ಇಂದಿನಿಂದ ಲಸಿಕೆ ಪರ್ವ: ಜಗತ್ತಿನ ಅತಿದೊಡ್ಡ ಚಿಕಿತ್ಸಾ ಅಭಿಯಾನಕ್ಕೆ ಸನ್ನದ್ಧವಾದ ಭಾರತ

Front 1
Published on

ನವದೆಹಲಿ: ಕರೊನಾ ಮಹಾಮಾರಿ ವಿರುದ್ಧದ ಜಗತ್ತಿನ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಭಾರತ ಸಜ್ಜಾಗಿದ್ದು, ಶನಿವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಮೊದಲ ದಿನ ದೇಶಾದ್ಯಂತ 3,000ಕ್ಕೂ ಅಧಿಕ ಕೇಂದ್ರಗಳಲ್ಲಿ 3 ಲಕ್ಷ ಜನರಿಗೆ ಲಸಿಕೆ ನಿಡುವ ಗುರಿ ಹಮ್ಮಿಕೊಳ್ಳಲಾಗಿದೆ. ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ತುರ್ತು ಬಳಕೆಗೆ ಭಾರತದ ಔಷಧಗಳ ಮಹಾ ನಿಯಂತ್ರಕರಿಂದ (ಡಿಸಿಜಿಐ) ಈ ತಿಂಗಳ ಆರಂಭದಲ್ಲಿ ಅನುಮೋದನೆ ಸಿಕ್ಕಿತ್ತು. ಉಭಯ ಲಸಿಕೆಗಳ 1.65 ಕೋಟಿ ಡೋಸ್​ಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈಗಾಗಲೇ ರವಾನಿಸಲಾಗಿದ್ದು, ಸುಗಮ ಲಸಿಕೀಕರಣಕ್ಕಾಗಿ ಲಸಿಕೆ ಪ್ರಕ್ರಿಯೆಯ ತಾಲೀಮನ್ನೂ (ಡ್ರೖೆ ರನ್) ನಡೆಸಲಾಗಿದೆ.

ಇದು ತಿಳಿದಿರಲಿ: ಒಟ್ಟು ಎರಡು ಡೋಸ್ ಲಸಿಕೆ ನಿಡಲಾಗುತ್ತದೆ. ಒಮ್ಮೆ ತೆಗೆದುಕೊಂಡ ಲಸಿಕೆಯನ್ನೇ ಇನ್ನೊಮ್ಮೆ ತೆಗೆದುಕೊಳ್ಳಬೇಕು. ಮೊದಲ ಡೋಸ್ ಕೊವ್ಯಾಕ್ಸಿನ್ ಆದರೆ ಎರಡನೇ ಡೋಸ್ ಕೂಡ ಅದೇ ಆಗಬೇಕು. ಕೋವಿಶೀಲ್ಡ್​ಗೂ ಇದು ಅನ್ವಯಿಸುತ್ತದೆ.

ಮುನ್ನೆಚ್ಚರಿಕೆಗಳು: ಕೇಂದ್ರ ಆರೋಗ್ಯ ಸಚಿವಾಲಯ ಲಸಿಕೀಕರಣಕ್ಕೆ ಸಂಬಂಧಿಸಿದ ಮುನ್ನೆಚ್ಚರಿಕೆ ಕ್ರಮಗಳನ್ನು ಪ್ರಕಟಿಸಿದೆ.

ಆ್ಯಪ್​ ಬಿಡುಗಡೆ?: ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಲಸಿಕೆ ಪಡೆಯಲಿರುವ ಕೆಲವು ಆರೋಗ್ಯ ಕಾರ್ಯಕರ್ತರ ಜತೆ ವಿಡಿಯೋ ಸಂವಾದ ನಡೆಸುವ ಸಾಧ್ಯತೆ ಇದೆ. ಹಾಗೆಯೇ ಕೋವಿನ್ ಆಪ್ ಅನ್ನೂ ಅವರು ಬಿಡುಗಡೆ ಮಾಡಬಹುದೆನ್ನಲಾಗಿದೆ. ಈ ಆ್ಯಪ್​ ಲಸಿಕೆ ಕುರಿತ ಮಾಹಿತಿ, ನೋಂದಣಿ, ವಿತರಣೆ ಹಾಗೂ ಟ್ರಾ್ಯಕಿಂಗ್ ಸಹಿತ ವಿವಿಧ ಪ್ರಯೋಜನ ಒದಗಿಸಲಿದೆ.

