉಳಿಸಿಕೊಂಡು ಪಕ್ಷದ ಬುನಾದಿಗೆ ಹೆಚ್ಚಿನ ಶಕ್ತಿ ತುಂಬಲು ನಾವೇನು ಮಾಡಬೇಕು ಎಂಬುದನ್ನು ಚಿಂತಿಸಬೇಕು ಎಂದರು.

ಬಿಜೆಪಿ ನಗರಾಧ್ಯಕ್ಷ ಮೋಹನ್ ರೆಡ್ಡಿ ಮಾತನಾಡಿ, ಅಖಂಡ ಭಾರತದ ನಿರ್ಮಾಣ ಬಿಜೆಪಿಯ ಉದ್ದೇಶ. ನಮ್ಮೆಲ್ಲಾ ಬೂತ್‌ಗಳು ತಾಯಿಬೇರು ಇದ್ದಹಾಗೆ. ನಮ್ಮ ಪಕ್ಷದಲ್ಲಿ ದೇವದುರ್ಲಭ ಕಾರ್ಯಕರ್ತರಿದ್ದಾರೆ. ಅನೇಕ ಬಾರಿ ನಮ್ಮ ಗೆಲುವಿಗೆ ಕಾರಣರಾಗಿದ್ದಾರೆ. ಹಿರಿಯರು ಕಂಡ ಕನಸನ್ನು ನನಸು ಮಾಡಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ಧರಾಮಣ್ಣ, ಪ್ರಮುಖರಾದ ಎಸ್.ಜ್ಞಾನೇಶ್ವರ್, ಸೂಡಾ ಮಾಜಿ ಅಧ್ಯಕ್ಷ ನಾಗರಾಜ್, ಪ್ರಮುಖರಾದ ಮಂಜುನಾಥ್, ದೀನದಯಾಳು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net