

ನವದೆಹಲಿ: ಕೊವಿಡ್-19 ಸೋಂಕು ಸ್ಥಳೀಯ ಉತ್ಪನ್ನಗಳ ಮಹತ್ವ ತಿಳಿಸಿದೆ ಎಂದು ಮೇ 12ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದರು.
ಅಷ್ಟೇ ಅಲ್ಲ, ಕೊವಿಡ್ ಪ್ರಾರಂಭವಾದಾಗ ಭಾರತದಲ್ಲಿ ಒಂದೇ ಒಂದು ಪಿಪಿಇ ಕಿಟ್ (ವೈಯಕ್ತಿಕ ರಕ್ಷಣಾ ಸಲಕರಣೆ) ಗಳು ತಯಾರಾಗುತ್ತಿರಲಿಲ್ಲ. ಇದೀಗ ದಿನವೊಂದಕ್ಕೆ 2 ಲಕ್ಷಕ್ಕೂ ಅಧಿಕ ಪಿಪಿಇ ಕಿಟ್ಗಳು ಭಾರತದಲ್ಲಿ ಸಿದ್ಧಗೊಳ್ಳುತ್ತಿವೆ. ಇದು ಹೆಮ್ಮೆಯ ವಿಷಯ ಎಂದು ಹೇಳಿದ್ದರು.
ಭಾರತದಲ್ಲಿ ಕೊವಿಡ್ ವಾರಿಯರ್ಸ್ಗೆ ಅಗತ್ಯವಾಗಿರುವ ವೈಯಕ್ತಿಕ ರಕ್ಷಣಾ ಸಲಕರಣೆಗಳು ಈಗ ದಿನವೊಂದಕ್ಕೆ 4.5 ಲಕ್ಷದಷ್ಟು ತಯಾರಾಗುತ್ತಿವೆ. ಎರಡೇ ವಾರದಲ್ಲಿ ಪಿಪಿಇ ಕಿಟ್ಗಳ ತಯಾರಿಕೆ ಸಂಖ್ಯೆ ದ್ವಿಗುಣಗೊಂಡಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಟ್ವಿಟರ್ನಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.
ದೇಶದಲ್ಲಿ ಈಗ 600ಕ್ಕೂ ಹೆಚ್ಚು ಕಂಪನಿಗಳು ಪಿಪಿಇ ಕಿಟ್ ತಯಾರಿಕೆಗೆ ಪ್ರಮಾಣೀಕರಿಸಲ್ಪಟ್ಟಿವೆ. ದಿನವೊಂದಕ್ಕೆ 4.5ಲಕ್ಷ ವೈಯಕ್ತಿಕ ರಕ್ಷಣಾ ಸಲಕರಣೆಗಳು ಉತ್ಪಾದನೆಯಾಗುತ್ತವೆ. ಕೊವಿಡ್-19 ಭಾರತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಒಂದೇ ಒಂದು ಕಿಟ್ ಕೂಡ ತಯಾರಾಗುತ್ತಿರಲಿಲ್ಲ. ಮೇ 5ರ ಹೊತ್ತಿಗೆ ದಿನಕ್ಕೆ 2.06 ಲಕ್ಷ ಪಿಪಿಇ ಕಿಟ್ಗಳು ಸಿದ್ಧವಾಗುತ್ತಿದ್ದವು ಎಂದು ತಿಳಿಸಿದ್ದಾರೆ.
ಕರೊನಾ ಕಾಲಿಡುವುದಕ್ಕೂ ಮೊದಲು ಪಿಪಿಇ ಕಿಟ್ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಕೊವಿಡ್-19 ಶುರುವಾಗಿ ಎರಡೇ ತಿಂಗಳಲ್ಲಿ ದಿನವೊಂದಕ್ಕೆ 4 ಲಕ್ಷಕ್ಕೂ ಅಧಿಕ ಪಿಪಿಇ ಕಿಟ್ಗಳು ಉತ್ಪಾದನೆಯಾಗುತ್ತಿದೆ.
ಮಾಸ್ಕ್, ಕಣ್ಣು ರಕ್ಷಣಾ ಕವಚ, ಶೂ ಕವರ್, ಗೌನ್ ಮತ್ತು ಕೈಗವಸುಗಳನ್ನು ಪಿಪಿಇ ಕಿಟ್ ಒಳಗೊಂಡಿರುತ್ತದೆ. ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಆರೋಗ್ಯ ಕಾರ್ಯಕರ್ತರಿಗೆ ಇದು ಬೇಕೇಬೇಕು. ಇಲ್ಲದಿದ್ದರೆ ಸೋಂಕು ತಗುಲುವ ಸಾಧ್ಯತೆ ಅತಿ ಹೆಚ್ಚಾಗಿ ಇರುತ್ತದೆ.
ಎರಡು ವಾರಗಳ ಹಿಂದೆ ಕೇವಲ 52 ಕಂಪನಿಗಳು ಪಿಪಿಇ ಕಿಟ್ ತಯಾರಿಸುತ್ತಿದ್ದವು. ಅದೀಗ 600ಕ್ಕೆ ಏರಿದೆ. (ಏಜೆನ್ಸೀಸ್)
ಇದನ್ನೂ ಓದಿ: ಉಡುಪಿ ಐವರಲ್ಲಿ ಕರೊನಾ ಪಾಸಿಟಿವ್