ಯಾರು ಪಡೆಯಬಾರದು?: ಗರ್ಭಿಣಿಯರು ಮತ್ತು ಬಾಣಂತಿಯರು ಲಸಿಕೆ ಪಡೆಯಬಾರದು. ಯಾಕೆಂದರೆ ಈ ಎರಡೂ ವಿಭಾಗಗಳ ಮೇಲೆ ಕ್ಲಿನಿಕಲ್ ಪರೀಕ್ಷೆ ನಡೆಸಿಲ್ಲ.

ಲಘು ಪರಿಣಾಮ ಸಂಭವ

  • ಕೊವ್ಯಾಕ್ಸಿನ್ -ಇಂಜೆಕ್ಷನ್ ಚುಚ್ಚಿದ ಜಾಗದಲ್ಲಿ ಮೃದುತ್ವ, ನೋವು, ತಲೆನೋವು, ಆಯಾಸ, ವಾಕರಿಕೆ, ಚಳಿ, ಸ್ನಾಯುನೋವು, ಜ್ವರ, ಕೀಲುನೋವು ಬರಬಹುದು.
  • ಕೋವಿಶೀಲ್ಡ್ -ಇಂಜೆಕ್ಷನ್ ಜಾಗದಲ್ಲಿ ನೋವು, ತಲೆನೋವು, ಆಯಾಸ, ಜ್ವರ, ಹೊಟ್ಟೆನೋವು, ನಡುಕ, ವಾಕರಿಕೆ, ಮಂಪರು, ತಲೆ ಸುತ್ತುವಿಕೆ. ಕೆಮ್ಮು, ಬೆವರುವಿಕೆ ಆಗಬಹುದು.

ಮುಖ್ಯಾಂಶಗಳು

  • ಬೆಳಗ್ಗೆ 10.30ಕ್ಕೆ ವಿಡಿಯೋ ಕಾನ್ಪರೆನ್ಸ್ ಮೂಲಕ ಪ್ರಧಾನಿಯವರಿಂದ ಚಾಲನೆ
  • ದೇಶಾದ್ಯಂತ 3006 ಕೇಂದ್ರಗಳಲ್ಲಿ ಲಸಿಕೆ ನೀಡಿಕೆ
  • ಪ್ರತಿ ಕೇಂದ್ರದಲ್ಲಿ ಪ್ರತಿ ದಿನ 100 ಜನರು ಗುರಿ
  • ಮೊದಲ ಹಂತದಲ್ಲಿ ಒಟ್ಟು 3 ಕೋಟಿ ಆರೋಗ್ಯ ಸೇವಾ ಸಿಬ್ಬಂದಿ ಹಾಗೂ ಮುಂಚೂಣಿ ಕರೊನಾ ವಾರಿಯರ್​ಗಳ ಸಹಿತ 30 ಕೋಟಿ ಜನರಿಗೆ ಲಸಿಕೆ ನೀಡುವ ಯೋಜನೆ.
  • 3 ಕೋಟಿ ಕರೊನಾ ವಾರಿಯರ್​ಗಳ ಲಸಿಕೆ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ

ರಾಜ್ಯದಲ್ಲಿ 243 ಸ್ಥಳ ನಿಗದಿ

ಬೆಂಗಳೂರು: ಬೆಂಗಳೂರಿನ 10 ಕಡೆ ಸೇರಿ ರಾಜ್ಯಾದ್ಯಂತ 243 ಸ್ಥಳಗಳಲ್ಲಿ ಶನಿವಾರ ಕರೊನಾ ಲಸಿಕೆ ನೀಡಲಾಗುವುದೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಕರೊನಾ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಶುಕ್ರವಾರ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಆರೋಗ್ಯಾ ಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರು ಲಸಿಕೆ ವಿತರಣೆಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ 10 ಸ್ಥಳಗಳ ಪೈಕಿ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲೂ ನೀಡಲಾಗುವುದು ಎಂದರು. ಕೋವಿಶೀಲ್ಡ್ ಲಸಿಕೆಯನ್ನು ರಾಜ್ಯದ 237 ಕೇಂದ್ರ ಹಾಗೂ ಕೊವ್ಯಾಕ್ಸಿನ್ ಲಸಿಕೆಯನ್ನು ಬಳ್ಳಾರಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ದಾವಣಗೆರೆ ಕೇಂದ್ರಗಳಲ್ಲಿ ನೀಡಲಾಗುವುದೆಂದರು.

ವಾರಿಯರ್ಸ್​ಗೆ ಪ್ರಾಶಸ್ತ್ಯ: ಲಸಿಕೆ ನೀಡಲು ಮೊದಲಿಗೆ ಜನಪ್ರತಿನಿಧಿಗಳನ್ನೇ ಆರಿಸಬಹುದಿತ್ತು. ಆದರೆ, ಕರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವವರಿಗೆ ಮೊದಲ ಪ್ರಾಶಸ್ತ್ಯದಲ್ಲಿ ಲಸಿಕೆ ನೀಡಲಾಗುತ್ತಿದೆ. ಬಳಿಕ ಇತರೆ ರೋಗಗಳಿಂದ ಬಳಲುವವರಿಗೆ ಲಸಿಕೆ ನೀಡಲಾಗುವುದು ಎಂದರು.

ಮೊದಲ ದಿನ 24,300 ಮಂದಿಗೆ ಲಸಿಕೆ: ಮೊದಲ ಹಂತದಲ್ಲಿ 7,17,439 ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ಮೊದಲ ದಿನ 24,300 ಮಂದಿಗೆ ನೀಡುವ ಗುರಿ ಇದೆ. ನಮ್ಮಲ್ಲಿ ಒಟ್ಟು 8,14,500 ಡೋಸ್ ಲಸಿಕೆ ಲಭ್ಯವಿದ್ದು, ವಾರದೊಳಗೆ ಮೊದಲ ಹಂತದ ವಿತರಣೆ ಪ್ರಕ್ರಿಯೆ ಮುಗಿಯುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಸರ್ಕಾರಿ ಮಾಹಿತಿ ಮಾತ್ರ ನಂಬಿ: ಲಸಿಕೆಯಿಂದ ಅಡ್ಡಪರಿಣಾಮ ಉಂಟಾದರೆ, ಸ್ಥಳದಲ್ಲೇ ತುರ್ತು ಚಿಕಿತ್ಸೆ ವ್ಯವಸ್ಥೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡಿ ಜನಸಾಮಾನ್ಯರನ್ನು ತಪ್ಪುದಾರಿಗೆ ಎಳೆಯಲಾಗುತ್ತಿದೆ. ಸರ್ಕಾರದ ಸಾಮಾಜಿಕ ಜಾಲತಾಣಗಳಿಂದ ಬಿಡುಗಡೆ ಮಾಡುವ ಮಾಹಿತಿ ಮಾತ್ರ ಅಧಿಕೃತ ಹಾಗೂ ಸತ್ಯ ಎಂದು ಸಚಿವ ಸುಧಾಕರ್ ಸ್ಪಷ್ಟಪಡಿಸಿದರು.

  • ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿ, ಪೊಲೀಸರು, ಪೌರಕಾರ್ವಿುಕರು ಹೆಸರು ನೋಂದಾಯಿಸಿಕೊಂಡಿದ್ದಾರೆ.
  • ಮೊದಲ ಡೋಸ್ ಪಡೆದ 28 ದಿನಗಳ ನಂತರ 2ನೇ ಡೋಸ್ ನೀಡಲಾಗುತ್ತದೆ. ಜನರು ಯಾವುದೇ ಆತಂಕವಿಲ್ಲದೆ ವಿಶ್ವಾಸದಿಂದ ಲಸಿಕೆ ಪಡೆಯಿರಿ.
  • ರಾಜ್ಯದಲ್ಲಿ 10 ವಾಕ್-ಇನ್ ಕೂಲರ್, 4 ವಾಕ್-ಇನ್ ಫ್ರೀಜರ್, 3,210 ಐಎಲ್​ಆರ್, 3,312 ಕೋಲ್ಡ್ ಬಾಕ್ಸ್, 46,591 ಲಸಿಕೆ ಕ್ಯಾರಿಯರ್, 2,25,749 ಐಸ್ ಪ್ಯಾಕ್ ಇದೆ.

ಲಸಿಕೆ ತೆಗೆದುಕೊಂಡ ನಂತರ ಅಡ್ಡಪರಿಣಾಮ ಸಹಜ. ಸ್ವಲ್ಪ ಜ್ವರ ಬರುತ್ತದೆ. ಆಮೇಲೆ ಅದೇ ಸರಿಹೋಗುತ್ತದೆ. ಜನ ಆತಂಕಕ್ಕೆ ಒಳಗಾಗಬಾರದು. ಕರೊನಾ ಲಸಿಕೆಯಿಂದ ಏನೂ ಸಮಸ್ಯೆ ಆಗುವುದಿಲ್ಲ | ಡಾ.ಸುಧಾಕರ್ ಆರೋಗ್ಯ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net